ಬೌದ್ಧ ಧರ್ಮವನ್ನು ಬೋಧಿಸುವ ಸ್ವಾತಂತ್ರ್ಯ ಭಾರತದಲ್ಲಿ ಮಾತ್ರವಿದೆ ಹೊರತು ಚೀನಾದಲ್ಲಿ ಅಲ್ಲ:ದಲೈ ಲಾಮಾ

Published : Jul 14, 2025, 06:53 PM IST
Richard Gere at Dalai Lamam birthday (Photo/ANI)

ಸಾರಾಂಶ

ತಮ್ಮ 90ನೇ ಜನ್ಮದಿನದ ಸಮ್ಮೇಳನದಲ್ಲಿ, ಭಾರತದ ಆತಿಥ್ಯಕ್ಕೆ ದಲೈ ಲಾಮಾ ಕೃತಜ್ಞತೆ ಸಲ್ಲಿಸಿದ್ದಾರೆ. ಟಿಬೆಟ್‌ನ ಸ್ವಾತಂತ್ರ್ಯ ,ಸಂಸ್ಕೃತಿಯ ರಕ್ಷಣೆಯ ಕುರಿತು ಒತ್ತು ನೀಡಿದ್ದಾರೆ. ಭಾರತದಲ್ಲಿ ಟಿಬೆಟಿಯನ್ ಮಕ್ಕಳಿಗೆ ಆಧುನಿಕ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಕಲಿಯಲು ಭಾರತ  ನೀಡಿದ ಬೆಂಬಲಕ್ಕೆ ಋಣಿ ಎಂದರು

ದೆಹಲಿ: ತನ್ನ 90ನೇ ಜನ್ಮದಿನದ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾದ ಒಂದು ದಿನದ ಸಮ್ಮೇಳನದಲ್ಲಿ, ಟಿಬೆಟಿಯನ್ನರ ಆಧ್ಯಾತ್ಮಿಕ ಧರ್ಮಗುರು ದಲೈ ಲಾಮಾ ಅವರು ತಮ್ಮ ವಿಶೇಷ ಸಂದೇಶದಲ್ಲಿ ನಾವು ಟಿಬೆಟಿಯನ್ನರು, 1959ರಿಂದಲೇ ಭಾರತ ಸರ್ಕಾರ ಹಾಗೂ ಭಾರತೀಯ ಜನರು ತೋರಿಸುತ್ತಿರುವ ಆತ್ಮೀಯ ಆತಿಥ್ಯಕ್ಕಾಗಿ ಆಳವಾದ ಕೃತಜ್ಞತೆ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಈ ಹೇಳಿಕೆ ಮೂಲಕ ಅವರು ಪರೋಕ್ಷವಾಗಿ ಟಿಬೆಟ್ ಮೇಲಿನ ಚೀನಾದ ಹಕ್ಕನ್ನು ಪ್ರಶ್ನಿಸಿದಂತಾಗಿದೆ. ಟಿಬೆಟ್ ಮೇಲಿನ ಚೀನಾದ ಕಮ್ಯುನಿಸ್ಟ್ ಆಕ್ರಮಣದ ಬಳಿಕ, ನನ್ನನ್ನೂ ಸೇರಿದಂತೆ ಅನೇಕ ಟಿಬೆಟಿಯನ್ನರು ಭಾರತಕ್ಕೆ ಪಾಲಾಯನ ಮಾಡಿಕೊಂಡು ಬಂದು, ಈಗಾಗಲೇ 66 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದೆ ಎಂದು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ನೆನಪಿಸಿಕೊಂಡರು.

ಸಮ್ಮೇಳನದಲ್ಲಿ ಅವರ ಆಪ್ತಮಿತ್ರ ಮತ್ತು ಪ್ರಸಿದ್ಧ ವಿದ್ವಾಂಸರಾದ ಸ್ಯಾಮ್‌ಧೋಂಗ್ ರಿನ್‌ಪೋಚೆ ಅವರು ಓದಿದ ಲಿಖಿತ ಸಂದೇಶದಲ್ಲಿ, ಭಾರತವನ್ನು “ಆರ್ಯ ಭೂಮಿ” ಎಂದು ಕರೆದ ದಲೈ ಲಾಮಾ, “ಇಲ್ಲಿ ಭಾರತದಲ್ಲಿ ನನಗೆ ಪ್ರಾಚೀನ ಭಾರತೀಯ ಜ್ಞಾನವನ್ನು ಅಧ್ಯಯನ ಮಾಡುವ ಅವಕಾಶ ಮತ್ತು ಸ್ವಾತಂತ್ರ್ಯ ಲಭಿಸಿದೆ” ಎಂದು ಬರೆದಿದ್ದಾರೆ. ಬುದ್ಧನ ಭೂಮಿಯಾಗಿರುವ, ವಿಶ್ವದ ಅತ್ಯಂತ ಜನಸಾಂಖ್ಯಿಕ ದೇಶ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ಭಾರತದೊಂದಿಗೆ, ನಾನು “ವಿಶೇಷ ನಿಕಟತೆಯ ಅನುಭವ” ಮಾಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

