ನವದೆಹಲಿ(ಡಿ.30): ಇನ್ನು ಕೆಲವೇ ದಿನಗಳಲ್ಲಿ ಬಹುಶಃ ಇದೇ ವಾರ, ಭಾರತದಲ್ಲಿ ಕೋವಿಡ್ ಕೇಸುಗಳ ಸಂಖ್ಯೆ ‘ಸ್ಫೋಟಕ ಏರಿಕೆ’ ಕಾಣಲಿದೆ ಎಂದು ಬ್ರಿಟನ್ನಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ತಜ್ಞರೊಬ್ಬರು ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಒಮಿಕ್ರೋನ್ ರೂಪಾಂತರಿ ತಳಿಯಿಂದ ಸೋಂಕಿತರಾಗುವವರ ಸಂಖ್ಯೆ ಮತ್ತು ಒಟ್ಟಾರೆ ಕೋವಿಡ್ ಕೇಸುಗಳ ಸಂಖ್ಯೆ ಏರುತ್ತಿರುವುದರ ನಡುವೆಯೇ ಈ ಎಚ್ಚರಿಕೆ ಹೊರಬಿದ್ದಿರುವುದು 3ನೇ ಅಲೆಯ ಸಾಧ್ಯತೆಯನ್ನು ಇನ್ನಷ್ಟುಹೆಚ್ಚಿಸಿದೆ. ಆದರೆ, ಈ ಬಾರಿಯ ಅಲೆ ಬಹಳ ಕಡಿಮೆ ದಿನಗಳ ಕಾಲ ಇರುತ್ತದೆ ಎಂಬ ಸಮಾಧಾನಕರ ಸಂಗತಿಯನ್ನೂ ಕೇಂಬ್ರಿಜ್ ತಜ್ಞರು ಹೇಳಿದ್ದಾರೆ.
ಕೇಂಬ್ರಿಜ್ ವಿಶ್ವವಿದ್ಯಾಲಯದ ‘ಜಡ್ಜ್ ಬಿಸಿನೆಸ್ ಸ್ಕೂಲ್’ ಪ್ರೊಫೆಸರ್ ಪೌಲ್ ಕಟುಮನ್ ಅವರು ‘ಕೋವಿಡ್-19 ಇಂಡಿಯಾ ಟ್ರ್ಯಾಕರ್’ ಅಭಿವೃದ್ಧಿಪಡಿಸಿದ್ದಾರೆ. ಅದರ ಮೂಲಕ ಭಾರತದಲ್ಲಿನ ಕೋವಿಡ್ ಸ್ಥಿತಿಗತಿಯನ್ನು ಸಮೀಪದಿಂದ ಅಧ್ಯಯನ ನಡೆಸುತ್ತಿದ್ದಾರೆ.
undefined
ಈ ಹಿಂದೆ ಇವರು ಭಾರತದಲ್ಲಿ 2ನೇ ಅಲೆ ಮೇ ತಿಂಗಳಲ್ಲಿ ಜೋರಾಗಿ ಆಗಸ್ಟ್ ವೇಳೆಗೆ ಇಳಿಯುತ್ತದೆ ಎಂದು ಹೇಳಿದ್ದು ನಿಜವಾಗಿತ್ತು. ಈಗ ಅವರೇ 3ನೇ ಅಲೆ ಕೆಲವೇ ದಿನಗಳಲ್ಲಿ ‘ಸ್ಫೋಟಕ ರೂಪದಲ್ಲಿ’ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
11 ರಾಜ್ಯಗಳಲ್ಲಿ ಭಾರಿ ಏರಿಕೆ:
ಪೌಲ್ ಕಟುಮನ್ ನೀಡಿರುವ ಮಾಹಿತಿಯ ಪ್ರಕಾರ, ಭಾರತದ 11 ರಾಜ್ಯಗಳಲ್ಲಿ ಕೋವಿಡ್ ಸೋಂಕು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಆದರೆ, ಆ ರಾಜ್ಯಗಳು ಯಾವುವು ಎಂಬುದನ್ನು ಅವರು ಹೇಳಿಲ್ಲ. ಅಲ್ಲದೆ, ಭಾರತದಲ್ಲಿ 3ನೇ ಅಲೆಯ ಸೋಂಕು ಗರಿಷ್ಠಕ್ಕೆ ಹೋದಾಗ ನಿತ್ಯ ಎಷ್ಟುಕೇಸ್‌ಗಳು ಪತ್ತೆಯಾಗಬಹುದು ಎಂದು ಹೇಳುವುದು ಕಷ್ಟಎಂದಿದ್ದಾರೆ. ಇನ್ನು, ಈ ಅಲೆ ಬಹಳ ಬೇಗ ಇಳಿಕೆಯಾಗುತ್ತದೆ ಎಂದಷ್ಟೇ ಅವರು ಹೇಳಿದ್ದು, ಯಾವಾಗ ಇಳಿಕೆಯಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ.
