ಎಲ್ಲವೂ ಅಂದುಕೊಂಡಂತೆ ನಡೆದರೆ ವಾಯುಪಡೆಯ ಸಂಸ್ಥಾಪನಾ ದಿನವಾದ ಅ.8ರಂದು ಏರ್ ಡಿಫೆನ್ಸ್ ಕಮಾಂಡ್ ವಿಭಾಗ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.28): ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಮುಂದುವರೆದಿರುವಾಗಲೇ, ದೇಶದ ವಾಯುಸೀಮೆಯನ್ನು ಶತ್ರು ದೇಶಗಳಿಂದ ಕಾಪಾಡುವ ನಿಟ್ಟಿನಲ್ಲಿ ವಾಯು ರಕ್ಷಣಾ ವಿಭಾಗ (ಏರ್ ಡಿಫೆನ್ಸ್ ಕಮಾಂಡ್) ಎಂಬ ಹೊಸ ಘಟಕ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಾಯುಪಡೆಯ ಸಂಸ್ಥಾಪನಾ ದಿನವಾದ ಅ.8ರಂದು ಆ ವಿಭಾಗ ಸ್ಥಾಪನೆಯಾಗುವ ನಿರೀಕ್ಷೆ ಇದೆ.
ಮೂಲಗಳ ಪ್ರಕಾರ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಏರ್ ಡಿಫೆನ್ಸ್ ಕಮಾಂಡ್ ತನ್ನ ನೆಲೆಯನ್ನು ಹೊಂದಿರಲಿದೆ. ದೇಶದ ಉತ್ತರ ಭಾಗದಲ್ಲಿರುವ ಪ್ರಮುಖ ವಾಯುನೆಲೆಗಳಾದ ಆಗ್ರಾ, ಗ್ವಾಲಿಯರ್ ಮತ್ತು ಬರೇಲಿಯ ವಾಯುನೆಲೆಗಳನ್ನು ನಿರ್ವಹಿಸುವ ಭಾರತೀಯ ವಾಯುಪಡೆಯ ಕೇಂದ್ರ ಕಮಾಂಡ್ ಜೊತೆಜೊತೆಗೆ ಹೊಸ ಏರ್ ಡಿಫೆನ್ಸ್ ಕಮಾಂಡ್ ಕೂಡ ಕಾರ್ಯನಿರ್ವಹಿಸಲಿದೆ.
undefined
ವೈಸ್ ಏರ್‌ಚೀಫ್ ಮಾರ್ಷಲ್ ಎಚ್.ಎಸ್. ಅರೋರಾ ಸಮಿತಿಯು ಇಂಥದ್ದೊಂದು ಕಮಾಂಡ್ ರಚನೆಗೆ ಶಿಫಾರಸು ಮಾಡಿತ್ತು. ಇದನ್ನು ಒಪ್ಪಿದ್ದ ರಕ್ಷಣಾ ಸಚಿವಾಲಯ ಕಮಾಂಡ್ ರಚನೆಯ ಹೊಣೆಯನ್ನು ಸೇನಾಪಡೆಗಳ ಮಹಾದಂಡನಾಯಕ ಬಿಪಿನ್ ರಾವತ್ ಅವರಿಗೆ ವಹಿಸಿತ್ತು. ಅದರಂತೆ ಸೇನೆಯ ಮೂರು ವಿಭಾಗಗಳಲ್ಲಿನ ಸಂಪನ್ಮೂಲ ಕ್ರೋಢೀಕರಿಸಿಕೊಂಡು, ಯಾವುದೇ ಹೊಸ ಹುದ್ದೆ ಸೃಷ್ಟಿಸದೇ ಇರುವ ಅಧಿಕಾರಿಗಳನ್ನೇ ಬಳಸಿಕೊಂಡು ಏರ್ ಡಿಫೆನ್ಸ್ ಕಮಾಂಡ್ ಸೃಷ್ಟಿಸಲಾಗುತ್ತಿದೆ. ಇದಕ್ಕೆಂದೇ ಈಗಾಗಲೇ ಇಸ್ರೇಲ್ ಮತ್ತು ರಷ್ಯಾದಿಂದ ತಲಾ ಒಂದೊಂದು ಫಾಲ್ಕನ್ ಏರ್‌ಬರ್ನ್ ಅರ್ಲಿ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಪ್ರಸ್ತಾಪವು ಶೀಘ್ರವೇ ಭದ್ರತೆ ಕುರಿತಾದ ಸಂಪುಟ ಸಮಿತಿಯಿಂದ ಅನುಮೋದನೆ ಪಡೆಯಲಿದೆ ಎನ್ನಲಾಗಿದೆ.
40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಗೆ ಖರ್ಚಾಗಿದ್ದು ಐದೇ ಲಕ್ಷ..!
ಕಾರವಾರದಲ್ಲಿ ನೌಕಾ ಕಮಾಂಡ್ ಸ್ಥಾಪನೆ?
ಪ್ರಯಾಗ್‌ರಾಜ್‌ನಲ್ಲಿ ಏರ್ ಡಿಫೆನ್ಸ್ ಕಮಾಂಡ್ ಸ್ಥಾಪಿಸಿದಂತೆ ದಕ್ಷಿಣ ಭಾರತದ ಕಾರವಾರ ಅಥವಾ ಕೊಚ್ಚಿಯಲ್ಲಿ ನೌಕಾ ಕಮಾಂಡ್ ಸ್ಥಾಪಿಸುವ ಉದ್ದೇಶವನ್ನೂ ಸರ್ಕಾರ ಹೊಂದಿದೆ. ಈ ವಿಷಯದಲ್ಲೂ ಸಿಡಿಎಸ್ ಬಿಪಿನ್ ರಾವತ್ ಅವರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ
ಏಕೆ ಸ್ಥಾಪನೆ: ಶತ್ರು ದೇಶಗಳ ವಿಮಾನ, ಕ್ಷಿಪಣಿ, ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳ ದಾಳಿಯಿಂದ ಭಾರತವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಏರ್ ಡಿಫೆನ್ಸ್ ಕಮಾಂಡ್ ಹೊಂದಿರಲಿದೆ. ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆಯಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಇದು ಒಳಗೊಂಡಿರಲಿದೆ.