
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81 ನೇ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತೆ ಜಮ್ಮು ಮತ್ತು ಕಾಶ್ಮೀರದ ಕುರಿತು ಕೆದಕಿ ಜಗತ್ತಿನೆದರು ಭಾರತ ಕೊಟ್ಟ ತಿರುಗೇಟಿಗೆ ಮತ್ತೆ ತಲೆತಗ್ಗಿಸಿಕೊಂಡು ನಿಂತ ಪ್ರಸಂಗ ನಡೆದಿದೆ.
ಈ ಹಿಂದೆಯೂ ಜಮ್ಮು ಕಾಶ್ಮೀರ ವಿಚಾರ ಪ್ರಸ್ತಾಪಿಸಿ ಪೆಟ್ಟು ತಿಂದಿದ್ದ ಪಾಕಿಸ್ತಾನ ಮತ್ತೆ ವಿಶ್ವನಾಯಕರ ಎದುರು ಮುಖಭಂಗ ಅನುಭವಿಸಿದೆ. ಪಾಕಿಸ್ತಾನ ಪ್ರಧಾನಿ ಹೇಳಿಕೆಗೆ ತಕ್ಕ ತಿರುಗೇಟು ನೀಡಿದ ಬಾರತ 'ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ'ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ' ಎಂದು ಖಡಕ್ ಆಗಿ ಹೇಳಿದೆ.
ಪಾಕಿಸ್ತಾನದ ಭಯೋತ್ಪಾದನೆ, ವಂಚನೆ ಮತ್ತು ದ್ವಂದ್ವ ನೀತಿಯಿಂದ ಭಾರತಕ್ಕಾಗಲಿ ಅಥವಾ ಜಗತ್ತಿಗಾಗಲಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಭಾರತೀಯ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ ಸ್ಪಷ್ಟವಾಗಿ ಹೇಳಿದ್ದಾರೆ.
ನ್ಯೂಯಾರ್ಕ್ ನಗರ ಮತ್ತು ವಿಶ್ವದ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯ 25 ನೇ ವಾರ್ಷಿಕೋತ್ಸವದ ಕೇವಲ ಎರಡು ವಾರಗಳ ಕಳೆದಿರುವ ಬೆನ್ನಲ್ಲೇ ಪಾಕಿಸ್ತಾನದ ಪ್ರತಿನಿಧಿಯಿಂದ ಸಾಮಾನ್ಯ ಸಭೆಯು ಕೆಲವು ವಿಚಿತ್ರ ಹೇಳಿಕೆಗಳನ್ನ ಕೇಳಿದೆ. ಪಾಕಿಸ್ತಾನದ ಈ ವಿಕೃತ ಹೇಳಿಕೆ ಈ ಸಂದರ್ಭವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಅದರ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನಿ ಮಿಲಿಟರಿಯ ಪ್ರಮುಖ ಅಕಾಡೆಮಿಯ ಪಕ್ಕದಲ್ಲಿ ವಾಸಿಸುತ್ತಿದ್ದ ಎಂಬುದು ಮರೆ ಮರೆಯಬಾರದು. ಇದು ಪಾಕಿಸ್ತಾನ ಉಗ್ರರಿಗೆ ಬೆಂಬಲ ಗೌರವ ತೋರಿಸಿದೆ ಎಂದರು.
ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ನೇತೃತ್ವದ ಒಕ್ಕೂಟವನ್ನು ಉಲ್ಲೇಖಿಸಲು ವಿರೋಧ ಪಕ್ಷಗಳು ಫಾರ್ಮ್ 47 ಸರ್ಕಾರ ಎಂಬ ಪದವನ್ನು ರಾಜಕೀಯವಾಗಿ ಬಳಸುತ್ತವೆ. ವಿರೋಧ ಪಕ್ಷಗಳು, ಮುಖ್ಯವಾಗಿ ಇಮ್ರಾನ್ ಖಾನ್ ಅವರ ಪಿಟಿಐ, 'ಶಹಬಾಜ್ ಷರೀಫ್ ಸರ್ಕಾರವು ಚುನಾವಣಾ ಫಲಿತಾಂಶಗಳಲ್ಲಿ ಅಕ್ರಮ ಎಸಗಿದೆ' ಎಂದು ಆರೋಪಿಸಿದೆ.
