
ರಾಂಚಿ: ತಾನು ಪ್ರಯಾಣಿಸಬೇಕಿದ್ದ ರೈಲು 8 ಗಂಟೆ 48 ನಿಮಿಷ ತಡವಾಗಿ ಸಂಚರಿಸಿದ್ದರಿಂದ ಮಾನಸಿಕ, ಆರ್ಥಿಕ ಕಿರುಕಳ ಉಂಟಾಗಿದೆ ಎಂದು ದೂರಿದ್ದ ಪ್ರಯಾಣಿಕಗೆ 35,000 ರು. ಪರಿಹಾರ ನೀಡುವಂತೆ ಜಾರ್ಖಂಡ್ ಜಿಲ್ಲಾ ಗ್ರಾಹಕ ಆಯೋಗವು ರೈಲ್ವೆ ಇಲಾಖೆಗೆ ನಿರ್ದೇಶಿಸಿದೆ. ಈ ಮಹತ್ವದ ತೀರ್ಪನ್ನು 2026ರ ಸೆಪ್ಟೆಂಬರ್ 2 ರಂದು ಅಂಗೀಕರಿಸಲಾಗಿದೆ. 2024ರ ಸೆ.23 ರಂದು ಟಾಟಾ ನಗರದಿಂದ ಸಂಬಲ್ಪುರಕ್ಕೆ ಹೊರಟಿದ್ದ ಇಸ್ಪಾತ್ ಎಕ್ಸ್‌ಪ್ರೆಸ್ ರೈಲು ನಿಗದಿತ ಸಮಯಕ್ಕಿಂತ ಬರೋಬ್ಬರಿ 8 ಗಂಟೆ 48 ನಿಮಿಷ ತಡವಾಗಿ ಸಂಚರಿಸಿತ್ತು. ಇದರಿಂದ ದೈಹಿಕ, ಮಾನಸಿಕ, ಆರ್ಥಿಕ ಕಿರುಕುಳ ಉಂಟಾಗಿದೆ ಎಂದು ಅದೇ ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕ ಸಂಜಯ್ ಕುಮಾರ್ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ಮಾತ್ರಲ್ಲದೇ 4.5 ಲಕ್ಷ ರು. ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದರು. ಇದರ ಜತೆಗೆ ತಮ್ಮ ರೈಲ್ವೆ ಟಿಕೆಟ್‌ನ್ನು ಪುರಾವೆಯಾಗಿ ನೀಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಆಯೋಗ, ‘ವಿಳಂಬಕ್ಕೆ ಸಕಾರಣ ನೀಡುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ. ಕುಮಾರ್ ಪರಿಹಾರಕ್ಕೆ ಅರ್ಹರು ಅರ್ಹರು’ ಎಂದು ಪರಿಗಣಿಸಿ 30,000 ರು. ಪರಿಹಾರ ಮೊತ್ತ ಮತ್ತು 5,000 ರು. ಮೊಕದ್ದಮೆ ವೆಚ್ಚ ನೀಡುವಂತೆ ರೈಲ್ವೆ ಇಲಾಖೆಗೆ ಆದೇಶಿಸಿದೆ. 45 ದಿನಗ ಒಳಗೆ ಈ ಹಣವನ್ನು ಪಾವತಿಸಬೇಕೆಂದು ಹೇಳಿದೆ. ಒಂದು ವೇಳೆ ನಿಗದಿತ 45 ದಿನಗಳ ಅವಧಿಯಲ್ಲಿ ಹಣ ಪಾವತಿಸದಿದ್ದರೆ, ಆದೇಶದ ದಿನಾಂಕದಿಂದ ಹಣ ಪಾವತಿಯಾಗುವವರೆಗೂ ಮೊತ್ತದ ಮೇಲೆ ವಾರ್ಷಿಕ ಶೇ. 12 ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ತನ್ನ ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದೆ.
ಆಯೋಗದ ಆದೇಶದಲ್ಲಿ ವಿವರಿಸಿರುವಂತೆ, ದೂರುದಾರ ಸಂಜಯ್ ಕುಮಾರ್ ಅವರು 2024ರ ಸೆಪ್ಟೆಂಬರ್ 23 ರಂದು ಟಾಟಾನಗರದಿಂದ ಸಂಬಲ್‌ಪುರಕ್ಕೆ ಪ್ರಯಾಣಿಸಲು 'ಇಸ್ಪಾತ್ ಎಕ್ಸ್‌ಪ್ರೆಸ್' ರೈಲಿನಲ್ಲಿ ಎರಡು ಸ್ಲೀಪರ್-ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು. ನಿಗದಿತ ವೇಳಾಪಟ್ಟಿಯಂತೆ ರೈಲು ಬೆಳಿಗ್ಗೆ 10:15 ಕ್ಕೆ ಟಾಟಾನಗರದಿಂದ ಹೊರಟು, ಮಧ್ಯಾಹ್ನ 3:50 ಕ್ಕೆ ಸಂಬಲ್‌ಪುರ ತಲುಪಬೇಕಿತ್ತು.
ಆದರೆ, ರೈಲು ನಿಗದಿತ ಸಮಯಕ್ಕಿಂತ ಬರೋಬ್ಬರಿ 528 ನಿಮಿಷಗಳು (8 ಗಂಟೆ 48 ನಿಮಿಷ) ವಿಳಂಬವಾಗಿ ತಲುಪಿತು. ಈ ಸುದೀರ್ಘ ವಿಳಂಬದಿಂದಾಗಿ ತನಗೆ ತೀವ್ರ ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಂಕಟ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರ್, ₹4.5 ಲಕ್ಷ ಪರಿಹಾರ ಕೋರಿ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದರು. ದೂರಿಗೆ ಪುರಾವೆಯಾಗಿ ತಮ್ಮ ಪ್ರಯಾಣದ ಟಿಕೆಟ್ ಹಾಗೂ ರೈಲ್ವೆ ಇಲಾಖೆಗೆ ಕಳುಹಿಸಿದ್ದ ಕಾನೂನು ನೋಟಿಸ್ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಿದರು.
