Venkaiah Naidu:ಭಾರತ ಜಾಗತಿಕ ಡ್ರೋನ್ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ; ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು!

By Suvarna News  |  First Published Nov 15, 2021, 9:35 PM IST
  • ನಗರಗಳಲ್ಲಿ ಮಾಲಿನ್ಯದಂತಹ ಒತ್ತಡದ ಸಮಸ್ಯೆಗಳಿಗೆ ತಾಂತ್ರಿಕ ಸಂಸ್ಥೆಗಳು ಪರಿಹಾರ ಅಗತ್ಯ
  • ಹೆಚ್ಚಿನ ತಾಂತ್ರಿಕ ಪುಸ್ತಕಗಳ ರಚನೆಗೆ ಕರೆ ನೀಡಿದ ಉಪ ರಾಷ್ಟ್ರಪತಿ
  • 5ಜಿ, AI, ರೋಬೋಟಿಕ್ಸ್‌ನಂತಹ ಹೊಸ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ
     

ಬೆಂಗಳೂರು(ನ.15):  ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ತಮ್ಮ ಪ್ರಸ್ತುತ ಕೋರ್ಸ್‌ಗಳನ್ನು ಪರಿಶೀಲಿಸಿ, ಉದಯೋನ್ಮುಖ ಜಾಗತಿಕ ಪ್ರವೃತ್ತಿಗಳಿಗೆ ಅನುಗುಣವಾಗಿ ಅವುಗಳನ್ನು ಹೊಂದಿಸಿಕೊಳ್ಳಬೇಕು ಅಥವಾ ರಾಷ್ಟ್ರೀಯ ಅಗತ್ಯಗಳಿಗೆ ಅನುಗುಣವಾಗಿ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು ಎಂದು ಉಪ ರಾಷ್ಟ್ರಪತಿ  ಎಂ. ವೆಂಕಯ್ಯ ನಾಯ್ಡು(M. Venkaiah Naidu)  ಕರೆ ನೀಡಿದರು.ಬೆಂಗಳೂರಿನಲ್ಲಿ ನಡೆದ ʻಪಿಇಎಸ್ ವಿಶ್ವವಿದ್ಯಾಲಯʼದ ಆರನೇ ಘಟಿಕೋತ್ಸವದಲ್ಲಿ ಮಾತನಾಡಿದ ಉಪರಾಷ್ಟ್ರಪತಿಯವರು, 4ನೇ ಕೈಗಾರಿಕಾ ಕ್ರಾಂತಿಯು ನಮ್ಮ ಹೊಸ್ತಿಲಲ್ಲಿದೆ. ಅದರ ಅತ್ಯುತ್ತಮ ಉಪಯೋಗವನ್ನು ಪಡೆಯಲು, ನಮ್ಮ ವಿಶ್ವವಿದ್ಯಾಲಯಗಳು 5ಜಿ ತಂತ್ರಜ್ಞಾನಗಳು, ಆರ್ಟಿಫಿಷಿಯಲ್ ಇಂಟಲಿಜೆನ್ಸ್(AI), ರೋಬೋಟಿಕ್ಸ್(robotics) ಮತ್ತು ಜೈವಿಕ ತಂತ್ರಜ್ಞಾನದಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ(Education Sector) ಭಾರತದ ಭವ್ಯ ಇತಿಹಾಸವನ್ನು ಉಲ್ಲೇಖಿಸಿದ ಅವರು, ಭಾರತವನ್ನು ಜ್ಞಾನ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ತಾಂತ್ರಿಕ ವಿಶ್ವವಿದ್ಯಾಲಯಗಳು ವಹಿಸಬೇಕಾದ ವಿಶೇಷ ಪಾತ್ರವನ್ನು ಒತ್ತಿ ಹೇಳಿದರು. ಖಾಸಗಿ ಸಂಸ್ಥೆಗಳಿಗೆ ಬಾಹ್ಯಾಕಾಶ ವಲಯದಲ್ಲಿ ಮುಕ್ತ ಅವಕಾಶ ಕಲ್ಪಿಸುವ ಸರಕಾರದ ನಿರ್ಧಾರವನ್ನು ಶ್ಲಾಘಿಸಿದ ಉಪರಾಷ್ಟ್ರಪತಿಯವರು, ʻಡಿಆರ್‌ಡಿಒʼ ಮತ್ತು ʻಇಸ್ರೋʼ ಸಹಯೋಗದೊಂದಿಗೆ ಎರಡು ಉಪಗ್ರಹಗಳನ್ನು ನಿರ್ಮಿಸಿದ್ದಕ್ಕಾಗಿ ಮತ್ತು ಉಡಾವಣೆ ಮಾಡಿದ್ದಕ್ಕಾಗಿ ಪಿಇಎಸ್ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದರು. "ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿ ಮತ್ತು ತಾಂತ್ರಿಕವಾಗಿ ಮುಂಚೂಣಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ನಾನು ನಮ್ಮ ಖಾಸಗಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.