ಪಾಕಿಸ್ತಾನ ತನ್ನದೇ ಜನರ ವಿರುದ್ಧ ನಡೆಸುತ್ತಿರುವ ಆಡಳಿತದಿಂದ ನಾವು ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳ ಧರ್ಮೋಪದೇಶಗಳನ್ನು ಕೇಳುವಂತಾಗಿದೆ. ಈ ಪಾಕಿಸ್ತಾನ ಸರ್ಕಾರ ಇರುವುದು ಮಿಲಿಟರಿಯಿಂದ, ಮಿಲಿಟರಿಗಾಗಿ ಮತ್ತು ಮಿಲಿಟರಿಯಿಂದ ನಡೆಸಲ್ಪಡುವ ಸರ್ಕಾರವಾಗಿರುವುದರಿಂದ ಇದು ನಡೆಯುತ್ತಿದೆ. ಅವರ ಕೈಗೊಂಬೆ ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿ ನಾವು ಇರಬಾರದು ಎಂದು ಭಾರತೀಯ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ ಖಡಕ್ ಆಗಿ ಹೇಳಿದ್ದಾರೆ.
ಪಾಕಿಸ್ತಾನದ ವಾಸ್ತವ ಅದರ 27 ನೇ ತಿದ್ದುಪಡಿಯಲ್ಲಿ ಮತ್ತು ಅದರ ವಾಸ್ತವಿಕ ಆಡಳಿತಕ್ಕೆ ನೀಡಲಾದ ಜೀವಮಾನದ ವಿನಾಯಿತಿಯಲ್ಲಿದೆ. ಇಂಥವರಿಂದ ನಾವು ಉಪದೇಶಗಳನ್ನ ಕೇಳುತ್ತಿದ್ದೇವೆ. ಪಾಕಿಸ್ತಾನ ಹೇಗೆಂದರೆ ಹಗಲಿನಲ್ಲಿ ಭದ್ರತೆ ಬಗ್ಗೆ ಮಾತನಾಡುತ್ತಾರೆ. ರಾತ್ರಿಯಾದ್ರೆ ಭಯೋತ್ಪಾದನೆ ಮಾಡುತ್ತಾರೆ ಎಂದು ಗೆಹ್ಲೋಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 'ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ಜಗತ್ತಿಗೆ ತಿಳಿದಿದೆ. ಇಂಥವರು ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಮಾತನಾಡುತ್ತಾರೆ. ಇಂಥ ಹುಸಿ ಧಾರ್ಮಿಕ ಬೋಧನೆಗಳು ಜಗತ್ತನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದ ಭಾರತ.
ಜಮ್ಮು ಮತ್ತು ಕಾಶ್ಮೀರದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಭಾರತ, 'ಜಮ್ಮು ಮತ್ತು ಕಾಶ್ಮೀರ ನನ್ನ ದೇಶದ ಅವಿಭಾಜ್ಯ, ಬೇರ್ಪಡಿಸಲಾಗದ ಭಾಗ. ಅದು ಯಾವಾಗಲೂ ಹಾಗೆಯೇ ಇರುತ್ತದೆ. ಆದರೆ ನಾವು ಕಾಶ್ಮೀರದ ಬಗ್ಗೆ ಚರ್ಚಿಸಬೇಕಾದರೆ, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಮೇಲೆ ಕೇಂದ್ರೀಕರಿಸೋಣ ಎಂದು ಭಾರತ ತಿರುಗೇಟು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