ಅರುಣಾಚಲ ಸೆಕ್ಟರ್‌ನಲ್ಲಿ 24 ಗಂಟೆ ಕಣ್ಗಾವಲು ವ್ಯವಸ್ಥೆ!

By Suvarna NewsFirst Published Oct 19, 2021, 9:33 AM IST
Highlights

* ಗಡಿಯಲ್ಲಿ ಇಸ್ರೇಲ್‌ ನಿರ್ಮಿತ ಹೆರಾನ್‌ ಡ್ರೋನ್‌ಗಳ ಹಾರಾಟ

* ಮಹತ್ವದ ಮಾಹಿತಿಗಳನ್ನು ಭಾರತದ ಭದ್ರತೆಗೆ ನೀಡಲಿರುವ ಡ್ರೋನ್‌ಗಳು

* ಅರುಣಾಚಲ ಗಡಿ ಪ್ರದೇಶದಲ್ಲಿ ಚೀನಾ ಅಟ್ಟಹಾಸ ತಡೆಗೆ ಈ ಕ್ರಮ

ಮಿಸಾಮಾರಿ(ಅ.19): ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು(Venkaiah Naidu) ಅವರ ಅರುಣಾಚಲ ಪ್ರದೇಶ(Arunachal Pradesh) ವಿಧಾನಸಭೆ ಭೇಟಿಯನ್ನು ಚೀನಾ(China) ವಿರೋಧಿಸಿದ ಬೆನ್ನಲ್ಲೇ, ಅದಕ್ಕೆ ಪಾಠ ಕಲಿಸುವ ಮತ್ತು ಅರುಣಾಚಲ ಪ್ರದೇಶ ಸೆಕ್ಟರ್‌ನಲ್ಲಿ ಚೀನಾ ಯೋಧರ ಮೇಲೆ ಕಣ್ಗಾವಲು ವಹಿಸಲು 24 ಗಂಟೆ ಕಣ್ಗಾವಲು ವ್ಯವಸ್ಥೆಯನ್ನು ಭಾರತ ಸರ್ಕಾರ(Indian Govt) ನಿಯೋಜಿಸಿದೆ. ಇದಕ್ಕಾಗಿ ಭಾರತೀಯ ವಾಯುಪಡೆಯ ‘ರುದ್ರ’ ಹೆಲಿ​ಕಾ​ಪ್ಟ​ರ್‌ ಮತ್ತು ಇಸ್ರೇಲ್‌ ಅಭಿವೃದ್ಧಿಪಡಿಸಿದ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ.

ಮಧ್ಯಮ ಹಂತದಲ್ಲಿ ಹಾರಾಡುವ ಸಾಮರ್ಥ್ಯ ಹಾಗೂ ದೀರ್ಘ ಸಹಿಷ್ಣುತೆ ಹೊಂದಿದ ‘ಹೆರಾನ್‌’ ಹೆಸರಿನ ಡ್ರೋನ್‌ಗಳು(Drone) ಗಡಿ ನಿಯಂತ್ರಣ ರೇಖೆಯಲ್ಲಿ ದಿನದ 24 ಗಂಟೆಯೂ ಕಣ್ಗಾವಲು ವಹಿಸಲಿದೆ. ಅಲ್ಲದೆ ಗಡಿ ಭಾಗದಲ್ಲಿನ ಮಹತ್ವದ ಮಾಹಿತಿಗಳನ್ನು ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಗಳಿಗೆ ರವಾನಿಸಲಿವೆ.

