Russia Ukraine Crisis 17 ವಿಮಾನಗಳ ಕಾರ್ಯಾಚರಣೆ, ಮತ್ತೆ 3772 ಮಂದಿ ಭಾರತಕ್ಕೆ

By Kannadaprabha News  |  First Published Mar 5, 2022, 4:15 AM IST

- ಇಂದು 2200 ಜನರನ್ನು ಕರೆತರುವ ನಿರೀಕ್ಷೆ

- ವಾಯುಸೇನೆಯ 3 ಸೇರಿ 17 ವಿಮಾನಗಳ ಕಾರ್ಯಾಚರಣೆ

- ಯುದ್ಧಭೂಮಿಯಲ್ಲಿ ಇನ್ನೂ 1000 ಜನ ಬಾಕಿ


ನವದೆಹಲಿ/ ಮುಂಬೈ (ಮಾ.5): ಯುದ್ಧಪೀಡಿತ ಉಕ್ರೇನ್‌ನಿಂದ (War Torn Ukraine) ಭಾರತೀಯರನ್ನು ಕರೆತರುವ ‘ಆಪರೇಷನ್‌ ಗಂಗಾ’ ಕಾರ್ಯಾಚರಣೆ (operation ganga) ಮತ್ತಷ್ಟು ಚುರುಕುಗೊಂಡಿದ್ದು, ಶುಕ್ರವಾರ 17 ವಿಮಾನಗಳ ಮೂಲಕ 3,772 ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಇದರೊಂದಿಗೆ ಈವರೆಗೆ 48 ವಿಮಾನಗಳ ಮೂಲಕ 10,887 ಮಂದಿ ಭಾರತಕ್ಕೆ ತಲುಪಿದಂತಾಗಿದೆ ವಿದೇಶಾಂಗ ಸಚಿವಾಲಯ (ministry of external affairs) ತಿಳಿಸಿದೆ. ಈ ನಡುವೆ ಯುದ್ಧಭೂಮಿಗಳಾದ ಖಾರ್ಕೀವ್‌ನಲ್ಲಿ 300 ಹಾಗೂ ಸುಮಿಯಲ್ಲಿ 700 ಜನ ಸೇರಿ 1000 ಜನ ಬಾಕಿ ಉಳಿದಿದ್ದಾರೆ ಎಂದು ಅದು ಹೇಳಿದೆ.

ಶುಕ್ರವಾರ ಹಂಗೇರಿಯ (hungary) ಬುಡಾಪೆಸ್ಟ್‌ನಿಂದ (Budapest) 177 ಜನರನ್ನು ಹೊತ್ತ ಗೋ ಫಸ್ಟ್‌ ವಿಮಾನ ಮತ್ತು ರೊಮೇನಿಯಾದ ಬುಕಾರೆಸ್ಟ್‌ನಿಂದ 185 ಜನರನ್ನು ಹೊತ್ತು ಹೊರಟ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಮುಂಬೈಗೆ ಬಂದಿಳಿದವು. ಇನ್ನು 630 ಜನರನ್ನು ಹೊತ್ತ ಭಾರತೀಯ ವಾಯುಸೇನೆಯ 3 ವಿಮಾನಗಳು ದೆಹಲಿಗೆ ಬಂದಿಳಿದವು. ಶನಿವಾರ 15 ವಿಮಾನಗಳಲ್ಲಿ ಮತ್ತೆ 2200 ಮಂದಿಯನ್ನು ವಾಪಸ್‌ ಕರೆತರುವ ನಿರೀಕ್ಷೆ ಇದೆ. ಶುಕ್ರವಾರದಿಂದ ಭಾನುವಾರದ ವರೆಗೆ ಇಂಡಿಗೋ ವಿಮಾನಯಾನ ಸಂಸ್ಥೆಯ 12 ವಿಮಾನಗಳು ಸ್ಥಳಾಂತರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು 2600 ಜನರನ್ನು ಕರೆತರಲಿವೆ. ಮಾ.10ರ ವರೆಗೂ ಸ್ಥಳಾಂತರ ಕಾರ್ಯಾಚರಣೆ ನಡೆಯಲಿದೆ.