14ನೇ ದಲೈ ಲಾಮಾ ಅವರು ಜಗತ್ತಿನ ಮೇಲೆ ಬೀರಿದ ಆಳವಾದ ಪ್ರಭಾವವನ್ನು ಸ್ಮರಿಸುತ್ತಾ, ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟವು ಆಯೋಜಿಸಿದ್ದ ಈ ಸಮ್ಮೇಳನದಲ್ಲಿ, ಸುಮಾರು 500 ಮಂದಿ ಪ್ರಸಿದ್ಧ ಬೌದ್ಧ ಸನ್ಯಾಸಿಗಳು ಹಾಗೂ ವಿದ್ವಾಂಸರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಂಗೀಕರಿಸಲಾದ ಘೋಷಣೆಯಲ್ಲಿ, ಶ್ರೀಮಂತ ಟಿಬೆಟಿಯನ್ ಸಂಸ್ಕೃತಿ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ನಿರಂತರವಾಗಿ ರಕ್ಷಿಸುವ ಅವರ ಕಾರ್ಯಕ್ಕಾಗಿ ದಲೈ ಲಾಮಾ ಅವರನ್ನು ಪ್ರಶಂಸಿಸಲಾಯಿತು.

“ದಲೈ ಲಾಮಾ ಅವರ ಇತ್ತೀಚಿನ ಹೇಳಿಕೆ, ಅವರ ಪುನರ್ಜನ್ಮದ ಪರಂಪರೆಯನ್ನು ಮುಂದುವರಿಸುವ ವಿಷಯವನ್ನು ದೃಢಪಡಿಸುತ್ತದೆ ಮತ್ತು ಅದರಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪವಿಲ್ಲದೆ ಟಿಬೆಟಿಯನ್ ಜನರೇ ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಯ್ದುಕೊಳ್ಳಬೇಕೆಂಬ ದೃಢ ನಿಲುವನ್ನು ಸೂಚಿಸುತ್ತದೆ,” ಎಂದು ತಮ್ಮ ಘೋಷಣೆಯಲ್ಲಿ ಹೇಳಿದ್ದಾರೆ. ದಲೈ ಲಾಮಾ ಅವರ ಪವಿತ್ರ ಸಂಸ್ಥೆಯನ್ನು ರಕ್ಷಿಸುವಲ್ಲಿ ಅವರು ತೋರಿಸುತ್ತಿರುವ ಬುದ್ಧಿವಂತಿಕೆ, ವಿಶೇಷವಾಗಿ ಅದರ ಭವಿಷ್ಯದ ಕುರಿತು ಅವರ ಸ್ಪಷ್ಟ ಹಾಗೂ ಧೈರ್ಯಶಾಲಿ ನಿಲುವು, ಆಧುನಿಕ ಜಗತ್ತಿನಲ್ಲಿ ಆಧ್ಯಾತ್ಮಿಕ ಸಮಗ್ರತೆಯ ದೀಪವಾಗಿಯೇ ಬೆಳಗುತ್ತಿದೆ ಎಂದೂ ಘೋಷಣೆ ವಿವರಿಸಿದೆ.

