Trains Cancel ಕಲ್ಲಿದ್ದಲ್ಲು ಸಮಸ್ಯೆಯಿಂದ ಇದುವರೆಗೆ 1,081 ಪ್ರಯಾಣಿಕ ರೈಲು ಸಂಚಾರ ರದ್ದು!

Published : May 05, 2022, 08:45 PM IST
Trains Cancel ಕಲ್ಲಿದ್ದಲ್ಲು ಸಮಸ್ಯೆಯಿಂದ ಇದುವರೆಗೆ 1,081 ಪ್ರಯಾಣಿಕ ರೈಲು ಸಂಚಾರ ರದ್ದು!

ಸಾರಾಂಶ

ಮೇ.8ರ ಬಳಿಕ 2 ರೈಲುಗಳು ಸಂಚಾರ ಆರಂಭ 42 ಪ್ರಯಾಣಿಕರ ರೈಲು ಸಂಚಾರ ರದ್ದು ರದ್ದಾಗಿರುವ ರೈಲುಗಳ ಒಟ್ಟ ಸಂಖ್ಯೆ 1,081

ನವದೆಹಲಿ(ಮೇ.05): ದೇಶದಲ್ಲಿ ಕಲ್ಲಿದಲ್ಲು ಪೂರೈಕೆ ಸಮಸ್ಯೆ ಎದುರಾಗಿದೆ. ಇದರಿಂದ ದೇಶದ ಹಲವು ಭಾಗದಲ್ಲಿ ವಿದ್ಯುತ್ ಕಡಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದೆ. ಇದರ ಬೆನ್ನಲ್ಲೇ ಭಾರತೀಯ ರೈಲ್ವೇ ಕೆಲ ಪ್ರಯಾಣಿಕರ ರೈಲುಗಳನ್ನು ರದ್ದು ಮಾಡಿದೆ. ಇದೀಗ ಮತ್ತೆ 42 ಪ್ರಯಾಣಿಕರ ರೈಲು ಸಂಚಾರ ರದ್ದು ಮಾಡಿದೆ. ಈ ಮೂಲಕ ಕಲ್ಲಿದಲ್ಲು ಪೂರೈಕೆ ಸಮಸ್ಯೆಯಿಂದ ಭಾರತದಲ್ಲಿ ರದ್ದಾದ ರೈಲು ಸಂಚಾರ ಸಂಖ್ಯೆ ಒಟ್ಟು 1,081ಕ್ಕೆ ಏರಿಕೆಯಾಗಿದೆ.

ಆಗ್ನೇಯ ಮಧ್ಯವಲಯದ ಒಟ್ಟು 42 ರೈಲುಗಳನ್ನು ಭಾರತೀಯ ರೈಲ್ವೇ ರದ್ದು ಮಾಡಿದೆ. ಇದರಲ್ಲಿ ಎರಡು ರೈಲುಗಳು ಮೇ8ರ ಬಳಿ ಸಂಚಾರ ಆರಂಭಿಸಲಿದೆ. ಇನ್ನುಳಿದ 40 ರೈಲು ಸಂಚಾರವನ್ನು ಮೇ.24ರ ವರೆಗೆ ರದ್ದು ಮಾಡಲಾಗಿದೆ. ಈ ಬಾರಿ ರದ್ದುಪಡಿಸಿದ ರೈಲು ಸಂಚಾರದಲ್ಲಿ ಆಗ್ನೇಯ ಮಧ್ಯವಲಯದ 34 ರೈಲುಗಳಿದ್ದರೆ, ಉತ್ತರ ರೈಲ್ವೇ ವಲಯದ 8 ರೈಲುಗಳಿವೆ. ಇದರಲ್ಲಿ ಎರಡನ್ನು ಮೇ.8ರೊಳಗೆ ಮತ್ತೆ ಸಂಚಾರ ಆರಂಭಿಸಲಾಗುತ್ತದೆ.

Power crisis ದೇಶದಲ್ಲಿ ವಿದ್ಯುತ್ ಕಡಿತ ಸಮಸ್ಯೆ ತೀವ್ರ, 650 ರೈಲು ಸಂಚಾರ ರದ್ದು!

ದೇಶಾದ್ಯಂತ ಇರುವ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ವೇಗವಾಗಿ ಕಡಿಮೆಯಾಗುತ್ತಿದೆ. ಹಾಗಾಗಿ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಸಾಗಣೆಯ ಸಮಯವನ್ನು ಉಳಿತಾಯ ಮಾಡಲು ಹೆಚ್ಚುವರಿ ರೈಲುಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ರೈಲುಗಳನ್ನು ರದ್ದುಗೊಳಿಸಿರುವ ಕ್ರಮವು ತಾತ್ಕಾಲಿಕವಾಗಿದ್ದು, ಪರಿಸ್ಥಿತಿ ಹತೋಟಿಗೆ ಬಂದ ಕೂಡಲೇ ಈ ಹಿಂದಿನಂತೆ ಪ್ಯಾಸೆಂಜರ್‌ ರೈಲುಗಳನ್ನು ಆರಂಭಿಸಲಾಗುವುದು ಎಂದು ಭಾರತೀಯ ರೈಲ್ವೇಯ ಕಾರ್ಯನಿರ್ವಾಹಕ ನಿರ್ದೇಶಕ ಗೌರವ್‌ ಕೃಷ್ಣ ಬನ್ಸಲ್‌ ಹೇಳಿದ್ದಾರೆ.