Tap to resize

Latest Videos

undefined

ನ.17 ರಿಂದ 3 ದಿನ Bengaluru Tech Summit, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉದ್ಘಾಟನೆ

ಡ್ರೋನ್ ತಂತ್ರಜ್ಞಾನವು ಆರ್ಥಿಕತೆಯ ವಿವಿಧ ವಲಯಗಳಿಗೆ ನೀಡುವ ಅದ್ಭುತ ಪ್ರಯೋಜನಗಳ ಬಗ್ಗೆ ಗಮನ ಸೆಳೆದ ಶ್ರೀ ನಾಯ್ಡು ಅವರು ಹೊಸತನದ ಶೋಧ, ಐಟಿ ಮತ್ತು ಮಿತವ್ಯಯದ ಎಂಜಿನಿಯರಿಂಗ್‌ನಲ್ಲಿ ಸಾಂಪ್ರದಾಯಿಕ ಸಾಮರ್ಥ್ಯ ಹೊಂದಿರುವ ಭಾರತವು ಜಾಗತಿಕ ಡ್ರೋನ್ ಕೇಂದ್ರವಾಗಲು ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ, ಈ ವಲಯಕ್ಕೆ ನುರಿತ ಮಾನವ ಶಕ್ತಿಯನ್ನು ಸೃಷ್ಟಿಸಲು ಕರೆ ನೀಡಿದ ಅವರು, ಪಿಇಎಸ್ ವಿಶ್ವವಿದ್ಯಾಲಯವು ಡ್ರೋನ್ ತಂತ್ರಜ್ಞಾನದ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಕ್ರಿಯವಾಗಿ ಯೋಚಿಸುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿಗೆ ಬಹು-ವಿಷಯಗಳ ವಿಧಾನವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಉಪರಾಷ್ಟ್ರಪತಿಗಳು ಒತ್ತಿ ಹೇಳಿದರು. ಆರ್ಥಿಕತೆ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೈಕ್ಷಣಿಕ ಪೇಟೆಂಟ್‌ಗಳಿಗಿಂತಲೂ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಅಡಿಯಲ್ಲಿ ಅನುಷ್ಠಾನಯೋಗ್ಯ ಪೇಟೆಂಟ್‌ಗಳಿಗೆ ಹೆಚ್ಚಿನ ಒತ್ತು ನೀಡುವಂತೆ ವಿಶ್ವವಿದ್ಯಾಲಯಗಳಿಗೆ ಅವರು ಸಲಹೆ ನೀಡಿದರು. 

ವಿದೇಶಿ ಲೇಖಕರು ಪ್ರಕಟಿಸಿದ ಅನೇಕ ತಾಂತ್ರಿಕ ಪುಸ್ತಕಗಳನ್ನು ಭಾರತೀಯ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಬಳಸಲಾಗುತ್ತದೆ ಎಂಬ ವಿಷಯದ ಬಗ್ಗೆ ಗಮನ ಸೆಳೆದ ಅವರು, ಸಮಕಾಲೀನ ವಿಷಯಗಳ ಬಗ್ಗೆ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಪುಸ್ತಕಗಳನ್ನು ರಚಿಸುವಂತೆ ಭಾರತೀಯ ಶಿಕ್ಷಣ ತಜ್ಞರಿಗೆ ಸಲಹೆ ನೀಡಿದರು. "ಭಾರತೀಯ ಲೇಖಕರು ಪುಸ್ತಕಗಳನ್ನು ರಚಿಸಿದ್ದಾದರೆ, ಭಾರತೀಯ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಎಂಜಿನಿಯರಿಂಗ್ ಕೋರ್ಸ್ ವಿಷಯವನ್ನು ಉತ್ತಮವಾಗಿ, ಸಂದರ್ಭೋಚಿತಗೊಳಿಸಬಹುದು. ಇದರಿಂದ ಯುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾರತ, ರೈತರು ಮತ್ತು ಇತರ ಹಿಂದುಳಿದ ವರ್ಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಭಾರತೀಯ ಭಾಷೆಗಳಲ್ಲಿ ಅಧ್ಯಯನ ಸಾಮಗ್ರಿಗಳನ್ನು ರಚಿಸಲು ಮತ್ತು ಶೈಕ್ಷಣಿಕ ನಿಯತಕಾಲಿಕೆಗಳ ದೇಶೀಯ ಪ್ರಕಟಣೆಗೆ ಅವರು ಕರೆ ನೀಡಿದರು.

