ಖಾಸಗಿ ರೈಲು ಓಡಿಸಲು ದಿಗ್ಗಜ ಕಂಪನಿಗಳ ಆಸಕ್ತಿ

By Kannadaprabha NewsFirst Published Jul 9, 2020, 8:29 AM IST
Highlights

ಬೆಂಗಳೂರು ಸೇರಿದಂತೆ ದೇಶದ 12 ಕ್ಲಸ್ಟರ್‌ಗಳ 109 ಜೋಡಿ ಮಾರ್ಗಗಳಲ್ಲಿ 151 ಹೊಸ ರೈಲುಗಳ ಸೇವೆ ಒದಗಿಸಲು ರೈಲ್ವೆ ಸಚಿವಾಲಯವು ಜುಲೈ 1ರಂದಷ್ಟೇ ಖಾಸಗಿ ವಲಯದಿಂದ ಆಸಕ್ತಿ ಹೊಂದಿರುವ ಕುರಿತಾದ (ರಿಕ್ಟೆಸ್ಟ್‌ ಫಾರ್‌ ಕೋಟ್ಸ್‌) ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಖಾಸಗಿ ವಲಯಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಖಾಸಗಿ ರೈಲು ಓಡಿಸಲು ದಿಗ್ಗಜ ಕಂಪನಿಗಳು ಒಲವು ತೋರಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಜು.09): ಆಯ್ದ ಮಾರ್ಗಗಳಲ್ಲಿ ಪ್ರಯಾಣಿಕರ ರೈಲು ಓಡಿಸಲು ಖಾಸಗಿ ಕಂಪನಿಗಳಿಗೂ ಅವಕಾಶ ನೀಡುವ ಭಾರತೀಯ ರೈಲ್ವೆಯ ಪ್ರಸ್ತಾಪಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಸಿದ್ಧ ದೇಶೀಯ ಕಂಪನಿಗಳ ಜೊತೆಗೆ ಹಲವು ವಿಶ್ವವಿಖ್ಯಾತ ಕಂಪನಿಗಳು ಕೂಡ ಆಸಕ್ತಿ ವ್ಯಕ್ತಪಡಿಸಿವೆ.

ಬೆಂಗಳೂರು ಸೇರಿದಂತೆ ದೇಶದ 12 ಕ್ಲಸ್ಟರ್‌ಗಳ 109 ಜೋಡಿ ಮಾರ್ಗಗಳಲ್ಲಿ 151 ಹೊಸ ರೈಲುಗಳ ಸೇವೆ ಒದಗಿಸಲು ರೈಲ್ವೆ ಸಚಿವಾಲಯವು ಜುಲೈ 1ರಂದಷ್ಟೇ ಖಾಸಗಿ ವಲಯದಿಂದ ಆಸಕ್ತಿ ಹೊಂದಿರುವ ಕುರಿತಾದ (ರಿಕ್ಟೆಸ್ಟ್‌ ಫಾರ್‌ ಕೋಟ್ಸ್‌) ಅರ್ಜಿ ಆಹ್ವಾನಿಸಿತ್ತು. ಈ ವೇಳೆ ಟಾಟಾ ರಿಯಾಲ್ಟಿ, ಅದಾನಿ ಪೋರ್ಟ್‌, ಭಾರತ್‌ ಫೋರ್ಜ್‍, ಕೆಇಸಿ, ಎಸ್ಸೆಲ್‌ ಗ್ರೂಪ್‌, ಐಆರ್‌ಸಿಟಿಸಿ, ಬಿಇಎಂಎಲ್‌ ಮತ್ತು ವಿದೇಶಿ ಕಂಪನಿಗಳಾದ ಹ್ಯುಂಡೈ, ಹಿಟಾಚಿ, ಮಿತ್ಸುಯಿ, ಬೊಂಬಾರ್ಡಿಯರ್‌, ಅಲ್‌ಸ್ಟೋಮ್‌, ಮ್ಯಾಕ್ವಯಿರಿ, ಸೀಮನ್ಸ್‌ ಮೊದಲಾದವುಗಳು ತಮ್ಮ ಆಸಕ್ತಿಯನ್ನು ಸಲ್ಲಿಸಿವೆ.

Latest Videos

ಈ ಪೈಕಿ ಅರ್ಹ ಕಂಪನಿಗಳನ್ನು ಆಯ್ದು ಇನ್ನು 6-8 ತಿಂಗಳಲ್ಲಿ ರೈಲ್ವೆ ಸಚಿವಾಲಯವು ಹಣಕಾಸು ಬಿಡ್ಡಿಂಗ್‌ಗೆ ಅವಕಾಶ ಮಾಡಿಕೊಡಲಿದೆ ಈ ಬಿಡ್ಡಿಂಗ್‌ ಗೆದ್ದ ಕಂಪನಿಗಳಿಗೆ 2023ರಿಂದ ರೈಲು ಓಡಿಸಲು ಅವಕಾಶ ನೀಡಲಿದೆ.

