ಭಾರತೀಯ ರೈಲ್ವೆ ವೇಯ್ಟಿಂಗ್ ಲಿಸ್ಟ್ ಸಮಸ್ಯೆ, ಬರೋಬ್ಬರಿ 3.39 ಕೋಟಿ ಪ್ರಯಾಣಿಕರು ಪ್ರಯಾಣ ವಂಚಿತ!

Published : May 10, 2026, 07:06 PM IST
Indian Railways

ಸಾರಾಂಶ

2025-26ನೇ ಹಣಕಾಸು ವರ್ಷದಲ್ಲಿ, ವೇಯ್ಟಿಂಗ್ ಲಿಸ್ಟ್ ಟಿಕೆಟ್‌ಗಳು ರದ್ದಾದ ಕಾರಣ 3.39 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣದಿಂದ ವಂಚಿತರಾಗಿದ್ದಾರೆ ಎಂದು ಆರ್‌ಟಿಐ ವರದಿಯು ಬಹಿರಂಗಪಡಿಸಿದೆ. ಸ್ಲೀಪರ್ ಮತ್ತು 3 ಎಸಿ ಕ್ಲಾಸ್‌ಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಕಷ್ಟ ಹೆಚ್ಚುತ್ತಿರುವುದು ಭಾರತೀಯ ರೈಲ್ವೆಯ ಮೂಲಭೂತ ವೈಫಲ್ಯವನ್ನು ತೋರಿಸುತ್ತದೆ.

2025-26ನೇ ಹಣಕಾಸು ವರ್ಷದಲ್ಲಿ ಭಾರತದಲ್ಲಿ ರೈಲ್ವೆ ಪ್ರಯಾಣಿಕರು ಎದುರಿಸುತ್ತಿರುವ ಗಂಭೀರ ಸಮಸ್ಯೆಯೊಂದು ಆರ್‌ಟಿಐ ಮೂಲಕ ಬಹಿರಂಗವಾಗಿದೆ. ವೇಯ್ಟಿಂಗ್ ಲಿಸ್ಟ್ ಟಿಕೆಟ್‌ಗಳು ದೃಢೀಕರಿಸದೆ ಹಾಗೇ ಉಳಿದು ಸ್ವಯಂಚಾಲಿತವಾಗಿ ರದ್ದಾಗಿರುವ ಕಾರಣದಿಂದ ಒಟ್ಟು 3.39 ಕೋಟಿ ಪ್ರಯಾಣಿಕರು ತಮ್ಮ ಪ್ರಯಾಣದಿಂದ ವಂಚಿತರಾಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದರಿಂದ ಪ್ರತಿ ಕ್ಷಣಕ್ಕೂ ಒಂದಕ್ಕಿಂತ ಹೆಚ್ಚು ಪ್ರಯಾಣಿಕರು ರೈಲಿನಲ್ಲಿ ಆಸನ ಸಿಗದೆ ಪ್ರಯಾಣದ ಅವಕಾಶವನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

ನೀಮಚ್ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ರೈಲ್ವೆ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ, 2025-26ನೇ ಸಾಲಿನಲ್ಲಿ ಈ ಪ್ರಮಾಣವು ಭಾರೀ ಮಟ್ಟದಲ್ಲಿ ಏರಿಕೆಯಾಗಿದೆ. ಚಾರ್ಟ್ ಸಿದ್ಧಪಡಿಸುವ ವೇಳೆಗೆ ವೇಯ್ಟಿಂಗ್ ಲಿಸ್ಟ್ ಟಿಕೆಟ್‌ಗಳು ದೃಢೀಕರಿಸದೆ ಉಳಿದ ಹಿನ್ನೆಲೆಯಲ್ಲಿ ಅವು ಸ್ವಯಂಚಾಲಿತವಾಗಿ ರದ್ದುಗೊಂಡು ಲಕ್ಷಾಂತರ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಾಹಿತಿಯಲ್ಲಿ ವರ್ಗವಾರು ವಿವರಗಳೂ ಸೇರಿದ್ದು, ಸ್ಲೀಪರ್ ಕ್ಲಾಸ್ ಮತ್ತು 3 ಎಸಿ ವಿಭಾಗಗಳಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಲು ಸಾಧ್ಯವಾಗದೆ ವಂಚಿತರಾಗಿದ್ದಾರೆ ಅಂಶ ಬಹಿರಂಗವಾಗಿದೆ.