ಉಕ್ರೇನ್‌-ರಷ್ಯಾ ಯುದ್ಧ ಆರಂಭವಾದಾಗಿನಿಂದ ಅಂದರೆ ಫೆ.24ರಿಂದ ಭಾರತ ‘ಆಪರೇಷನ್‌ ಗಂಗಾ’ ಕಾರ್ಯಾಚರಣೆ ಆರಂಭಿಸಿದ್ದು, ಉಕ್ರೇನ್‌ನ ನೆರೆಯ ದೇಶಗಳಾದ ರೊಮೇನಿಯಾ (romania), ಹಂಗೇರಿ, ಸ್ಲೋವಾಕಿಯಾ (slovakia) ಮತ್ತು ಪೋಲೆಂಡ್‌ನಿಂದ (poland) ಭಾರತೀಯರನ್ನು ಸ್ಥಳಾಂತರಿಸುತ್ತಿದೆ.

ರಷ್ಯಾದಿಂದ ಭಾರತೀಯರ ಕರೆತರಲು 2 ವಾಯುಪಡೆ ವಿಮಾನ ಸಿದ್ಧ
ನವದೆಹಲಿ:
ಯುದ್ಧಪೀಡಿತ ಉಕ್ರೇನ್‌ನ ಖಾರ್ಕೀವ್‌ ಮತ್ತು ಸುಮಿ (sumi)ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಷ್ಯಾದ ಮೂಲಕ (Russia Route) ಭಾರತಕ್ಕೆ ಕರೆತರಲು ವಾಯುಪಡೆಯ ಎರಡು ಐಎಲ್‌- 76 (IL-76) ವಿಮಾನಗಳನ್ನು ಸಿದ್ಧವಾಗಿಟ್ಟಿರುವುದಾಗಿ ಭಾರತೀಯ ವಾಯುಪಡೆ ಶುಕ್ರವಾರ ಹೇಳಿದೆ. ಇದರೊಂದಿಗೆ ಆಪರೇಶನ್‌ ಗಂಗಾ ಎಂಬ ಯೋಜನೆಯಡಿ ಉಕ್ರೇನ್‌ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಸ್ಲೊವಾಕಿಯಾ, ಪೋಲೆಂಡ್‌ ಮತ್ತು ಹಂಗೇರಿಗಳಿಂದ ಭಾರತೀಯರನ್ನು ಈಗಾಗಲೇ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಈಗ ಸುಮಿ ಮತ್ತು ಖಾರ್ಕೀವ್‌ ನಗರಗಳಿಂದ ರಷ್ಯಾ ಸೇನೆಯ ಮೂಲಕ ಮಾಸ್ಕೋಗೆ ಭಾರತೀಯರನ್ನು ಸ್ಥಳಾಂತರಿಸುವುದು, ಅಲ್ಲಿಂದ ಭಾರತೀಯರನ್ನು ವಾಯುಪಡೆ ವಿಮಾನದ ಮೂಲಕ ಕರೆತರುವುದು ಭಾರತದ ಉದ್ದೇಶ. ಐಎಲ್‌-76 ವಿಮಾನ ರಷ್ಯಾ ಮೂಲದ ವಿಮಾನವಾಗಿದೆ.

ಇದಕ್ಕೂ ಮೊದಲು ಖಾರ್ಕೀವ್‌ ಮತ್ತು ಸುಮಿ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಮಾಸ್ಕೋಗೆ ಕರೆದೊಯ್ಯಲು ರಷ್ಯಾ ಸೇನೆ 130 ಬಸ್‌ಗಳನ್ನು ನಿಯೋಜನೆ ಮಾಡಿದ್ದಾಗಿ ಗುರುವಾರ ವರದಿಯಾಗಿತ್ತು. ಶುಕ್ರವಾರದವರೆಗೆ ಭಾರತೀಯ ವಾಯುಪಡೆಯ 7 ವಿಮಾನಗಳು 1,428 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿವೆ. ಈ 7 ವಿಮಾನಗಳು ಅಮೆರಿಕ ಮೂಲದ ಸಿ-17 ವಿಮಾನಗಳಾಗಿದ್ದವು.

