Army Chopper Crash ಇಂಡೋ-ಪಾಕ್ ಗಡಿ ಬಳಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ, ಪೈಲೆಟ್ ಸಾವು!

By Suvarna NewsFirst Published Mar 11, 2022, 3:49 PM IST
Highlights
  • ಜಮ್ಮು ಮತ್ತು ಕಾಶ್ಮೀರದ ಗುರೇಜ್ ಸೆಕ್ಟರ್‌ನಲ್ಲಿ ಪತನ
  • ಸಂಪೂರ್ಣ ಹಿಮ ಆವರಿಸಿಕೊಂಡಿರುವ ಪ್ರದೇಶ
  • ತಕ್ಷಣ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ, ಮುಂದುವರಿದ ಶೋಧ ಕಾರ್ಯ 
     

ಕಾಶ್ಮೀರ(ಮಾ.11): ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನದ ಆಘಾತ ಮಾಸುವ ಮುನ್ನವೇ ಇದೀಗ ಭಾರತೀಯ ಸೇನೆಯ ಮತ್ತೊಂದು ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಉತ್ತರ ಕಾಶ್ಮೀರದ ಗುರೇಜ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಚೀತಾ ಹೆಲಿಕಾಪ್ಟರ್ ಪತನಗೊಂಡಿದೆ.ಗಡಿಯಲ್ಲಿ ನಿಯೋಜನೆಗೊಂಡಿದ್ದ ಬಿಎಸ್‌ಎಪ್ ಸಿಬ್ಬಂಧಿ ಅಸ್ವಸ್ಥಗೊಂಡಿದ್ದ ಕಾರಣ, ಅವರನ್ನು ಕರೆತರಲು ಹೊರಟ್ಟಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಅಪಘಾತದಲ್ಲಿ ಸೇನಾ ಪೈಲೆಟ್ ನಿಧನರಾಗಿದ್ದಾರೆ.

ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ ಅತ್ಯಂತ ಹಿಮಪಾತದ ಪ್ರದೇಶವಾಗಿದೆ. ಇಲ್ಲಿನ ನಾಲಾ ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಹಿಮಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಪೈಲೆಟ್ ಹಾಗೂ ಸಹ ಪೈಲೆಟ್ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ಪತನಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದ್ದು ಶೋಧ ಕಾರ್ಯ ಮುಂದುವರಿಸಲಾಗಿದೆ.

CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!

ಗಡಿ ನಿಯಂತ್ರಣ ರೇಖೆ ಬಳಿ ಪಹರೆ ಕಾಯುತ್ತಿದ್ದ ಯೋಧರು ಕೂಡ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಪೈಲೆಟ್ ಹಾಗೂ ಕೋ ಪೈಲೆಟ್ ರಕ್ಷಣೆಗೆ ತಂಡ ಶ್ರಮಿಸುತ್ತಿದೆ. ತೀವ್ರ ಗಾಯಗೊಂಡ ಪೈಲೆಟ್ ನಿಧನರಾಗಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಇನ್ನು ತೀವ್ರವಾಗಿ ಗಾಯಗೊಂಡಿರುವ ಕೋ ಪೈಲೆಟ್‌ನನ್ನು ತಕ್ಷಣೇ ಸ್ಥಳೀಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಡಿಯಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಫ ಪಡೆಯ ಯೋಧರು ಗಾಯಗೊಂಡು ಅಸ್ವಸ್ಥರಾಗಿದ್ದರು. ಹೀಗಾಗಿ ಈ ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲು ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆಯತ್ತ ತೆರಳಿತ್ತು. ಆದರೆ ಅಪಘಾತಕ್ಕೆ ಕಾರಣಗಳೇನು?  ಹಿಮಪ್ರದೇಶ ಹಾಗೂ ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿ ಚೀತಾ ಪತನಗೊಂಡಿರುವ ಕಾರಣ ಶೋಧ ಕಾರ್ಯಕ್ಕೂ ಅಡಚಣೆಯಾಗಿದೆ. 

ಪ್ರಾಥಮಿಕ ವರದಿ ಪ್ರಕಾರ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯ ಹಾಗೂ ವಿಪರೀತ ಗಾಳಿಯಿಂದ ಹೆಲಿಕಾಪ್ಟರ್‌ ಲ್ಯಾಂಡಿಂಗ್ ವೇಳೆ ಸಮಸ್ಯೆಯಾಗಿದೆ. ಹೀಗಾಗಿ ಪತನಗೊಂಡಿದೆ ಎಂದು ಪ್ರಾಥಮಿಕ ವರದಿ ಹೇಳುತ್ತಿದೆ. 

ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ ದುರಂತ:
ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್‌ ಸವೀರ್‍ಸ್‌ ಸ್ಟಾಫ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಪಿನ್‌ ರಾವತ್‌ ಆಗಮಿಸುತ್ತಿದ್ದರು. ಬುಧವಾರ ಮಧ್ಯಾಹ್ನ 2.45ಕ್ಕೆ ಈ ಉಪನ್ಯಾಸ ಆಯೋಜನೆಗೊಂಡಿತ್ತು. ಹಾಗಾಗಿ ಸೂಲೂರಿಗೆ ಕುಟುಂಬ ಸಮೇತ ಬಂದಿಳಿದ ಅವರು ಅಲ್ಲಿಂದ ಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ವೆಲ್ಲಿಂಗ್ಟನ್‌ಗೆ 16 ಕಿ.ಮೀ ದೂರದಲ್ಲಿದ್ದಾಗ ಕಾಪ್ಟರ್‌ ಪತನಗೊಂಡು ದುರಂತ ಸಂಭವಸಿತು. ಈ ಕಾರ್ಯಕ್ರಮದಲ್ಲಿ ಭೂಸೇನೆ ಮುಖ್ಯಸ್ಥ ಮನೋಜ್‌ ಮುಕುಂದ್‌ ನರವಣೆ ಕೂಡ ಭಾಗವಹಿಸಬೇಕಿತ್ತು. ಆದರೆ ಅವರು ಈ ಕಾಪ್ಟರ್‌ನಲ್ಲಿ ಇಲ್ಲದಿದ್ದಕ್ಕೆ ದುರಂತದಿಂದ ಬಚಾವಾದರು.

ದೇಶದ ಮೊದಲ ಸಶಸ್ತ್ರ ಪಡೆಗಳ ಮುಖ್ಯಸ್ಥ 
ಜನರಲ್‌ ಬಿಪಿನ್‌ ರಾವತ್‌ ಅವರು ಭಾರತದ ಮೂರೂ ಸೇನಾ ಪಡೆಗಳ ನಡುವೆ ಅತ್ಯುತ್ತಮ ಸಮನ್ವಯ ಸಾಧಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಶಸ್ತ್ರಪಡೆಗಳ ಮುಖ್ಯಸ್ಥ (ಸಿಡಿಎಸ್‌) ಹುದ್ದೆಗೇರಿದ ಮೊದಲ ಸೇನಾಧಿಕಾರಿ. 1999ರ ಕಾರ್ಗಿಲ್‌ ಸಮರದ ಬಳಿಕ ಸಿಡಿಎಸ್‌ ಹುದ್ದೆ ಸೃಷ್ಟಿಸಬೇಕು ಎಂದು ಮಿಲಿಟರಿ ತಜ್ಞರು ಸಲಹೆ ಮಾಡಿದ್ದರು. ಸರ್ಕಾರವೂ ಇದಕ್ಕೆ ಪೂರಕವಾಗಿ ಸ್ಪಂದಿಸಿತ್ತಾದರೂ, ಅದು ಸಾಕಾರವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಆ.15ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಿಡಿಎಸ್‌ ಹುದ್ದೆ ಸೃಷ್ಟಿಯ ಘೋಷಣೆ ಮಾಡಿದ್ದರು. 2020ರ ಜ.1ರಂದು ಮೊದಲ ಸಿಡಿಎಸ್‌ ಆಗಿ ರಾವತ್‌ ನೇಮಕಗೊಂಡಿದ್ದರು. ದೇಶದ ಮಿಲಿಟರಿ ಕ್ಷೇತ್ರದ ಅತ್ಯುನ್ನತ ಹುದ್ದೆ ಇದಾಗಿದ್ದು, ರಕ್ಷಣಾ ಸಚಿವರಿಗೆ ಮಿಲಿಟರಿಗೆ ಸಂಬಂಧಿಸಿದ ಸಲಹೆ ನೀಡುವ ಮುಖ್ಯ ಹುದ್ದೆ ಆಗಿದೆ. ಈ ಹುದ್ದೆಯಲ್ಲಿರುವವರು ಸೇನಾ ವ್ಯವಹಾರ ಇಲಾಖೆಗಳ ಮುಖ್ಯಸ್ಥರೂ ಆಗಿರುತ್ತಾರೆ. ಸೇನೆಯ ಮೂರೂ ಪಡೆಗಳ ಅಗತ್ಯಗಳನ್ನು ಮನಗಂಡು ಸರ್ಕಾರದ ಮುಂದೆ ಬೇಡಿಕೆ ಇಡುವುದು, ಮೂರೂ ಸೇನಾಪಡೆಗಳ ನಡುವೆ ಸಮನ್ವಯ ಸಾಧಿಸುವುದು ಸಿಡಿಎಸ್‌ ಜವಾಬ್ದಾರಿ ಆಗಿರುತ್ತದೆ.
 

click me!