ದೇಶದಲ್ಲಿ ಕೋವಿಡ್ 3ನೇ ಅಲೆ ಏಳುವ ಮುನ್ಸೂಚನೆ ಎಂಬಂತೆ ದೈನಂದಿನ ಕೋವಿಡ್ ಪ್ರಕರಣಗಳು ದಿಢೀರನೇ ಏರಿಕೆ ಕಂಡಿವೆ. ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ 9,195 ಪ್ರಕರಣಗಳು ದಾಖಲಾಗಿದ್ದು, ಇದು 20 ದಿನಗಳ ಗರಿಷ್ಠವಾಗಿದೆ. ಡಿ.9ರಂದು 9416 ಪ್ರಕರಣ ದಾಖಲಾಗಿದ್ದವು. ಆ ಬಳಿಕ ಸೋಂಕು 9 ಸಾವಿರ ದಾಟದೇ ಅದಕ್ಕಿಂತ ಕಡಿಮೆ ಅಂಕಿಯಲ್ಲಿ ಹೊಯ್ದಾಡುತ್ತಿತ್ತು. ಈಗ ಮತ್ತೆ 9 ಸಾವಿರದ ಗಡಿ ದಾಟಿರುವುದು ಆತಂಕದ ವಿಚಾರ.
ಅಲ್ಲದೆ ಮಂಗಳವಾರದ ಪ್ರಕರಣಗಳಿಗೆ (6358 ಕೇಸು) ಹೋಲಿಸಿದರೆ ಬುಧವಾರ ಪ್ರಕರಣ ಸಂಖ್ಯೆ ಶೇ.44ರಷ್ಟುಹೆಚ್ಚಾದಂತಾಗಿದೆ. ಇದೇ ಅವಧಿಯಲ್ಲಿ 302 ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ 24 ತಾಸುಗಳಲ್ಲಿ 1,546 ಸಕ್ರಿಯ ಪ್ರಕರಣಗಳು ಹೆಚ್ಚಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ 77,002ಕ್ಕೆ ಏರಿಕೆಯಾಗಿದೆ. ತನ್ಮೂಲಕ ಒಟ್ಟು ಪ್ರಕರಣಗಳು 3.48 ಕೋಟಿಗೆ, ಒಟ್ಟು ಸಾವು 4.8 ಲಕ್ಷಕ್ಕೆ ಏರಿಕೆಯಾಗಿದೆ.
128 ಹೊಸ ಒಮಿಕ್ರೋನ್ ಕೇಸು:
ಜೊತೆಗೆ ದೇಶದಲ್ಲಿ ಹೊಸದಾಗಿ 128 ಒಮಿಕ್ರೋನ್ ಪ್ರಕರಣಗಳು ದೃಢಪಟ್ಟಿವೆ. ಹಾಗಾಗಿ ಒಟ್ಟು ಒಮಿಕ್ರೋನ್ ಸೋಂಕು 781ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಅತಿ ಹೆಚ್ಚು 238 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ಮಹಾರಾಷ್ಟ್ರದಲ್ಲಿ 167, ಗುಜರಾತ್‌ನಲ್ಲಿ 73, ಕೇರಳದಲ್ಲಿ 65 ಮತ್ತು ತೆಲಂಗಾಣದಲ್ಲಿ 62 ಪ್ರಕರಣಗಳು ದಾಖಲಾಗಿದೆ.