ಅಲ್ಲದೆ ಈ ಡ್ರೋನ್‌ಗಳ ಜತೆಗೆ ಶಸ್ತ್ರಾಸ್ತ್ರ ಸಹಿತ ವ್ಯವಸ್ಥೆಯಾಗಿರುವ ಹೆಲಿಕಾಪ್ಟರ್‌ ‘ರುದ್ರ’ನನ್ನು ಭಾರತೀಯ ವಾಯುಪಡೆ(Indian Air Force) ನಿಯೋಜಿಸುತ್ತಿದೆ. ಇದಲ್ಲದೆ ಗಡಿ ಭಾಗದಲ್ಲಿ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ತನ್ಮೂಲಕ ಅರುಣಚಲ ಪ್ರದೇಶ ಸೇರಿದಂತೆ ಇನ್ನಿತರ ಗಡಿ ಪ್ರದೇಶಗಳಲ್ಲಿ ಕಾಲುಕೆರೆದು ಕಾದಾಟಕ್ಕೆ ಇಳಿಯುವ ಚೀನಾಕ್ಕೆ ತಿರುಗೇಟು ನೀಡಲು ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗಿದೆ.

ಅರುಣಾಚಲ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ತಿರುಗೇಟು!

ಭಾರತದ(India) ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶಕ್ಕೆ(Arunachal Pradesh) ಇತ್ತೀಚಿನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಭೇಟಿಯನ್ನು ಚೀನಾ(China) ವಿರೋಧಿಸಿದೆ. ಅಲ್ಲದೆ ಅರುಣಾಚಲ ಪ್ರದೇಶವನ್ನು(Arunachal Pradesh) ಎಂದಿಗೂ ಭಾರತದ ಭಾಗ ಎಂದು ತಾನು ಗುರುತಿಸಿಲ್ಲ ಎಂದು ಕಿಡಿಕಾರಿದೆ. ಪೂರ್ವ ಲಡಾಖ್‌(Ladakh) ಗಡಿ ವಿಚಾರಕ್ಕೆ ಸಂಬಂಧಿಸಿ ಭಾರತ-ಚೀನಾ ದೇಶಗಳ ಸೇನಾಧಿಕಾರಿಗಳ ಜತೆಗಿನ ಮಾತುಕತೆ ಮುರಿದುಬಿದ್ದಿರುವ ಬೆನ್ನಲ್ಲೇ, ಚೀನಾದ ಈ ಹೇಳಿಕೆ ಹೊರಬಿದ್ದಿದೆ.

ಈ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝುವಾ ಲಿಜಿಯಾನ್‌ ಅವರು, ‘ಭಾರತವು ಏಕಪಕ್ಷೀಯ ಮತ್ತು ಅಕ್ರಮವಾಗಿ ರಚನೆ ಮಾಡಿದ ಅರುಣಾಚಲಪ್ರದೇಶ ರಾಜ್ಯವನ್ನು ನಾವು ಎಂದಿಗೂ ಒಪ್ಪಿಲ್ಲ. ಹೀಗಾಗಿ ಈ ಭಾಗಕ್ಕೆ ಭಾರತ ನಾಯಕರ ಭೇಟಿಯನ್ನು ಆಕ್ಷೇಪಿಸುತ್ತೇವೆ’ ಎಂದಿದ್ದಾರೆ. ಆದರೆ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, ದೇಶದ ಇತರೆ ಪ್ರದೇಶಗಳಿಗೆ ಭೇಟಿ ನೀಡುವಂತೆ ಭಾರತದ ನಾಯಕರು ಈ ಭಾಗಕ್ಕೂ ಭೇಟಿ ನೀಡುತ್ತಾರೆ ಎಂದು ಭಾರತ ತಿರುಗೇಟು ನೀಡಿದೆ.

ಅ.9ರಂದು ಅರುಣಾಚಲಕ್ಕೆ ಭೇಟಿ ನೀಡಿದ್ದ ವೆಂಕಯ್ಯನಾಯ್ಡು ಅವರು, ವಿಶೇಷ ಅಧಿವೇಶನವನ್ನುದ್ದೇಶಿಸಿ ಹಲವು ದಶಕಗಳಿಂದ ತಿರಸ್ಕಾರಕ್ಕೆ ಒಳಗಾಗಿದ್ದ ಈಶಾನ್ಯ ರಾಜ್ಯಗಳಲ್ಲಿ ತ್ವರಿತ ಅಭಿವೃದ್ಧಿಯಾಗುತ್ತಿರುವುದು ಕಂಡುಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

click me!