8 ದಿನದಲ್ಲಿ 4 ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ: ದಾಖಲೆ!

By Suvarna NewsFirst Published Dec 2, 2020, 8:04 AM IST
Highlights

8 ದಿನದಲ್ಲಿ 4 ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ: ದಾಖಲೆ| ಸುಧಾರಿತ ಬ್ರಹ್ಮೋಸ್‌ ಎಲ್ಲಾ ಪಡೆಗಳಿಂದಲೂ ಪರೀಕ್ಷೆ| ರಣವಿಜಯ್‌ ಹಡಗಿನಿಂದ ಹಾರಿ ನಿಷ್ಕಿ್ರಯ ಹಡಗು ನಾಶಪಡಿಸಿದ ಕ್ಷಿಪಣಿ

ಭುವನೇಶ್ವರ(ಡಿ.02): ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಚಲಿಸುವ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ಮಂಗಳವಾರ ಯಶಸ್ವಿಯಾಗಿ ಪರೀಕ್ಷೆ ನಡೆಸಿ ಭಾರತೀಯ ರಕ್ಷಣಾ ಪಡೆಗಳು ದಾಖಲೆ ನಿರ್ಮಿಸಿವೆ. ಕಳೆದ ಎಂಟು ದಿನಗಳಲ್ಲಿ ನಾಲ್ಕು ಬಾರಿ ಸೇನಾಪಡೆ, ವಾಯುಪಡೆ ಹಾಗೂ ನೌಕಾಪಡೆಗಳು ಈ ಕ್ಷಿಪಣಿಯನ್ನು ಪರೀಕ್ಷೆ ನಡೆಸಿವೆ. ಯಾವುದೇ ದೇಶ ಇಷ್ಟುಕಡಿಮೆ ಅವಧಿಯಲ್ಲಿ ಕ್ಷಿಪಣಿಯೊಂದನ್ನು ಹೀಗೆ ಸರಣಿ ಪರೀಕ್ಷೆ ನಡೆಸಿರುವುದು ಇದೇ ಮೊದಲಾಗಿದೆ.

ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿ ಈಗಾಗಲೇ ಭಾರತೀಯ ರಕ್ಷಣಾ ಪಡೆಗಳಲ್ಲಿ ಬಳಕೆಯಲ್ಲಿದೆ. ರಷ್ಯಾ ಜೊತೆ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ. ಈ ಅತ್ಯಾಧುನಿಕ ಕ್ಷಿಪಣಿ ಮೂಲತಃ 290 ಕಿ.ಮೀ. ದೂರ ಸಂಚರಿಸುವ ಸಾಮರ್ಥ್ಯ ಹೊಂದಿತ್ತು. ಅದನ್ನೀಗ 450 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಈ ಸುಧಾರಿತ ಕ್ಷಿಪಣಿಯನ್ನು ಈಗ ಸರಣಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲ ಪರೀಕ್ಷೆಗಳಲ್ಲೂ ಯಶಸ್ವಿಯಾಗಿದೆ.

ಮಂಗಳವಾರ ನೌಕಾಪಡೆಯು ಅಂಡಮಾನ್‌ ನಿಕೋಬಾರ್‌ ದ್ವೀಪಸಮೂಹಗಳ ಬಳಿಯಿಂದ ಐಎನ್‌ಎಸ್‌ ರಣವಿಜಯ್‌ ಸಮರನೌಕೆಯ ಮೇಲಿನಿಂದ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾಯಿಸಿ ಬಂಗಾಳಕೊಲ್ಲಿಯ ಕಾರ್‌ನಿಕೋಬಾರ್‌ ದ್ವೀಪಗಳ ಬಳಿಯಿದ್ದ ನಿಷ್ಕಿ್ರಯ ಸಮರ ನೌಕೆಯೊಂದನ್ನು ನಾಶಪಡಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಿಂದ, ಸಬ್‌ಮರೀನ್‌ನಿಂದ, ಯುದ್ಧನೌಕೆಯಿಂದ ಅಥವಾ ನೆಲದ ಮೇಲಿನಿಂದ ಹೀಗೆ ಎಲ್ಲಾ ವಿಧದಲ್ಲೂ ಉಡಾಯಿಸಬಹುದಾದ ರೀತಿಯಲ್ಲಿ ಬ್ರಹ್ಮೋಸ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಯವರೆಗೆ ಇದನ್ನು 80ಕ್ಕೂ ಹೆಚ್ಚು ಬಾರಿ ಪರೀಕ್ಷಿಸಲಾಗಿದ್ದು, ಶೇ.99ರಷ್ಟುಕರಾರುವಾಕ್ಕಾಗಿ ಗುರಿ ತಲುಪಿದೆ. ಇದು ಜಗತ್ತಿನ ಅತ್ಯುತ್ತಮ ಕ್ರೂಸ್‌ ಕ್ಷಿಪಣಿಯೆಂಬ ಹೆಗ್ಗಳಿಕೆ ಪಡೆದಿದೆ. 300 ಕೆ.ಜಿ. ತೂಕದ ಸಿಡಿತಲೆ ಹೊತ್ತು ಇದು 450 ಕಿ.ಮೀ.ವರೆಗೆ ಸಂಚರಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

click me!