ದೂರನ್ನು ಸಂಪೂರ್ಣವಾಗಿ ನಿರಾಕರಿಸಿದ ರೈಲ್ವೆ ಇಲಾಖೆಯು, ಆಯೋಗದ ನ್ಯಾಯವ್ಯಾಪ್ತಿಯನ್ನೇ ಪ್ರಶ್ನಿಸಿತು. ಈ ಪ್ರಕರಣವು 'ರೈಲ್ವೆ ಹಕ್ಕು ನ್ಯಾಯಮಂಡಳಿ ಕಾಯ್ದೆ'ಯ (Railway Claims Tribunal Act) ಅಡಿಯಲ್ಲಿ ಬರುತ್ತದೆ ಹೊರತು ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿತು. ಅಷ್ಟೇ ಅಲ್ಲದೆ, ಐಆರ್‌ಸಿಟಿಸಿ (IRCTC) ಮತ್ತು ಖರಗ್‌ಪುರ ವಿಭಾಗವನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿಲ್ಲ ಹಾಗೂ ದೂರುದಾರರು ಅಗತ್ಯ ನಿಬಂಧನೆಗಳನ್ನು ಪಾಲಿಸಿಲ್ಲ ಎಂದು ಸಾಬೀತುಪಡಿಸಲು ಯತ್ನಿಸಿತು. ವಿಳಂಬದಿಂದ ಉಂಟಾದ ಆರ್ಥಿಕ ನಷ್ಟಕ್ಕೆ ಯಾವುದೇ ಗಣನೀಯ ಪುರಾವೆಗಳಿಲ್ಲ ಎಂದ ರೈಲ್ವೆ, ಸೇವಾ ಲೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿತು.
ಅಧ್ಯಕ್ಷ ಸುನಿಲ್ ಕುಮಾರ್ ಸಿಂಗ್ ಹಾಗೂ ಸದಸ್ಯರಾದ ಪ್ರದೀಪ್ ಕುಮಾರ್ ಮಿಶ್ರಾ ಮತ್ತು ಸಂಜು ಶಾಹಿ ಅವರನ್ನೊಳಗೊಂಡ ಪೀಠವು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿತು. ಮೊದಲಿಗೆ ನ್ಯಾಯವ್ಯಾಪ್ತಿಯ ಕುರಿತು ರೈಲ್ವೆ ಎತ್ತಿದ್ದ ಆಕ್ಷೇಪಣೆಯನ್ನು ತಳ್ಳಿಹಾಕಿದ ಪೀಠ, ರೈಲು ವಿಳಂಬಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಪ್ರಮುಖ ತೀರ್ಪನ್ನು ಉಲ್ಲೇಖಿಸಿ, ಗ್ರಾಹಕ ಆಯೋಗಕ್ಕೆ ಈ ದೂರನ್ನು ಆಲಿಸುವ ಪೂರ್ಣ ಹಕ್ಕಿದೆ ಎಂದು ಸ್ಪಷ್ಟಪಡಿಸಿತು.
ರೈಲು ವಿಳಂಬವಾಗಲು ತನ್ನ ನಿಯಂತ್ರಣ ಮೀರಿದ ಕಾರಣಗಳಿದ್ದವು ಎಂಬುದನ್ನು ಸಾಬೀತುಪಡಿಸುವಲ್ಲಿ ರೈಲ್ವೆ ಇಲಾಖೆ ವಿಫಲವಾಗಿದೆ ಎಂದು ಪೀಠವು ಗಮನಿಸಿತು. ಈ ಕುರಿತು ಮಾತನಾಡಿದ ಪೀಠ, "ಪ್ರತಿಯೊಬ್ಬ ಪ್ರಯಾಣಿಕನ ಸಮಯವೂ ಅತ್ಯಂತ ಅಮೂಲ್ಯವಾದದ್ದು. ರೈಲ್ವೆ ಇಲಾಖೆಯು ಸೂಕ್ತ ಸಾಕ್ಷ್ಯಾಧಾರಗಳ ಮೂಲಕ ವಿಳಂಬಕ್ಕೆ ಸಮರ್ಥನೀಯ ಕಾರಣಗಳನ್ನು ನೀಡದ ಹೊರತು ಅಥವಾ ವಿಳಂಬವು ತನ್ನ ನಿಯಂತ್ರಣಕ್ಕೆ ಮೀರಿದ್ದು ಎಂದು ನಿರೂಪಿಸದ ಹೊರತು ಸೇವಾ ಲೋಪದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ" ಎಂಬ ಸುಪ್ರೀಂ ಕೋರ್ಟ್ ತತ್ವವನ್ನು ಪುನರುಚ್ಚರಿಸಿತು. ಸಲ್ಲಿಕೆಯಾದ ಟಿಕೆಟ್ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಆಯೋಗವು, ಪ್ರಯಾಣಿಕ ಸಂಜಯ್ ಕುಮಾರ್ ಅವರು ತಮಗಾದ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಕಿರುಕುಳವನ್ನು ಬಲವಾದ ಪುರಾವೆಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಹೇಳಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