ಬುದ್ಧನ ಬೋಧನೆಗಳು ಸೇರಿರುವ ಭಾರತೀಯ ಪ್ರಾಚೀನ ಜ್ಞಾನವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಿದರೆ, ಜಗತ್ತಿನಲ್ಲಿ ಶಾಂತಿ ಮತ್ತು ಸಂತೋಷ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ ಎಂದು ದಲೈ ಲಾಮಾ ತಮ್ಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ನಾವು ಟಿಬೆಟಿಯನ್ನರು ಭಾರತಕ್ಕೆ ಬಂದ ನಂತರ, ಟಿಬೆಟಿಯನ್ ಮಕ್ಕಳು ಆಧುನಿಕ ಶಿಕ್ಷಣವನ್ನು ಪಡೆಯುವುದರೊಂದಿಗೆ, ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಕಲಿಯಲು ಶಾಲೆಗಳ ಸ್ಥಾಪನೆಯನ್ನು ಭಾರತ ಸರ್ಕಾರ ಬಲವಾಗಿ ಬೆಂಬಲಿಸಿತು ಎಂದು ದಲೈ ಲಾಮಾ ಹೇಳಿದರು.

ಬೌದ್ಧ ಕಲಿಕೆ ಮತ್ತು ಆಚರಣೆಗಳ ಜಾಗತಿಕ ಕೇಂದ್ರವಾಗಿ ಭಾರತದ ವಿಶಿಷ್ಟ ಹಾಗೂ ಪ್ರಮುಖ ಪಾತ್ರವನ್ನು ಇನ್ನಷ್ಟು ಹೊಳೆಯುವಂತೆ ಮಾಡಿದೆ. ಇದನ್ನು ದಲೈ ಲಾಮಾ ಅವರ ಕಚೇರಿ ಸ್ಪಷ್ಟಪಡಿಸಿದ್ದು, ಈ ಕ್ಷೇತ್ರದಲ್ಲಿ ಭಾರತವು ಚೀನಾದ ನಿರ್ಬಂಧಿತ ಮತ್ತು ರಾಜಕೀಯಗೊಳಿಸಿದ ವಾತಾವರಣವನ್ನು ಮೀರಿಸುತ್ತಿದೆ ಎಂದು ತಿಳಿಸಿದೆ. ಟಿಬೆಟಿಯನ್ನರು, ಲಡಾಖಿಗಳು ಮತ್ತು ಇತರ ಸ್ಥಳೀಯ ಸಮುದಾಯಗಳು ದಲೈ ಲಾಮಾ ಅವರಿಗೆ ನೀಡಿದ ಆತ್ಮೀಯ ಮತ್ತು ಉಲ್ಲಾಸಭರಿತ ಸ್ವಾಗತದ ನಡುವೆ, ದಲೈ ಲಾಮಾ ಭಾರತವು ಬೌದ್ಧ ಸಂಪ್ರದಾಯಗಳನ್ನು ಸಂರಕ್ಷಿಸುವ ಹಾಗೂ ಪೋಷಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಹೇಳಿದರು. ವಿಶೇಷವಾಗಿ, ಟಿಬೆಟಿಯನ್ ಬೌದ್ಧ ಸಂಸ್ಥೆಗಳ ಮೇಲೆ ಚೀನಾದ ಆಡಳಿತವು ನಡೆಸುತ್ತಿರುವ ವಿನಾಶಕ ಕ್ರಮಗಳ ಹಿನ್ನೆಲೆಯಲ್ಲಿದು ಮಹತ್ವ ಹೊಂದಿದೆ.

14 ನೇ ದಲೈ ಲಾಮಾ ಅವರ 90 ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಐಬಿಸಿ, ಬೌದ್ಧ ವಿದ್ವಾಂಸರು, ಸಂಶೋಧಕರು, ಸಾಧಕರು ಮತ್ತು ಹಲವಾರು ವರ್ಷಗಳಿಂದ ಅವರ ಜೊತೆಗೆ ಉತ್ತಮ ನಿಕಟ ಸಂಬಂಧ ಹೊಂದಿದ್ದ ವ್ಯಕ್ತಿಗಳು, ವಿದ್ವಾಂಸರು, ಸಂಶೋಧಕರು ಮತ್ತು ಪ್ರಖ್ಯಾತ ಆಧ್ಯಾತ್ಮಿಕ ನಾಯಕರು ಭಾನುವಾರ ದೆಹಲಿಯಲ್ಲಿ ದಿನವಿಡೀ ಸಮ್ಮೇಳನ ನಡೆಸಿದರು. ದೆಹಲಿ ಅಶೋಕ ಹೋಟೆಲ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಬೌದ್ಧ ಸನ್ಯಾಸಿಗಳ ಅತ್ಯುನ್ನತ ಶ್ರೇಣಿಯ ವ್ಯಕ್ತಿಗಳು ಬಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..