Tap to resize

Latest Videos

Russia Ukraine war ಒಂದೇ ವಾರದಲ್ಲಿ ಮೂರು ಬಾರಿ ವೊಲೊಡಿಮಿರ್ ಝೆಲೆನ್ಸ್ಕಿ ಹತ್ಯೆಗೆ ಸ್ಕೆಚ್
ಕೀವ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಗುಂಡೇಟು
ನವದೆಹಲಿ:
ಉಕ್ರೇನ್‌ ರಾಜಧಾನಿ ಕೀವ್‌ನಿಂದ ಹೊರಡಲು ಅಣಿಯಾಗುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬ ಉಕ್ರೇನ್‌-ರಷ್ಯಾ ಸಮರದ ವೇಳೆ ಗುಂಡು ತಾಗಿ ಗಾಯಗೊಂಡಿದ್ದಾನೆ. ಗಾಯಾಳು ವಿದ್ಯಾರ್ಥಿಯ ಹೆಸರು, ದಿಲ್ಲಿ ಮೂಲದ ಹರ್ಜೋತ್‌ ಸಿಂಗ್‌ (Harjoth Singh) ಎಂದು ತಿಳಿದುಬಂದಿದೆ. ಈತನನ್ನು ಕೀವ್‌ ಸಿಟಿ (kiev City) ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆಲವು ದಿನಗಳ ಹಿಂದೆ ಖಾರ್ಕೀವ್‌ನಲ್ಲಿ (Kharkiev) ನಡೆದ ಶೆಲ್‌ ದಾಳಿಯಲ್ಲಿ ಕರ್ನಾಟಕ ವಿದ್ಯಾರ್ಥಿ ನವೀನ್‌ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.

Operation Ganga: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತ ಸರ್ಕಾರ ಏನೂ ಮಾಡ್ತಿಲ್ಲ ಎಂದ ವಿದ್ಯಾರ್ಥಿಗಳು
‘ಕೀವ್‌ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದುಬಂದಿದೆ. ಕೀವ್‌ ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಈ ಹಿಂದೆಯೇ ಸೂಚನೆ ನೀಡಿತ್ತು. ಯುದ್ಧದಲ್ಲಿ ಹಾರುವ ಗನ್‌ ಬುಲೆಟ್‌ಗಳು ಯಾವುದೇ ಧರ್ಮ ಅಥವಾ ರಾಷ್ಟ್ರೀಯತೆಯನ್ನು ನೋಡುವುದಿಲ್ಲ’ ಎಂದು ಪೊಲೆಂಡ್‌ನಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಚಿವ ವಿ.ಕೆ.ಸಿಂಗ್‌ ಹೇಳಿದ್ದಾರೆ. ಇನ್ನು ಘಟನೆಯ ಬಗ್ಗೆ ಆಸ್ಪತ್ರೆಯಿಂದಲೇ ವಿಡಿಯೋ ಕಾಲ್‌ ಮೂಲಕ ಹರ್ಜೋತ್‌ ಸಿಂಗ್‌ ಪ್ರತಿಕ್ರಿಯಿಸಿದ್ದಾನೆ. ‘ನನ್ನ ಭುಜದಿಂದ ಮತ್ತು ಎದೆಯಿಂದ ಆಸ್ಪತ್ರೆಯವರು ಗುಂಡುಗಳನ್ನು ಹೊರತೆಗೆದಿದ್ದಾರೆ. ನನ್ನ ಕಾಲು ಮುರಿದುಹೋಗಿದೆ. ನನ್ನನ್ನು ಕೀವ್‌ನಿಂದ ಹೊರಹೋಗಲು ನೆರವಿನ ಅವಶ್ಯಕತೆ ಇತ್ತು. ಆದರೆ ನನಗೆ ರಾಯಭಾರಿ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ. ಅಲ್ಲದೆ, ಗಾಯಗೊಂಡ ಬಳಿಕ ನನಗೆ ಭಾರತೀಯ ದೂತಾವಾಸದಿಂದ ಸ್ಪಷ್ಟಪ್ರತಿಕ್ರಿಯೆ ಲಭ್ಯವಾಗಿಲ್ಲ’ ಎಂದಿದ್ದಾನೆ.

click me!