ಮೋದಿ ಹೈ ತೋ ಮುಮ್ಕಿನ್‌ ಹೈ- ಚಿದು ವ್ಯಂಗ್ಯ:
ದೇಶಾದ್ಯಂತ ಉಂಟಾಗಿರುವ ವಿದ್ಯುತ್‌ ಕೊರತೆಯ ಕುರಿತಾಗಿ ಹಿರಿಯ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.‘ಪ್ಯಾಸೆಂಜರ್‌ ರೈಲುಗಳನ್ನು ರದ್ದು ಮಾಡಿ, ಕಲ್ಲಿದ್ದಲು ರೈಲುಗಳನ್ನು ಓಡಿಸುವ ಸರಿಯಾದ ಪರಿಹಾರವನ್ನು ಸರ್ಕಾರ ಕಂಡುಕೊಂಡಿದೆ. ‘ಮೋದಿ ಹೈ ತೋ ಮುಮ್ಕಿನ್‌ ಹೈ’ (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂದು ವ್ಯಂಗವಾಡಿದ್ದಾರೆ.ದೇಶದಲ್ಲಿ ಅತಿ ದೊಡ್ಡ ಕಲ್ಲಿದ್ದಲು, ರೈಲ್ವೇ ಜಾಲಗಳಿದ್ದರೂ ಕೊರತೆ ಉಂಟಾಗಿದೆ. ಇದಕ್ಕೆ ಮೋದಿ ಸರ್ಕಾರವನ್ನು ದೂಷಿಸಲಾಗುವುದಿಲ್ಲ. ಇದಕ್ಕೆಲ್ಲಾ ನೆಹರು ಸರ್ಕಾರ ಕಾರಣವಿರಬಹುದು ಎಂದು ಚಾಟಿ ಬೀಸಿದ್ದಾರೆ.

ಕಲ್ಲಿದ್ದಲು ಕೊರತೆಯಿಲ್ಲ: ಜೋಶಿ
ದೇಶದಲ್ಲಿ ಕಲ್ಲಿದ್ದಲು ಸಮಸ್ಯೆಯಾಗಲ್ಲ. 10 ದಿನಗಳಿಗಾಗುವಷ್ಟುಕಲ್ಲಿದ್ದಲು ದಾಸ್ತಾನಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದ ಥರ್ಮಲ್‌ ಪವರ್‌ ಪ್ಲಾಂಟ್‌ಗಳಲ್ಲಿ 21.55 ಮಿಲಿಯನ್‌ ಟನ್‌ ಕಲ್ಲಿದ್ದಲು ದಾಸ್ತಾನಿದೆ. ಕೋಲ್‌ ಕಂಪನಿಗಳಲ್ಲಿ 72.05 ಮಿಲಿಯನ್‌ ಟನ್‌ ಕಲ್ಲಿದ್ದಲು ಸಂಗ್ರಹವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದರು.

ರೈಲು ಚಾಲಕನ ಎಣ್ಣೆಯ ಕರಾಮತ್ತು: ಒಂದು ಗಂಟೆ ವಿಳಂಬವಾಗಿ ಹೊರಟ ರೈಲು

ಈ ತಿಂಗಳು ಅನಿರೀಕ್ಷಿತವಾಗಿ ಬಿಸಿಲು ಹೆಚ್ಚಿದ್ದು, ವಿದ್ಯುತ್‌ಗೆ ಅತಿ ಹೆಚ್ಚು ಬೇಡಿಕೆ ಉಂಟಾಗಿದೆ. ದೇಶದ ಕೈಗಾರಿಕೆಗಳು ಸಹ ಪುಟಿದೆದ್ದಿವೆ. ಹೀಗಾಗಿ ಒಮ್ಮೇಲೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಿದೆ. ದೂರದೂರದ ಪವರ್‌ ಪ್ಲಾಂಟ್‌ಗಳಲ್ಲಿ ಹತ್ತು ದಿನಕ್ಕಾಗುವಷ್ಟುಕಲ್ಲಿದ್ದಲು ಸಂಗ್ರಹವಿದೆ ಎಂದು ಹೇಳಿದರು.

ಕಲ್ಲಿದ್ದಲ ಕೃತಕ ಕೊರತೆ ಸೃಷ್ಟಿ: ಸಿದ್ದು
ರಾಜ್ಯದಲ್ಲಿ ಕಲ್ಲಿದ್ದಲ ಕೊರತೆ ಇಲ್ಲ. ಆದರೆ, ಸರ್ಕಾರಕ್ಕೆ ಅದನ್ನು ನಿಭಾಯಿಸಲು ಬರುತ್ತಿಲ್ಲ. ಕಲ್ಲಿದ್ದಲು ಹೆಚ್ಚಾಗಿಯೇ ಇದೆ. ಅದನ್ನು ಹಂಚಿಕೆ ಮಾಡಲು ಇವರಿಗೆ ಬರುತ್ತಿಲ್ಲ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಆಡಳಿತದಿಂದ ಕಷ್ಟಎದುರಾಗುತ್ತಿದೆ. ಕೃತಕ ಕೊರತೆ ಸೃಷ್ಟಿಯನ್ನು ಮಾಡುತ್ತಿದ್ದಾರೆ. ದಿಢೀರನೇ ಕಲ್ಲಿದ್ದಲು ಉತ್ಪಾದನೆ ನಿಲ್ಲಲು ಹೇಗೆ ಸಾಧ್ಯ?, ಅಧಿಕಾರಿಗಳು ಯಾವ ಸಚಿವರ ಮಾತನ್ನು ಕೇಳುತ್ತಿಲ್ಲ. ಸಚಿವರಿಗೆ ಇದರ ಬಗ್ಗೆ ಜ್ಞಾನವಿಲ್ಲ. ಇಂತಹ ಕೆಟ್ಟಸರ್ಕಾರವನ್ನ ಕರ್ನಾಟಕ ಎಂದೂ ನೋಡಿರಲಿಲ್ಲ. ಇದೊಂದು ಭ್ರಷ್ಟಸರ್ಕಾರ ಎಂದು ದೂರಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