ಈ ಯೋಜನೆಯಡಿ 151 ಹೊಸ ರೈಲಿನ ಪೈಕಿ ಬಹುತೇಕ ರೈಲುಗಳನ್ನು ಖಾಸಗಿ ಕಂಪನಿಗಳು ಭಾರತದಲ್ಲೇ ನಿರ್ಮಿಸಬೇಕು. ರೈಲಿನ ಚಾಲಕ ಮತ್ತು ಭದ್ರತಾ ಸಿಬ್ಬಂದಿಗಳನ್ನು ರೈಲ್ವೆಯೇ ಒದಗಿಸಲಿದೆ. ಉಳಿದಂತೆ ನಿಲ್ದಾಣ, ವಿದ್ಯುತ್‌ ಬಳಕೆ, ರೈಲ್ವೆ ಮೂಲಸೌಕರ್ಯ ಬಳಸಿಕೊಂಡಿದ್ದಕ್ಕೆ ಶುಲ್ಕವನ್ನು ಖಾಸಗಿ ಕಂಪನಿಗಳು ಪಾವತಿಸಬೇಕಾಗಿ ಬರಲಿದೆ. 35 ವರ್ಷಗಳ ಗುತ್ತಿಗೆ ಅವಧಿಯಲ್ಲಿ ಖಾಸಗಿ ಕಂಪನಿಗಳು ತಮಗೆ ಬಂದ ಆದಾಯದಲ್ಲಿ, ರೈಲ್ವೆಗೆ ಅದರ ಮೂಲಸೌಕರ್ಯ ಬಳಸಿಕೊಂಡಿದ್ದಕ್ಕೆ ಶುಲ್ಕ ನೀಡುವುದರ ಜೊತೆಗೆ ಆದಾಯವನ್ನೂ ಹಂಚಿಕೊಳ್ಳಬೇಕು. ಅತ್ಯಂತ ಹೆಚ್ಚಿನ ಆದಾಯ ಹಂಚಿಕೆ ಮಾಡುವ ಕಂಪನಿಗಳು ರೈಲು ಸೇವೆಯ ಅವಕಾಶ ಪಡೆದುಕೊಳ್ಳಲಿವೆ.

ಶೇ.100 ಸಮಯ ಪಾಲನೆ: 183 ವರ್ಷ ಇತಿಹಾಸದಲ್ಲಿ ರೈಲ್ವೆ ವಿನೂತನ ಸಾಧನೆ!

ಅವಕಾಶ ಪಡೆದ ಕಂಪನಿಗಳು ಶೇ.95ರಷ್ಟು ಸಮಯ ಪರಿಪಾಲನೆ ಮಾಡಬೇಕು. 1 ಲಕ್ಷ ಕಿ.ಮೀಗೆ 1ಕ್ಕಿಂತ ಹೆಚ್ಚಿನ ವೈಫಲ್ಯ ಹೊಂದಬಾರದು, ಸ್ವಚ್ಛತೆಗೆ ಅತ್ಯಂತ ಮಹತ್ವ ನೀಡಬೇಕು.ಈ ರೈಲಿನ ಟಿಕೆಟ್‌ ದರಗಳು ಅತ್ಯಂತ ಸ್ಪರ್ಧಾತ್ಮಕವಾಗಿ ಇರಲಿದೆ. ಯೋಜನೆಯಿಂದ 30,000 ಕೋಟಿ ರು. ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಪ್ರಸಕ್ತ ಭಾರತದಲ್ಲಿ 2800 ಮೇಲ್‌/ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸುತ್ತಿದ್ದು, ಅವುಗಳ ಪೈಕಿ ಶೇ.5ರಷ್ಟನ್ನು ಇದೀಗ ಖಾಸಗೀಕರಣಗೊಳಿಸಲಾಗುತ್ತಿದೆ.

ಯಾವ್ಯಾವ ಕಂಪನಿಗಳ ಆಸಕ್ತಿ

ದೇಶೀಯ:ಟಾಟಾ ರಿಯಾಲಿಟಿ, ಅದಾನಿ ಪೋರ್ಟ್‌, ಭಾರತ್‌ ಫೋರ್ಜ್‍, ಕೆಇಸಿ, ಎಸ್ಸೆಲ್‌ ಗ್ರೂಪ್‌, ಐಆರ್‌ಸಿಟಿಸಿ, ಬಿಇಎಂಎಲ್‌

ವಿದೇಶಿ: ಹ್ಯುಂಡೈ, ಹಿಟಾಚಿ, ಮಿತ್ಸುಯಿ, ಬೊಂಬಾರ್ಡಿಯರ್‌, ಅಲ್‌ಸ್ಟೋಮ್‌, ಮ್ಯಾಕ್ವಯಿರಿ, ಸೀಮನ್ಸ್‌, ಸಿಎಎಫ್‌ ಇಂಡಿಯಾ
 

click me!