ಡೊನಾಲ್ಡ್ ಟ್ರಂಪ್ ಅವರ ಪ್ರತಿ ತೆರಿಗೆ ಅನುಷ್ಠಾನಕ್ಕೂ ಮುನ್ನ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆ ಇದೆ. ಇದರಿಂದ ತೆರಿಗೆ ಸಮರಕ್ಕೆ ಬ್ರೇಕ್ ಬೀಳುವ ನಿರೀಕ್ಷೆಯಿದೆ. ಅಮೆರಿಕವು ಭಾರತದ ಮೇಲೆ ಶೇ.26ರಷ್ಟು ಪ್ರತಿ ತೆರಿಗೆ ವಿಧಿಸಿದೆ.
ನವದೆಹಲಿ: ಡೊನಾಲ್ಡ್ ಟ್ರಂಪ್ ಅವರ ಶೇ.26ರಷ್ಟು ಪ್ರತಿ ತೆರಿಗೆ ಅನುಷ್ಠಾನಕ್ಕೂ ಮೊದಲೇ ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದವೊಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ. ಇದರಿಂದ ಈಗ ಆರಂಭವಾಗಿರುವ ತೆರಿಗೆ ಸಮರಕ್ಕೆ ಬ್ರೇಕ್ ಬಿದ್ದು, ಅಗ್ಗದ ತೆರಿಗೆಯಲ್ಲಿ ಆಮದು-ರಫ್ತು ಸಾಧ್ಯವಾಗಬಹುದು ಎಂದು ಅಮೆರಿಕ ಮಾಧ್ಯಮ ‘ಸಿಎನ್‌ಎನ್’ ವರದಿ ಮಾಡಿದೆ.
ಅಮೆರಿಕವು ಏ.2ಕ್ಕೆ 180 ರಾಷ್ಟ್ರಗಳ ಮೇಲೆ ಪ್ರತಿ ತೆರಿಗೆ ಹಾಕುವ ನಿರ್ಧಾರ ಘೋಷಿಸಿದೆ. ಅದರಂತೆ ಒಂದೊಂದು ದೇಶಗಳಿಗೆ ಒಂದೊಂದು ದರದಲ್ಲಿ ತೆರಿಗೆ ವಿಧಿಸಲಾಗಿದೆ. ಭಾರತದ ಮೇಲೆ ಶೇ.26ರಷ್ಟು ಪ್ರತಿ ತೆರಿಗೆ ಹಾಕಲಾಗಿದ್ದು, ಇದರಿಂದ ನಮ್ಮ ರಫ್ತು ಉದ್ಯಮದ ಮೇಲೆ ಭಾರೀ ಹೊಡೆತ ಬೀಳುವ ಆತಂಕ ಶುರುವಾಗಿದೆ.
ಇದನ್ನೂ ಓದಿ: ಅಮೆರಿಕ-ಚೀನಾ ಟ್ರೇಡ್ ವಾರ್ ನಡುವೆ, ಮೂರು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದ ಕಚ್ಚಾತೈಲದ ಬೆಲೆ!
ಟ್ರಂಪ್ ಪ್ರತಿ ತೆರಿಗೆಯು ಏ.9ರಿಂದ ಜಾರಿಗೆ ಬರಲಿದ್ದು, ಇದಕ್ಕೂ ಮೊದಲು ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದವೊಂದಕ್ಕೆ ಅಂಕಿತ ಬೀಳುವ ನಿರೀಕ್ಷೆ ಗರಿಗೆದರಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭಾರತ, ವಿಯೆಟ್ನಾಂ ಮತ್ತು ಇಸ್ರೇಲ್ ಜತೆಗೆ ಅಮೆರಿಕವು ಮಾತುಕತೆಯನ್ನೂ ನಡೆಸುತ್ತಿದೆ ಎಂದು ಸಿಎನ್‌ಎನ್ ವರದಿ ಹೇಳಿದೆ.
ಈಗಾಗಲೇ ಭಾರತ ಸರ್ಕಾರವು ಅಮೆರಿಕ ಪ್ರತಿ ತೆರಿಗೆ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ರಫ್ತುದಾರರಿಂದ ಈ ಸಂಬಂಧ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ದುಬಾರಿಯಾದ ಟ್ರಂಪ್ ಸುಂಕದ ಹೊಡೆತ: ಭಾರತದ ಚಾಲಾಕಿ ನಡೆ