* ಈ ವರ್ಷ ಸಾಮಾನ್ಯ ಮುಂಗಾರು: ಸ್ಕೈಮೆಟ್
* ಸರಾಸರಿ 880.6 ಮಿ.ಮೀ ಮಳೆಯಾಗುವ ನಿರೀಕ್ಷೆ
* ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನ ಶೀಘ್ರವೇ ಹೆಚ್ಚುವ ಸಾಧ್ಯತೆ
* ಕಾಳುಮೆಣಸು ಇಳುವರಿ ಅರ್ಧದಷ್ಟುಕುಸಿತ
ನವದೆಹಲಿ (ಫೆ. 22) ಪ್ರಸಕ್ತ ವರ್ಷ ಸಾಮಾನ್ಯ ಮುಂಗಾರು (Monsoon) ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈ ಮೆಟ್ (skymet weather)ಅಂದಾಜಿಸಿದೆ. ಒಟ್ಟಾರೆ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ದೀರ್ಘಕಾಲಿನ ಸರಾಸರಿಯ ಶೇ. 96ರಿಂದ ಶೇ.103ರಷ್ಟುಮಳೆ (Rain) ಸುರಿಯಲಿದೆ. ಅಂದರೆ ಸರಾಸರಿ 880.6 ಮಿ.ಮೀ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಸಮಗ್ರ ಮಾನ್ಸೂನ್ ಸಂಬಂಧಿಸಿದಂತೆ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಏಪ್ರಿಲ್‌ನಲ್ಲಿ ಈ ಕುರಿತ ವಿವರವಾದ ವರದಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.
ಕಳೆದ ಎರಡು ಮಾನ್ಸೂನ್ ಋುತುಗಳು ನಿರಂತರ ಎಲ್ ನಿನೋ ವಿದ್ಯಮಾನಗಳಿಂದ ಮಾರ್ಪಾಡಾಗಿತ್ತು, ಅದು ಈಗ ಕುಗ್ಗಲು ಪ್ರಾರಂಭಿಸಿದೆ. ಇದರರ್ಥ 2022ರ ಮಾನ್ಸೂನ್ ಎಲ್.ನಿನೋ ಪ್ರಾರಂಭವಾಗಿ ನಂತರ ತಟಸ್ಥವಾಗಿದೆ. ಪೆಸಿಫಿಕ್ ಸಮುದ್ರದ ಮೇಲ್ಮೈ ತಾಪಮಾನ ಶೀಘ್ರವೇ ಹೆಚ್ಚುವ ಸಾಧ್ಯತೆ ಇದೆ. ಎಲ್.ನಿನೋ ಕುಸಿತ ಮುಂದುವರೆಯುವ ಸಂಭವ ಇದೆ ಎಂದು ಸ್ಕೈಮೆಟ್ ಮುಖ್ಯಸ್ಥ ಜಿ.ಪಿ.ಶರ್ಮಾ ತಿಳಿಸಿದ್ದಾರೆ.
Huvina Hadagali: "ಮಳೆ ಬೆಳೆ ಸಂಪಾತಲೇ ಪರಾಕ್" ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ
ಕಾಳುಮೆಣಸು ಇಳುವರಿ ಅರ್ಧದಷ್ಟುಕುಸಿತ: ಗುಣಮಟ್ಟದ ಕಾಳುಮೆಣಸಿಗೆ (Pepper)ಹೆಸರುವಾಸಿಯಾದ ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಲೆನಾಡಿನಲ್ಲಿ ಈ ಬಾರಿ ಬೆಳೆ ಅರ್ಧದಷ್ಟುಕುಸಿದಿದೆ. ವಾಡಿಕೆಗಿಂತ ಹೆಚ್ಚು ಮಳೆ, ಹವಾಮಾನ ವೈಪರೀತ್ಯದಿಂದ ಕಾಳುಮೆಣಸಿನ ಬಳ್ಳಿಗಳೇ ಅಗಾಧ ಪ್ರಮಾಣದಲ್ಲಿ ಸಾವಿಗೀಡಾಗಿವೆ.
ಮಲೆನಾಡಿನ ತೋಟಗಾರಿಕೆ ಕ್ಷೇತ್ರದಲ್ಲಿ ಅಡಕೆ ಆನಂತರದ ಸ್ಥಾನವನ್ನು ಕಾಳುಮೆಣಸು ಹೊಂದಿದೆ. ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಶಿರಸಿ, ಯಲ್ಲಾಪುರ ಮತ್ತು ಸಿದ್ದಾಪುರ ತಾಲೂಕುಗಳಲ್ಲಿ ಬೆಳೆ ಪ್ರಮಾಣ ಹೆಚ್ಚಿದೆ. ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ಶೇ. 80ರಷ್ಟುಪ್ರದೇಶಕ್ಕೆ ರೋಗ ವ್ಯಾಪಿಸಿದೆ.
ಕಾಳುಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಒಣಗುತ್ತಿವೆ. ಬುಡದಿಂದ ತುದಿಯವರೆಗೂ ರೋಗ ವ್ಯಾಪಿಸುತ್ತಿದ್ದು, ಮೂರ್ನಾಲ್ಕು ವರ್ಷಗಳ ರೈತರ ಶ್ರಮ ವ್ಯರ್ಥವಾಗುತ್ತಿದೆ. ನಿರಂತರವಾಗಿ ಬಾಧಿಸುತ್ತಿರುವ ಕೊಳೆರೋಗಕ್ಕೆ ಪರಿಹಾರ ಕಾಣದ ಪರಿಣಾಮ ಆಸಕ್ತಿಯೂ ಕುಂದುತ್ತಿದೆ. ಇದು ರೈತರಿಗೆ ಆರ್ಥಿಕವಾಗಿಯೂ ಏಟು ನೀಡುತ್ತಿದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ರಮೇಶ ಹೆಗಡೆ ಕಾನಗೋಡ.
ನೂರಾರು ಬಳ್ಳಿಗಳು ಏಕಕಾಲಕ್ಕೆ ಸೊರಗಿ ಹೋದವು. ಈಚಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಹಾನಿ, ರೋಗ ಹರಡುವಿಕೆ ಪ್ರಮಾಣ ಹೆಚ್ಚಿದೆ. ನಮ್ಮ ತೋಟದಲ್ಲಿರುವ ಸ್ಥಿತಿಯೇ ನೂರಾರು ಕಾಳುಮೆಣಸು ಕೃಷಿಕರ ತೋಟದಲ್ಲಿಯೂ ಕಾಣಸಿಗುತ್ತಿದೆ ಎಂದು ಹಲವು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಅತಿಯಾದ ಹಾಗೂ ನಿರಂತರವಾಗಿ ಬಿದ್ದ ಮಳೆಯಿಂದ ತೇವಾಂಶ ಹೆಚ್ಚಿದ ಕಾರಣ ಕೊಳೆರೋಗ ಉಲ್ಬಣಿಸುತ್ತಿದೆ. ಕಳೆದ ವರ್ಷ ಕೆಲ ಪ್ರಮಾಣದಲ್ಲಿ ಕೊಳೆ ರೋಗ ಕಂಡುಬಂದಿತ್ತಾದರೂ, ಈ ವರ್ಷ ರೋಗ ವ್ಯಾಪಕವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ.
ವಿಯೆಟ್ನಾಂ ದೇಶದಿಂದ ಕಳಪೆ ಮಟ್ಟದ ಕಾಳುಮೆಣಸು ಭಾರತಕ್ಕೆ ಆಗಮಿಸಿದ್ದು ಮತ್ತು ಈ ಕಾಳುಮೆಣಸನ್ನೇ ಭಾರತದ ಕಾಳುಮೆಣಸು ಎಂದು ಕೆಲವರು ವಿದೇಶಕ್ಕೆ ರಫ್ತು ಮಾಡಿದ್ದರಿಂದ ಕಾಳುಮೆಣಸಿನ ಮಾರುಕಟ್ಟೆಯೇ ಕಳೆದ 5 ವರ್ಷಗಳಿಂದ ಕುಸಿತವಾಗಿತ್ತು. ಪ್ರತಿ ಕ್ವಿಂಟಲ್‌ಗೆ . 30 ಸಾವಿರಕ್ಕೆ ದರ ಕುಸಿದಿದ್ದರಿಂದ ರೈತರೂ ನಿರಾಸಕ್ತರಾಗಿದ್ದರು. ಆದರೆ, ನಗರದ ಟಿಎಂಎಸ್ ಸಹಕಾರಿ ಸಂಸ್ಥೆಯ ಉತ್ತೇಜನ, ಸ್ಥಳೀಯ ಸಹಕಾರಿ ಸಂಘಗಳ ಪ್ರೋತ್ಸಾಹದಿಂದ ರೈತರು ಕಾಳುಮೆಣಸನ್ನು ಮತ್ತೆ ಬೆಳೆಯುತ್ತಿದ್ದಾರೆ. ಆದರೆ, ಪದೇ ಪದೇ ಕಾಡುವ ರೋಗ ರೈತರನ್ನು ಕಂಗಾಲಾಗಿಸಿದೆ.
ಮಲೆನಾಡು ಭಾಗದ ತೇವಾಂಶ ವಾತಾವರಣವೇ ಬಳ್ಳಿಗಳಿಗೆ ಕೊಳೆರೋಗ ಕಾಡಲು ಕಾರಣ. ಹಿಪ್ಪಲಿ ಬಳ್ಳಿಗೆ ಕಸಿ ಮಾಡಿ ಬಳ್ಳಿ ಬೆಳೆಸಬಹುದು. ರೋಗನಿರೋಧಕ ಶಕ್ತಿ ಇರುವ ಸ್ಥಳೀಯ ತಳಿಗಳನ್ನು ಸಂಶೋಧಿಸಲಾಗುತ್ತಿದ್ದು, ಸಮಯಾವಕಾಶ ತಗಲುತ್ತದೆ ಎಂದು ಕಾಳುಮೆಣಸು ಸಂಶೋಧನಾ ಕೇಂದ್ರ ತೆರಕನಳ್ಳಿಯ ಮುಖ್ಯಸ್ಥ ಡಾ. ಸುಧೀಶ ಕುಲಕರ್ಣಿ ಹೇಳುತ್ತಾರೆ.