
ನವದೆಹಲಿ/ಅಯೋಧ್ಯಾ: ಅಯೋಧ್ಯೆಯಿಂದ ಜನಕಪುರಕ್ಕೆ ಸಂಪರ್ಕಿಸುತ್ತಿರುವ ಸರಯೂ-ಕಮಲಾ ಎಕ್ಸ್‌ಪ್ರೆಸ್‌ಗೆ ಸೋಮವಾರ ಚಾಲನೆ ನೀಡಲಾಗಿದೆ. ನ 604 ಕಿ.ಮೀ. ದೂರವನ್ನು ಈ ರೈಲು 19 ಗಂಟೆಗಳಲ್ಲಿ ಕ್ರಮಿಸಲಿರುವ ಈ ರೈಲಿನ ಟಿಕೆಟ್ ದರ ಎಷ್ಟು ಎಂದು ಜನರು ಸರ್ಚ್ ಮಾಡುತ್ತಿದ್ದಾರೆ. ಈ ರೈಲಿನ ಸಂಚಾರ ನ.28ರಿಂದ ಆರಂಭವಾಗಲಿದೆ. ಸ್ಲೀಪರ್, ಎಸಿ 3-ಟೈರ್, ಎಸಿ 3-ಟೈರ್ ಎಕಾನಮಿ ಮತ್ತು ಎಸಿ 2-ಟೈರ್ ಬೋಗಿಗಳ ಸೌಲಭ್ಯವಿದೆ. ಭಾರತೀಯ ರೈಲ್ವೆಯು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಈ ಹೊಸ ರೈಲಿನ ಅಧಿಕೃತ ಟಿಕೆಟ್ ದರವನ್ನು ಇನ್ನೂ ಪ್ರಕಟಿಸಬೇಕಿದೆ. ಪ್ರಸ್ತುತ ಈ ಮಾರ್ಗದ ಸಮೀಪದ ಜನಕಪುರ ರೋಡ್ ನಿಲ್ದಾಣಕ್ಕೆ ಸಂಚರಿಸುವ ಇತರ ರೈಲುಗಳಲ್ಲಿ ಸ್ಲೀಪರ್ ದರ 290-330 ರು. ಹಾಗೂ ಎಸಿ ದರಗಳು 1,780 ರು. ವರೆಗೆ ಇವೆ.
ಶ್ರೀರಾಮ ಜನ್ಮಭೂಮಿ ಅಯೋಧ್ಯೆ ಹಾಗೂ ಸೀತಾ ಜನ್ಮಭೂಮಿ ನೇಪಾಳದ ಜನಕಪುರ ಧಾಮವನ್ನು ಸಂಪರ್ಕಿಸುವ ‘ಸರಯೂ-ಕಮಲಾ ಎಕ್ಸ್‌ಪ್ರೆಸ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಸೋಮವಾರ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು.
ಭಾರತ ಪ್ರವಾಸದಲ್ಲಿರುವ ಬಾಲೇಂದ್ರ ಶಾ ಅವರು ದೆಹಲಿಯಲ್ಲಿ ಮಾತನಾಡಿ, ‘ಶ್ರೀರಾಮ ಮತ್ತು ಮಾತಾ ಜಾನಕಿಯ ಪವಿತ್ರ ಯುಗದಿಂದಲೂ ಭಾರತ ಮತ್ತು ನೇಪಾಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧ ಹೊಂದಿವೆ. ಇಂದು ಆರಂಭವಾಗಿರುವ ಈ ರೈಲು ಸಂಪರ್ಕವು ಉಭಯ ದೇಶಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ’ ಎಂದು ಆಶಯ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಮಾತನಾಡಿ, ‘ಭಾರತ-ನೇಪಾಳ ಸಂಬಂಧವು ಕೇವಲ ನೆರೆಹೊರೆಯವರ ಸಂಬಂಧವಲ್ಲ, ಅದು ಮುರಿಯಲಾಗದ ನಂಬಿಕೆ ಮತ್ತು ಸ್ನೇಹದ ಪ್ರತೀಕವಾಗಿದೆ’ ಎಂದು ಬಣ್ಣಿಸಿದರು.
ಅಯೋಧ್ಯೆ ಕ್ಯಾಂಟ್ ಮತ್ತು ಜನಕಪುರ ಧಾಮದ ನಡುವಿನ 604 ಕಿ.ಮೀ. ದೂರವನ್ನು ಈ ರೈಲು 19 ಗಂಟೆಗಳಲ್ಲಿ ಕ್ರಮಿಸಲಿದೆ. ಪ್ರತಿ ಸೋಮವಾರ ಸಂಜೆ 5.50ಕ್ಕೆ ಅಯೋಧ್ಯೆ ಕ್ಯಾಂಟ್‌ನಿಂದ ಹೊರಟು ಮಂಗಳವಾರ ಮಧ್ಯಾಹ್ನ 12.40ಕ್ಕೆ (ನೇಪಾಳ ಕಾಲಮಾನ) ಜನಕಪುರ ಧಾಮ ತಲುಪಲಿದೆ. ಮಾರ್ಗಮಧ್ಯೆ ಮಂಕಾಪುರ, ಬಸ್ತಿ, ಗೋರಖ್‌ಪುರ, ನರ್ಕಟಿಯಾಗಂಜ್, ರಕ್ಸಾಲ್, ಸೀತಾಮಢಿ, ಶಿಶೋ, ಮಧುಬನಿ ಮತ್ತು ಜಯನಗರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಮರುಪ್ರಯಾಣದಲ್ಲಿ ಪ್ರತಿ ಶನಿವಾರ ಮಧ್ಯಾಹ್ನ 1.10ಕ್ಕೆ ಜನಕಪುರ ಧಾಮದಿಂದ ಹೊರಟು, ಭಾನುವಾರ ಬೆಳಿಗ್ಗೆ 8.10ಕ್ಕೆ ಅಯೋಧ್ಯೆ ಕ್ಯಾಂಟ್ ತಲುಪಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