'ಮೋದಿ ಸಾರಥ್ಯದಲ್ಲಿ ಚೀನಾ, ಕೊರೋನಾ ಎರಡೂ ಯುದ್ಧ ಗೆಲ್ಲುತ್ತೇವೆ'

By Kannadaprabha NewsFirst Published Jun 29, 2020, 7:27 AM IST
Highlights

ಮೋದಿ ಸಾರಥ್ಯದಲ್ಲಿ ಭಾರತಕ್ಕೆ ಎರಡೂ ಯುದ್ಧದಲ್ಲಿ ಗೆಲುವು| ಕೊರೋನಾ, ಚೀನಾ ‘ಯುದ್ಧ’ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಗೃಹ ಸಚಿವ ಅಮಿತ್‌ ಶಾ

ನವದೆಹಲಿ(ಜೂ.29): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಕೊರೋನಾ ಹಾಗೂ ಚೀನಾ ಗಡಿ- ಈ ‘ಎರಡೂ ಯುದ್ಧ’ಗಳನ್ನು ಗೆಲ್ಲಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತ ಸ್ನೇಹಕ್ಕೆ ಬದ್ಧ. ತಂಟೆಗೆ ಬಂದರೆ ಹಿಂಜರಿಕೆ ತೋರದೆ ಮುಟ್ಟಿನೋಡಿಕೊಳ್ಳುವಂಥ ಪ್ರತಿಕ್ರಿಯೆ ನೀಡಲೂ ಸಿದ್ಧ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಅಮಿತ್‌ ಶಾ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.

ಭಾನುವಾರ ಎಎನ್‌ಐ ಸುದ್ದಿಸಂಸ್ಥೆ ಸಂದರ್ಶನದ ವೇಳೆ ಈಶಾನ್ಯ ಗಡಿಯಲ್ಲಿನ ಬಿಕ್ಕಟ್ಟು ಮತ್ತು ದೇಶದಲ್ಲಿನ ಕೊರೋನಾ ಪರಿಸ್ಥಿತಿ ಬಗ್ಗೆ ಪ್ರಶ್ನಿಸಿದ ವೇಳೆ ‘ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈ ಎರಡೂ ಯುದ್ಧಗಳನ್ನು ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಚೀನಾ ಪಡೆಗಳು ಭಾರತದ ಗಡಿಯೊಳಗೆ ನುಸುಳಿವೆಯಂತಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಸಂಬಂಧಿಸಿದವರು ಈ ಬಗ್ಗೆ ಹೇಳಿಕೆ ನಿಡಿದ್ದಾರೆ. ನಾನು ಏನೂ ಹೇಳಬಯಸಲ್ಲ’ ಎಂದರು.

ಕೊರೋನಾ ರೋಗಿಗಳಿಗೆ ಅಗ್ಗದ ಸ್ಟೆರಾಯ್ಡ್‌ ನೀಡಲು ಒಪ್ಪಿಗೆ!

ರಾಹುಲ್‌ಗೆ ಟಾಂಗ್‌:

ಈ ನಡುವೆ ಚೀನಾ ವಿಚಾರದಲ್ಲಿ ಮೋದಿ ಅವರನ್ನು ಟೀಕಿಸುತ್ತಿರುವ ರಾಹುಲ್‌ ಗಾಂಧಿ ಅವರದ್ದು, ‘ಅಲ್ಪಮತಿ ರಾಜಕೀಯ’ ಎಂದು ಕುಟುಕಿದ ಶಾ, ‘ಭಾರತ ವಿರೋಧಿ ಪ್ರಚಾರವನ್ನು ನಾವು ಎದುರಿಸಲು ಶಕ್ತರಿದ್ದೇವೆ. ಆದರೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷನೇ ಇಂಥ ಹೇಳಿಕೆ ನೀಡಿದಾಗ ನೋವಾಗುತ್ತದೆ. ಇದು ಅಲ್ಪಮತಿ ರಾಜಕಾರಣ’ ಎಂದರು. ‘ಕಾಂಗ್ರೆಸ್‌ನ ಇಂಥ ಹೇಳಿಕೆಗಳನ್ನು ಚೀನಾ ಹಾಗೂ ಪಾಕಿಸ್ತಾನಗಳು ಬಳಸಿಕೊಳ್ಳುತ್ತಿವೆ. ಈ ಬಗ್ಗೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಶಾ ಹೇಳಿದರು.

ದೇಶದಲ್ಲಿ 54 ಲಕ್ಷ ಮಂದಿಗೆ ಸೋಂಕು: 32 ಲಕ್ಷ ಮಂದಿ ಗುಣಮುಖ!

ಗಡಿ ವಿಚಾರದಲ್ಲಿ ಚರ್ಚೆಗೆ ನಾವು ಸಿದ್ಧ. 1962ರಿಂದ ಇಲ್ಲಿಯವರೆಗೆ ಏನಾಯಿತು ಎಂಬ ಚರ್ಚೆಗೆ ನಾವು ತಯಾರು ಎಂದು ಕಾಂಗ್ರೆಸ್‌ಗೆ ಸವಾಲು ಎಸೆದರು. ‘ಕೊರೋನಾ ವಿಚಾರದಲ್ಲಿ ಸರ್ಕಾರವನ್ನು ಟೀಕಿಸುತ್ತಿರುವ ರಾಹುಲ್‌ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾ, ‘ಕೆಲ ನಾಯಕರದ್ದು ವಕೃದೃಷ್ಟಿ. ಸರಿ ವಿಚಾರದಲ್ಲೂ ತಪ್ಪು ಹುಡುಕುತ್ತಾರೆ. ಕೊರೋನಾ ವಿರುದ್ಧ ಭಾರತ ಉತ್ತಮ ರೀತಿಯಲ್ಲಿ ಹೋರಾಡಿದೆ. ವಿಶ್ವದ ಇತರ ಭಾಗಕ್ಕಿಂತ ನಮ್ಮಲ್ಲಿ ಪರಿಸ್ಥಿತಿ ಉತ್ತಮ’ ಎಂದರು.

‘ಕೊರೋನಾ ನಿಯಂತ್ರಿಸುವಲ್ಲಿ ದಿಲ್ಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜತೆ ಕಾರ್ಯನಿರ್ವಹಿಸುತ್ತಿದ್ದೇನೆ. ದಿಲ್ಲಿಯಲ್ಲಿ 350 ಶವಗಳು ಸಂಸ್ಕಾರವಾಗದೇ ಬಾಕಿ ಇದ್ದವು. ಆ ಸಂಸ್ಕಾರವನ್ನು ಪೂರ್ಣಗೊಳಿಸಲಾಗಿದೆ. ಈಗ ಅಂದಿನ ಶವಗಳನ್ನು ಅಂದೇ ಸಂಸ್ಕರಿಸಲಾಗುತ್ತಿದೆ. ದೆಹಲಿಯಲ್ಲಿ ಸೋಂಕಿನ ಪ್ರಮಾಣ 5 ಲಕ್ಷ ತಲುಪಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.’ ಎಂದರು.

click me!