ಸಂಸದರ ವರ್ತನೆ ಹೇಗಿರಬೇಕೆಂದು ಪಕ್ಷಗಳ ಪ್ರಣಾಳಿಕೆಯಲ್ಲಿ ಇರಲಿ

ಸಾಮಾಜಿಕವಾಗಿ ಪ್ರಸ್ತುತವಾದ ಸಂಶೋಧನೆ ಮತ್ತು ತಂತ್ರಜ್ಞಾನಗಳ ಮಹತ್ವವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿಗಳು, ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯಂತಹ ಜಾಗತಿಕ ಆದ್ಯತೆಯ ವಿಷಯಗಳ ನಿಟ್ಟಿನಲ್ಲಿ ಕೆಲಸ ಮಾಡುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿದರು. "ಭಾರತೀಯ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ವರದಿಗಳನ್ನು ನಾವು ಆಗಾಗ್ಗೆ ಓದುತ್ತೇವೆ; ಸಮಾಜ, ವಿಶೇಷವಾಗಿ ಕೃಷಿಯಲ್ಲಿ ಎದುರಿಸುತ್ತಿರುವ ಇಂತಹ ಒತ್ತಡದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ರೂಪಿಸುವಂತೆ ನಾನು ನಮ್ಮ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.

ʻರಾಷ್ಟ್ರೀಯ ಶಿಕ್ಷಣ ನೀತಿ-2020ʼರ ಪರಿಣಾಮಕಾರಿ ಅನುಷ್ಠಾನಕ್ಕೆ ಕರೆ ನೀಡಿದ ಶ್ರೀ ನಾಯ್ಡು, ವಿದ್ಯಾರ್ಥಿಗಳ ಮಾತೃಭಾಷೆಯಲ್ಲಿ ಹೆಚ್ಚಿನ ತಾಂತ್ರಿಕ ಕೋರ್ಸ್‌ಗಳನ್ನು ಪರಿಚಯಿಸುವಂತೆ ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡಿದರು.

ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ವೃತ್ತಿಜೀವನದಲ್ಲಿ 'ಸೇವಾ ಮನೋಭಾವ'ವನ್ನು ಅಳವಡಿಸಿಕೊಳ್ಳುವಂತೆ ಮತ್ತು ಇಡೀ ಜಗತ್ತು ಸಂತೋಷವಾಗಿರಲಿ ಎಂಬ ಪ್ರಾಚೀನ ಭಾರತೀಯ ಮೌಲ್ಯವನ್ನು ಅನುಸರಿಸುವಂತೆ ಮನವಿ ಮಾಡಿದರು. ಸ್ವತಃ ಫಿಟ್ನೆಸ್ ಉತ್ಸಾಹಿಯಾಗಿರುವ ಶ್ರೀ ನಾಯ್ಡು ಅವರು, ಕ್ರೀಡೆ ಅಥವಾ ಯೋಗದಲ್ಲಿ ನಿಯಮಿತವಾಗಿ ಪಾಲ್ಗೊಳ್ಳುವ ಮೂಲಕ ಜಡ ಅಭ್ಯಾಸಗಳನ್ನು ತಪ್ಪಿಸಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜೀವನದಲ್ಲಿ ಪ್ರಗತಿಗೆ ದಾರಿ ಮಾಡುವ ಶಿಸ್ತು, ಸಮರ್ಪಣಾಭಾವ ಮತ್ತು ದೃಢ ನಿಶ್ಚಯ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.

ಪಿಇಎಸ್ ವಿಶ್ವವಿದ್ಯಾಲಯವು ತನ್ನ ಕಿರು ಪ್ರಯಾಣದಲ್ಲಿ ಮಾಡಿದ ಮಹತ್ವದ ಸಾಧನೆಗಳನ್ನು ಶ್ಲಾಘಿಸಿದ ಉಪರಾಷ್ಟ್ರಪತಿಗಳು, ವಿದ್ಯಾರ್ಥಿಗಳಿಗೆ ಉತ್ಕೃಷ್ಟತೆಯ ಕಡೆಗೆ ಮಾರ್ಗದರ್ಶನ ನೀಡಿದ ಕುಲಪತಿ ಪ್ರೊ. ಎಂ.ಆರ್. ದೊರೆಸ್ವಾಮಿ ಅವರನ್ನು ಅಭಿನಂದಿಸಿದರು.

ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವ ಶ್ರೀ ಬಿ.ಎ. ಬಸವರಾಜ, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್. ದೊರೆಸ್ವಾಮಿ, ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜೆ. ಸೂರ್ಯ ಪ್ರಸಾದ್, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಬೋಧಕ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
 

click me!