ಗಂಟೆಗೆ ಸುಮಾರು 3,870 ಪ್ರಯಾಣಿಕರು ಪ್ರಯಾಣದಿಂದ ವಂಚಿತ

ಈ ಸಂಖ್ಯೆಯನ್ನು ದಿನವಾರು ಮತ್ತು ಸಮಯವಾರು ಹಂಚಿಕೆ ಮಾಡಿದಾಗ ಸಮಸ್ಯೆಯ ತೀವ್ರತೆ ಇನ್ನಷ್ಟು ಹೆಚ್ಚಿದೆ. ದಿನಕ್ಕೆ ಸರಾಸರಿ 92,877 ಪ್ರಯಾಣಿಕರು, ಗಂಟೆಗೆ ಸುಮಾರು 3,870 ಪ್ರಯಾಣಿಕರು, ನಿಮಿಷಕ್ಕೆ 64 ಪ್ರಯಾಣಿಕರು ಮತ್ತು ಪ್ರತಿ ಸೆಕೆಂಡಿಗೆ ಒಂದಕ್ಕಿಂತ ಹೆಚ್ಚು ಪ್ರಯಾಣಿಕರು ರೈಲು ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ. ಇದು ಕೇವಲ ಅಂಕಿಅಂಶವಲ್ಲ ಲಕ್ಷಾಂತರ ಜನರ ದಿನನಿತ್ಯದ ಬದುಕಿನ ಮೇಲೆ ಬೀರಿರುವ ಪರಿಣಾಮವನ್ನು ಸೂಚಿಸುವ ಗಂಭೀರ ವಿಷಯವಾಗಿದೆ. ಭಾರತದಲ್ಲಿ ರೈಲುಗಳು ಕೇವಲ ಸಾರಿಗೆ ವ್ಯವಸ್ಥೆಯಲ್ಲ, ಜನಜೀವನದ ಅವಿಭಾಜ್ಯ ಅಂಗವಾಗಿದೆ. ಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು, ಕುಟುಂಬಗಳು, ಯಾತ್ರಿಕರು ಮತ್ತು ಸಣ್ಣ ವ್ಯಾಪಾರಿಗಳು ಸೇರಿದಂತೆ ಅನೇಕ ವರ್ಗದ ಜನರು ರೈಲಿನ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ದೇಶದಲ್ಲಿ ವೇಯ್ಟಿಂಗ್ ಲಿಸ್ಟ್ ಎಂಬ ಪದದ ಹಿಂದೆ ಅಡಗಿರುವ ಈ ಸಮಸ್ಯೆ ರಾಷ್ಟ್ರೀಯ ಚಲನಶೀಲತೆಯ ವೈಫಲ್ಯವನ್ನು ತೋರಿಸುತ್ತದೆ.

ವರ್ಷದಿಂದ ವರ್ಷಕ್ಕೆ ಏರುತ್ತಿರುವ ಅಂಕಿ ಅಂಶ

ದತ್ತಾಂಶವು ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಸೂಚಿಸಿದೆ. 2021-22ರಲ್ಲಿ ಸುಮಾರು 1.65 ಕೋಟಿ ಪ್ರಯಾಣಿಕರು ಕನ್ಫಮೆಷನ್ ಕೊರತೆಯಿಂದ ಪ್ರಯಾಣಿಸಲು ಸಾಧ್ಯವಾಗಲಿಲ್ಲ. 2022-23ರಲ್ಲಿ ಈ ಸಂಖ್ಯೆ 2.72 ಕೋಟಿಗೆ ಏರಿತು. 2023-24ರಲ್ಲಿ 2.96 ಕೋಟಿ, 2024-25ರಲ್ಲಿ 3.27 ಕೋಟಿ ಮತ್ತು ಇದೀಗ 2025-26ರಲ್ಲಿ 3.39 ಕೋಟಿಗೆ ತಲುಪಿದೆ. ಈ ಏರಿಕೆ ನಿರಂತರವಾಗಿ ಮುಂದುವರಿಯುತ್ತಿರುವುದರಿಂದ, ಸಮಸ್ಯೆ ಮತ್ತಷ್ಟು ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.

ಇದು ಸಾಮಾನ್ಯ ವರ್ಗದ ಪ್ರಯಾಣಿಕರ ಮೇಲೆ ಭಾರೀ ಪರಿಣಾಮ ಬೀರಿದೆ. ಸ್ಲೀಪರ್ ಕ್ಲಾಸ್ ಮಾತ್ರವೇ 1.68 ಕೋಟಿ ಪ್ರಯಾಣಿಕರನ್ನು ಬಾಧಿಸಿದ್ದು, ಇದು ಎಲ್ಲಾ ವರ್ಗಗಳಲ್ಲಿ ಅತಿ ಹೆಚ್ಚು. ಇದು ಕಡಿಮೆ ಆದಾಯದ ಜನರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ಪಟ್ಟಣದ ಕುಟುಂಬಗಳು ಹೆಚ್ಚಾಗಿ ಅವಲಂಬಿಸುವ ವಿಭಾಗವಾಗಿರುವುದರಿಂದ, ಅವರ ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರಿದೆ.

