
ನವದೆಹಲಿ(ಮಾ.28): ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಕೈಗಾದಲ್ಲಿ ಇನ್ನೆರಡು ಅಣು ಸ್ಥಾವರ ನಿರ್ಮಾಣ ಮಾಡಲು ನಿರ್ಧರಿಸಿರುವ ಕೇಂದ್ರ ಸರ್ಕಾರ, 2023ರಿಂದ ಕಾಮಗಾರಿಯನ್ನು ಅಧಿಕೃತವಾಗಿ ಆರಂಭಿಸಲಿದೆ. ಈ ಎರಡು ಅಣು ಘಟಕಗಳ ಕಾಮಗಾರಿ 5 ವರ್ಷದಲ್ಲಿ ಮುಗಿಯಲಿದೆ.
ಮುಂದಿನ ಮೂರು ವರ್ಷಗಳಲ್ಲಿ ‘ಫ್ಲೀಟ್ ಮೋಡ್’ ಆಧಾರದಲ್ಲಿ ಕೈಗಾದಲ್ಲಿ 2 ಸೇರಿ 10 ಅಣುಸ್ಥಾವರಗಳ ನಿರ್ಮಾಣ ಕಾಮಗಾರಿಯನ್ನು ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಯೋಜನಾ ಸ್ಥಳದಲ್ಲಿ ನೆಲವನ್ನು ಬಗೆದ ನಂತರ ಮೊದಲ ಬಾರಿ ಕಾಂಕ್ರಿಟ್ ಹಾಕುವ ಕೆಲಸ ನಡೆದರೆ ಅಣುಸ್ಥಾವರ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ಅರ್ಥ. ಮೊದಲ ಕಾಂಕ್ರಿಟ್ ಸುರಿದ 5 ವರ್ಷದೊಳಗೆ ಕಾಮಗಾರಿ ಮುಗಿಸುವ ಗುರಿ ಹೊಂದುವುದನ್ನು ‘ಫ್ಲೀಟ್ ಮೋಡ್’ ಎನ್ನಲಾಗುತ್ತದೆ.
ಕೈಗಾದ 5 ಮತ್ತು 6ನೇ ಸ್ಥಾವರ ಸೇರಿದಂತೆ ತಲಾ 700 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ದೇಶದ ವಿವಿಧ ಭಾಗಗಳ 10 ಅಣು ಸ್ಥಾವರಗಳನ್ನು ದೇಶಾದ್ಯಂತ ನಿರ್ಮಿಸಲು ಕೇಂದ್ರ ಸರ್ಕಾರ 2017ರಲ್ಲಿ ಅನುಮತಿ ನೀಡಿತ್ತು. ಒತ್ತಡೀಕೃತ ಭಾರ ಜಲ ರಿಯಾಕ್ಟರ್‌ಗಳು ಇವಾಗಿದ್ದು, ಇವುಗಳ ನಿರ್ಮಾಣಕ್ಕೆ 1.05 ಲಕ್ಷ ಕೋಟಿ ರು. ವೆಚ್ಚವಾಗುವ ಅಂದಾಜಿದೆ.
ಇದೇ ಮೊದಲು:
ಏಕಕಾಲಕ್ಕೆ 10 ಅಣು ಶಕ್ತಿ ರಿಯಾಕ್ಟರ್‌ಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದೇ ಮೊದಲು. ಇದರಿಂದ ನಿರ್ಮಾಣ ವೆಚ್ಚ ಹಾಗೂ ಸಮಯ ಕಡಿಮೆ ಆಗಲಿದೆ. ಈ ಅಣುಸ್ಥಾವರಗಳಿಗೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಅಣು ಇಂಧನ ಇಲಾಖೆಯ ಅಧಿಕಾರಿಗಳು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸದೀಯ ಸಮಿತಿಗೆ ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ರಾವತ್‌ಭಾಟಾದಲ್ಲಿ 1960ರಲ್ಲಿ ದೇಶದ ಮೊದಲ ಅಣು ಶಕ್ತಿ ರಿಯಾಕ್ಟರ್ ಸ್ಥಾಪನೆಯಾಗಿತ್ತು. ಸದ್ಯ ಭಾರತದಲ್ಲಿ 22 ಅಣು ರಿಯಾಕ್ಟರ್‌ಗಳು ಇದ್ದು, 6780 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ. ಕಳೆದ ವರ್ಷ ಜ.10ರಂದು ಗುಜರಾತ್‌ನ ಕಾಕ್ರಾಪಾರ್‌ನ 770 ಮೆಗಾವ್ಯಾಟ್ ಸಾಮರ್ಥ್ಯದ ರಿಯಾಕ್ಟರ್ ಅನ್ನು ಗ್ರಿಡ್‌ಗೆ ಸಂಪರ್ಕಿಸಲಾಗಿತ್ತು. ಆದರೆ ಅಲ್ಲಿ ವಾಣಿಜ್ಯ ಉತ್ಪಾದನೆ ಆರಂಭವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