ಅಬ್ಬರಿಸಿದ ಕಲಾಂ-4 ಕ್ಷಿಪಣಿ: ಭಾರತದ ಪರಮಾಣು ಸಬ್‌ಮರೀನ್ ಸಾಮರ್ಥ್ಯ ಅನಾವರಣ

By Girish Linganna  |  First Published Nov 28, 2024, 4:30 PM IST

ಭಾರತವು ತನ್ನ K-4 ಜಲಾಂತರ್ಗಾಮಿ-ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿ (SLBM) ಅನ್ನು ಹೊಸದಾಗಿ ನಿಯೋಜಿಸಲಾದ ಪರಮಾಣು-ಚಾಲಿತ ಜಲಾಂತರ್ಗಾಮಿ INS ಅರಿಘಾತ್‌ನಿಂದ ಪರೀಕ್ಷಿಸಿದೆ. ಇದು ಭಾರತದ ಪರಮಾಣು ನಿರೋಧಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ, ಅದರ ರಕ್ಷಣಾ ಕಾರ್ಯತಂತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಗುರುತಿಸುತ್ತದೆ.


ಗಿರೀಶ್ ಲಿಂಗಣ್ಣ I ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ ತನ್ನ ಕೆ-4 ಸಬ್‌ಮರೀನ್ ಲಾಂಚ್ಡ್ ಬ್ಯಾಲಿಸ್ಟಿಕ್ ಮಿಸೈಲ್ (ಸಬ್‌ಮರೀನ್ ಮೂಲಕ ಉಡಾವಣೆಗೊಳಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿ - ಎಸ್ಎಲ್‌ಬಿಎಂ) ಅನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿತು. ಈ ಕ್ಷಿಪಣಿ ಪರಮಾಣು ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಪರೀಕ್ಷೆಯನ್ನು ನೂತನವಾಗಿ ನಿಯೋಜನೆಗೊಂಡಿರುವ, ಪರಮಾಣು ಚಾಲಿತ ಸಬ್‌ಮರೀನ್ ಆದ ಐಎನ್ಎಸ್ ಅರಿಘಾತ್ ಮೂಲಕ ನಡೆಸಲಾಯಿತು. ಈ ಪರೀಕ್ಷೆಯನ್ನು, ನವೆಂಬರ್ 27, ಬುಧವಾರದಂದು ಬೆಳಗ್ಗೆ ವಿಶಾಖಪಟ್ಟಣಂ ತೀರಕ್ಕೆ ಸನಿಹದಲ್ಲಿ, ಬಂಗಾಳ ಕೊಲ್ಲಿಯಲ್ಲಿ ನಡೆಸಲಾಯಿತು. ಕೆ-4 ಕ್ಷಿಪಣಿ ಘನ ಇಂಧನ ಚಾಲಿತವಾಗಿದ್ದು, 6,000 ಟನ್ ತೂಕದ ಸಬ್‌ಮರೀನ್ ನಿಂದ ಉಡಾವಣೆಗೊಳಿಸಿದಾಗ, ಗರಿಷ್ಠ 3,500 ಕಿಲೋಮೀಟರ್ ದೂರದ ತನಕ ಇರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದಾಗಿದೆ.

Tap to resize

Latest Videos

ಐಎನ್ಎಸ್ ಅರಿಘಾತ್ ಭಾರತದ ಎರಡನೇ ಪರಮಾಣು ಚಾಲಿತ ಜಲಾಂತರ್ಗಾಮಿಯಾಗಿದ್ದು, ಪರಮಾಣು ಶಸ್ತ್ರಾಸ್ತ್ರಗಳ ಅಪಾಯವನ್ನು ನಿಗ್ರಹಿಸುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಿದೆ. ಈ ಸಬ್‌ಮರೀನ್ ಅನ್ನು ಪರಮಾಣು ಸಿಡಿತಲೆಗಳನ್ನು ಹೊಂದಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಯ್ಯಲು ನಿರ್ಮಿಸಲಾಗಿದ್ದು, ನೌಕಾ ದಳದ ಪರಿಭಾಷೆಯಲ್ಲಿ ಸಾಮಾನ್ಯವಾಗಿ ಎಸ್ಎಸ್‌ಬಿಎನ್ (ಶಿಪ್ ಸಬ್‌ಮರ್ಸಿಬಲ್ ಬ್ಯಾಲಿಸ್ಟಿಕ್ ನ್ಯೂಕ್ಲಿಯರ್) ಎಂದು ಕರೆಯಲ್ಪಡುತ್ತದೆ.

