
ನವದೆಹಲಿ: ಗುರುವಾರ ರಾತ್ರಿ ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನಿ ಸಶಸ್ತ್ರ ಪಡೆಗಳು ನಡೆಸಿದ ಹಲವು ಡ್ರೋನ್ ದಾಳಿಗಳು ಮತ್ತು ಕದನ ವಿರಾಮ ಉಲ್ಲಂಘನೆಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ ಎಂದು ಭಾರತೀಯ ಸೇನೆ ಶುಕ್ರವಾರ ಇಂದು ದೃಢಪಡಿಸಿದೆ. ಈ ಬಗ್ಗೆ ಭಾರತೀಯ ಸೇನೆ ಟ್ವಿಟ್ಟರ್‌ನಲ್ಲಿ ವೀಡಿಯೋ ಪೋಸ್ಟ್ ಮಾಡಿದೆ.
ಪಾಕಿಸ್ತಾನ ಸಶಸ್ತ್ರ ಪಡೆಗಳು 2025 ರ ಮೇ 08 ಮತ್ತು 09 ರ ಮಧ್ಯರಾತ್ರಿ ಇಡೀ ಪಶ್ಚಿಮ ಗಡಿಯಲ್ಲಿ ಡ್ರೋನ್‌ಗಳು ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ಅನೇಕ ದಾಳಿಗಳನ್ನು ನಡೆಸಿದವು. ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕ್ ಪಡೆಗಳು ಹಲವಾರು ಕದನ ವಿರಾಮ ಉಲ್ಲಂಘನೆಗಳನ್ನು (CFV)ನಡೆಸಿವೆ. ಪಾಕಿಸ್ತಾನದ ಈ ಡ್ರೋನ್ ದಾಳಿಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿದೆ ಮತ್ತು ಪಾಕ್‌ನ ಕದನ ವಿರಾಮ ಉಲ್ಲಂಘನೆಗಳಿಗೆ ಸೂಕ್ತ ಉತ್ತರವನ್ನು ನೀಡಲಾಗಿದೆ. ಭಾರತೀಯ ಸೇನೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಹೇಳಿಕೆಯ ಜೊತೆಗೆ, ಭಾರತೀಯ ಸೇನೆಯು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಪಾಕಿಸ್ತಾನದ ಡ್ರೋನ್ ಅನ್ನು ಹೇಗೆ ಹೊಡೆದುರುಳಿಸಿತು ಎಂಬುದರ ಸಣ್ಣ ವೀಡಿಯೊವನ್ನು ಸಹ ಹಂಚಿಕೊಂಡಿದೆ. ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿದೆ. ಎಲ್ಲಾ ದುಷ್ಟ ಶಕ್ತಿಗಳಿಗೆ ಅಷ್ಟೇ ಸಮರ್ಥವಾಗಿ ಪ್ರತಿಕ್ರಿಯಿಸಲಾಗುತ್ತದೆ ಎಂದು ಭಾರತೀಯ ಸೇನೆ ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.
ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆ (LoC) ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ (IB) 50 ಕ್ಕೂ ಹೆಚ್ಚು ಪಾಕಿಸ್ತಾನಿ ಡ್ರೋನ್‌ಗಳನ್ನು ಭಾರತದ ಸೇನೆ ತಟಸ್ಥಗೊಳಿಸಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿತ್ತು. ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿರಿಸಿಕೊಂಡು ಪಾಕ್ ನಡೆಸಿದ ಬಹು ವೈಮಾನಿಕ ಬೆದರಿಕೆಗಳನ್ನು ವಿಫಲಗೊಳಿಸಲಾಗಿದೆ. ಉಧಮ್‌ಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್‌ಕೋಟ್‌ಗಳಲ್ಲಿ ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ದೊಡ್ಡ ಪ್ರಮಾಣದ ಪ್ರತಿ-ಡ್ರೋನ್ ಕಾರ್ಯಾಚರಣೆಯನ್ನು ನಡೆಸಿ, ಗಡಿಯಾಚೆಯಿಂದ ಕಳುಹಿಸಲಾದ 50 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಿವೆ.
ಈ ಕಾರ್ಯಾಚರಣೆಯಲ್ಲಿ L-70 ಬಂದೂಕುಗಳು, Zu-23mm, ಶಿಲ್ಕಾ ವ್ಯವಸ್ಥೆಗಳು(Schilka systems) ಮತ್ತು ಇತರ ಸುಧಾರಿತ ಪ್ರತಿ-UAS ಉಪಕರಣಗಳನ್ನು ಬಳಸಲಾಯ್ತು. ಇದು ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಸೇನೆಗೆ ದೃಢವಾದ ಶಕ್ತಿ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ನಾಗರಿಕರನ್ನು ಕೊಂದ ನಂತರ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ಹೆಸರಿನಲ್ಲಿ ಕ್ಷಿಪಣಿ ದಾಳಿಗಳನ್ನು ನಡೆಸಿದವು. ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರಬಲ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಿಒಜೆಕೆಯಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಇದಾದ ನಂತರ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿಗೆ ಯತ್ನಿಸಿದ್ದು, ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