ಮುಂದಿನ ಸ್ಥಾನದಲ್ಲಿ 3 ಎಸಿ ವಿಭಾಗವಿದ್ದು, ಇಲ್ಲಿ 74.55 ಲಕ್ಷ ಪ್ರಯಾಣಿಕರು ಪ್ರಯಾಣದ ಅವಕಾಶ ಕಳೆದುಕೊಂಡಿದ್ದಾರೆ. 2 ಎಸಿ ವಿಭಾಗದಲ್ಲಿಯೂ ಗಮನಾರ್ಹ ಪ್ರಮಾಣದ ಪ್ರಯಾಣಿಕರು ಕೂಡ ವಂಚಿತರಾಗಿದ್ದಾರೆ. ಈ ಸಮಸ್ಯೆ ಈಗ ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲದೆ, ಎಲ್ಲಾ ವರ್ಗಗಳಿಗೂ ವ್ಯಾಪಿಸಿರುವುದು ಕೂಡ ದೊಡ್ಡ ವಿಚಾದದ ಸಂಗತಿಯಾಗಿದೆ

ಸ್ವಯಂ ರದ್ದಾದ ಟಿಕೆಟ್ ಕೇವಲ ಹಣ ಮರಳಿಸುವ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ . ಇದು ತಪ್ಪಿದ ಪರೀಕ್ಷೆ, ಕಳೆದುಹೋದ ಉದ್ಯೋಗದ ಅವಕಾಶ, ವಿಳಂಬವಾದ ವೈದ್ಯಕೀಯ ಚಿಕಿತ್ಸೆ, ಮಿಸ್ ಆದ ಕುಟುಂಬ ಕಾರ್ಯಕ್ರಮಗಳು ಅಥವಾ ತುರ್ತು ಪ್ರಯಾಣವನ್ನು ನೆರವೇರಿಸಲಾಗದ ಪರಿಸ್ಥಿತಿಯನ್ನು ಸೂಚಿಸುತ್ತದೆ. ಅಂದರೆ, ಇದರ ಪರಿಣಾಮ ವ್ಯಕ್ತಿಯ ಜೀವನದ ಅನೇಕ ಪ್ರಮುಖ ವಿಚಾರಗಳ ಮೇಲೆ ಬಿದ್ದಿದೆ.

ಈ ಕುರಿತು ಚಂದ್ರಶೇಖರ್ ಗೌರ್ ಅವರು ಪ್ರತಿಕ್ರಿಯೆ ನೀಡುತ್ತಾ, ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳಾದರೂ ದೃಢೀಕೃತ ರೈಲು ಟಿಕೆಟ್ ಪಡೆಯುವುದು ಅದೃಷ್ಟದ ವಿಷಯವಾಗಿರಬಾರದು. ಅದು ಮೂಲಭೂತ ಸೌಲಭ್ಯವಾಗಬೇಕು. ಭವಿಷ್ಯದ ದೊಡ್ಡ ಯೋಜನೆಗಳ ಕನಸುಗಳನ್ನು ತೋರಿಸುವ ಬದಲು, ಈಗಲೇ ಈ ಸಮಸ್ಯೆಗೆ ಸ್ಪಷ್ಟ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈಲ್ವೆ ಇಲಾಖೆ ಸಾಮಾನ್ಯವಾಗಿ ಆಧುನಿಕ ನಿಲ್ದಾಣಗಳು, ವೇಗದ ರೈಲುಗಳು, ಹೊಸ ಕಾರಿಡಾರ್‌ಗಳು ಮತ್ತು ಭವಿಷ್ಯನಿರ್ದೇಶಿತ ಮೂಲಸೌಕರ್ಯಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಮೂಲಭೂತವಾಗಿ ಕೋಟ್ಯಂತರ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದಿದ್ದರೆ, ಆಧುನೀಕರಣದ ನಿಜವಾದ ಅರ್ಥವೇನು?

ಒಟ್ಟಿನಲ್ಲಿ, ಈ ದತ್ತಾಂಶವು ಭಾರತದ ರೈಲ್ವೆ ವ್ಯವಸ್ಥೆಯಲ್ಲಿ ತಕ್ಷಣದ ಸುಧಾರಣೆಗಳ ಅಗತ್ಯವಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಸೇವೆಗಳನ್ನು ವಿಸ್ತರಿಸುವುದು, ಹೆಚ್ಚುವರಿ ರೈಲುಗಳು ಹಾಗೂ ಬೋಗಿಗಳನ್ನು ಪರಿಚಯಿಸುವುದು ಮತ್ತು ಟಿಕೆಟ್ ವ್ಯವಸ್ಥೆಯನ್ನು ಸುಧಾರಿಸುವುದು ಸೇರಿದಂತೆ ಹಲವು ಕ್ರಮಗಳನ್ನು ತಕ್ಷಣವೇ ಜಾರಿಗೆ ತರುವುದು ಅನಿವಾರ್ಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯಕ್ಷ ಪ್ರಶ್ನೆ! ವಿಜಯ್ ಜೊತೆ ಕೆವಿಎನ್‌ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ?
ವಿಜಯ್ ಸಿಎಂ ಆದ ಬೆನ್ನಲ್ಲೇ ವಿವಾದ ಶುರು, ಪ್ರಮಾಣವಚನದಲ್ಲಿ ತಮಿಳು ಗೀತೆಗೆ 3ನೇ ಸ್ಥಾನ ಆರೋಪ