ಭಾರತದ ಮೊದಲ ಪರಮಾಣು ಸಬ್‌ಮರೀನ್ ಆಗಿರುವ ಐಎನ್ಎಸ್ ಅರಿಹಂತ್ 750 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಕೆ-15 ಕ್ಷಿಪಣಿಗಳನ್ನು ಹೊಂದಿದೆ. ಆದರೆ ಐಎನ್ಎಸ್ ಅರಿಘಾತ್ ಸಬ್‌ಮರೀನ್ ಅನ್ನು ಹೆಚ್ಚು ಆಧುನಿಕವಾದ ಕೆ-4 ಕ್ಷಿಪಣಿಗಳನ್ನು ಒಯ್ಯುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಕ್ಷಿಪಣಿ ಗರಿಷ್ಠ 3,500 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ಆಕ್ರಮಣ ನಡೆಸುವ ಸಾಮರ್ಥ್ಯ ಹೊಂದಿದೆ.

ಐಎನ್ಎಸ್ ಅರಿಘಾತ್ ಸಬ್‌ಮರೀನ್ ಸೇರ್ಪಡೆ ಭಾರತದ ಪರಮಾಣು ಸಾಮರ್ಥ್ಯಕ್ಕೆ ಬಹುದೊಡ್ಡ ಉತ್ತೇಜನವಾಗಿದೆ. ಈ ಜಲಾಂತರ್ಗಾಮಿ ಭಾರತಕ್ಕೆ ನೀರಿನಾಳದಲ್ಲಿ ಅವಿತಿರುವ, ಪರಮಾಣು ಚಾಲಿತ ಜಲಾಂತರ್ಗಾಮಿಯಿಂದ ಕ್ಷಿಪಣಿಗಳನ್ನು ಉಡಾವಣೆಗೊಳಿಸಲು ಅನುಕೂಲ ಕಲ್ಪಿಸಿದೆ. ಇದರಿಂದಾಗಿ ಭಾರತದ ರಕ್ಷಣಾ ಕಾರ್ಯತಂತ್ರ ಹೆಚ್ಚು ನಂಬಿಕಾರ್ಹವೂ, ನಿಗ್ರಹಿಸಲು ಕಷ್ಟಕರವೂ ಆಗಿದೆ. ಇದು ಅಪಾಯಗಳನ್ನು ನಿಗ್ರಹಿಸುವ ಭಾರತದ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ.

ಭಾರತ ಈಗ ತನ್ನ ಮೂರನೇ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯಾದ ಐಎನ್ಎಸ್ ಅರಿದಮನ್ ಅನ್ನು 2025ರ ಆರಂಭದಲ್ಲಿ ತನ್ನ ನೌಕಾ ಬಳಗಕ್ಕೆ ಸೇರ್ಪಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. 7,000 ಟನ್ ತೂಕ ಹೊಂದಿರುವ ಐಎನ್ಎಸ್ ಅರಿದಮನ್ ಭಾರತದ ಸಮುದ್ರ ಆಧಾರಿತ ಪರಮಾಣು ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ.

ಕೆ-4 ಸಬ್‌ಮರೀನ್ ಉಡಾಯಿತ ಬ್ಯಾಲಿಸ್ಟಿಕ್ ಕ್ಷಿಪಣಿಯ ಪ್ರಮುಖ ವೈಶಿಷ್ಟ್ಯಗಳು

ಕೆ-4, ಅಥವಾ ಕಲಾಂ-4 ಎನ್ನುವುದು ಒಂದು ಅತ್ಯಾಧುನಿಕ ಗುಣಮಟ್ಟದ ಪರಮಾಣು ಸಿಡಿತಲೆಗಳನ್ನು ಒಯ್ಯಬಲ್ಲ, ಸಬ್‌ಮರೀನ್‌ಗಳಿಂದ ಉಡಾಯಿಸಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಅಭಿವೃದ್ಧಿ ಪಡಿಸಿದೆ. ಈ ಆಧುನಿಕ ಕ್ಷಿಪಣಿ ಗರಿಷ್ಠ 4,000 ಕಿಲೋಮೀಟರ್ ತನಕದ ವ್ಯಾಪ್ತಿ ಹೊಂದಿದ್ದು, ಕಡಿಮೆ ವ್ಯಾಪ್ತಿಯ, ಕರಾವಳಿ ವ್ಯಾಪ್ತಿಗೆ ಸೀಮಿತವಾಗಿದ್ದ ಕೆ-15 ಕ್ಷಿಪಣಿಗೆ ಹೋಲಿಸಿದರೆ ಸಾಕಷ್ಟು ಹೆಚ್ಚಿನ ದೂರಕ್ಕೆ ಕ್ರಮಿಸಬಲ್ಲದು.

17 ಟನ್ ತೂಕ, 12 ಮೀಟರ್ ಉದ್ದ ಮತ್ತು 1.3 ಮೀಟರ್ ವ್ಯಾಸ ಹೊಂದಿರುವ ಕೆ-4 ಕ್ಷಿಪಣಿ, 2,500 ಕೆಜಿ ತೂಕದ ಪರಮಾಣು ಸಿಡಿತಲೆಯನ್ನು ಹೊಂದಿದೆ. ಇದು ಎರಡು ಹಂತಗಳ ಘನ ರಾಕೆಟ್ ಮೋಟರ್ ಹೊಂದಿದ್ದು, ನಂಬಿಕಾರ್ಹ ಮತ್ತು ಹೆಚ್ಚು ಸಾಮರ್ಥ್ಯಶಾಲಿ ಪ್ರೊಪಲ್ಷನ್ ಒದಗಿಸುತ್ತದೆ. ಅರಿಹಂತ್ ವರ್ಗದ ಸಬ್‌ಮರೀನ್‌ಗಳಿಗೆ ಅಳವಡಿಸುವ ಸಲುವಾಗಿ ವಿನ್ಯಾಸಗೊಂಡಿರುವ ಕೆ-4 ಕ್ಷಿಪಣಿ ಭಾರತದ ಸಮುದ್ರ ಆಧಾರಿತ ಪರಮಾಣು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿ, ಕಾರ್ಯತಂತ್ರದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಶಕ್ತಿ ನೀಡಿದೆ.

ಕೆ-4 ಕ್ಷಿಪಣಿಯ ರಹಸ್ಯ ಪರೀಕ್ಷೆ: ಪ್ರಮುಖ ಮಾಹಿತಿಗಳು

ಜನವರಿ 2010ರಲ್ಲಿ, ಭಾರತ ವಿಶಾಖಪಟ್ಟಣಂ ಬಳಿ ತನ್ನ ಕೆ-4 ಕ್ಷಿಪಣಿಯ ರಹಸ್ಯ ಪರೀಕ್ಷೆ ನಡೆಸಿತು. ಆಗ 10 ಮೀಟರ್ ಉದ್ದ ಮತ್ತು 1.3 ಮೀಟರ್ ಅಗಲವಿದ್ದ ಈ ಕ್ಷಿಪಣಿಯನ್ನು ಅದರ ಕಪ್ಪು ಮತ್ತು ಬಿಳಿ ವಿನ್ಯಾಸದಿಂದ ಗುರುತಿಸಲಾಗುತ್ತಿತ್ತು. ಇದನ್ನು ನೀರಿನಲ್ಲಿ 50 ಮೀಟರ್‌ಗಳಷ್ಟು ಆಳದಲ್ಲಿ ಅಳವಡಿಸಲಾಗಿದ್ದ ತೇಲುವ ವೇದಿಕೆಯಂತಹ ರಚನೆಯಿಂದ ಉಡಾವಣೆಗೊಳಿಸಲಾಗಿತ್ತು. ಈ ಕ್ಷಿಪಣಿ ಯಶಸ್ವಿಯಾಗಿ ನೀರಿನಿಂದ ಮೇಲೆ ಸಾಗಿ, ತನ್ನ ನೀರಿನಾಳದಿಂದ ಉಡಾವಣೆಗೊಳ್ಳಬಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಿತು.

ಸಾರ್ವಜನಿಕರ ಬಳಕೆಗೆ ಸಿದ್ಧವಾದ ಭಾರತದ ಸ್ವಂತ ಜಿಪಿಎಸ್: ನಾವಿಕ್ ಯೋಜನೆಯ ಪ್ರಯೋಜನಗಳು

ಎರಡನೇ ಪರೀಕ್ಷೆಯೂ ವಿಶಾಖಪಟ್ಟಣಂ ಪ್ರದೇಶದಲ್ಲೇ ಯಶಸ್ವಿಯಾಗಿ ನೆರವೇರಿ, ಪ್ರತಿ ಚದರ ಸೆಂಟಿಮೀಟರ್‌ಗೆ 50 ಕೆಜಿಯಷ್ಟು ಅಧಿಕ ನೀರಿನ ಒತ್ತಡವನ್ನೂ ನಿಭಾಯಿಸುವ ಕೆ-4 ಕ್ಷಿಪಣಿಯ ಸಾಮರ್ಥ್ಯವನ್ನು ಪ್ರದರ್ಶಿಸಿತು. 20 ಟನ್ ತೂಕದ ಈ ಕ್ಷಿಪಣಿ ತಾನು ನೀರಿನಾಳದಲ್ಲಿರುವ ಉಡಾವಣಾ ವೇದಿಕೆಯಿಂದ ಚಿಮ್ಮಿ, ರಾಕೆಟ್ ಬೂಸ್ಟರ್ ಅನ್ನು ಚಾಲ್ತಿಗೊಳಿಸಿ, ತನ್ನ ಹಾರಾಟ ಪಥದಲ್ಲಿ ಪರಿಣಾಮಕಾರಿಯಾಗಿ ಸಾಗಿ, ನೀರಿನಾಳದ ಸವಾಲಿನ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಬಲ್ಲೆ ಎಂದು ಸಾಬೀತುಪಡಿಸಿತ್ತು.

ಮರದ ಉಪಗ್ರಹಗಳು: ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯ!


 

click me!