ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಸಿಎಎ ಕಾಯ್ದೆ ವಾಪಸ್, ಕಾಂಗ್ರೆಸ್ ಭರವಸೆ!

By Suvarna NewsFirst Published Mar 12, 2024, 2:02 PM IST
Highlights

ಇಂಡಿಯಾ ಒಕ್ಕೂಟ ಅದಿಕಾರಕ್ಕೆ ಬಂದರೆ ಬಿಜೆಪಿ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಈ ಕುರಿತು ಶಶಿ ತರೂರ್ ಮಾತನಾಡಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ವಿರುದ್ದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
 

ನವದೆಹಲಿ(ಮಾ.12) ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಇದೀಗ ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ  ವಲಸೆ ಬಂದ ಮುಸ್ಲಿಮೇತರರಿಗೆ ಭಾರತದ ಪೌರತ್ವಕ್ಕೆ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ಸಿಎಎ ಜಾರಿ ವಿರುದ್ಧ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಇದು ಮುಸ್ಲಿಮರ ವಿರುದ್ಧದ ಕಾಯ್ದೆ ಅನ್ನೋ ಆರೋಪಗಳೂ ಕೇಳಿಬಂದಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಇಂಡಿಯಾ ಒಕ್ಕೂಟ ಅಧಿಕಾರಕ್ಕೇರಿದರೆ ಸಿಎಎ ಕಾಯ್ದೆ ವಾಪಸ್ ಪಡೆಯುವಾದಿಗ ವಾಗ್ದಾನ ನೀಡಿದ್ದಾರೆ.

ಬಿಜೆಪಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ನೈತಿಕವಾಗಿ ಹಾಗೂ ಸಾಂವಿಧಾನಿಕವಾಗಿ ತಪ್ಪು ನಿರ್ಧಾರವಾಗಿದೆ.ಭಾರತ ಜಾತ್ಯಾತೀತ ದೇಶವಾಗಿದೆ. ಧರ್ಮದ ಆಧಾರದಲ್ಲಿ ಪಾಕಿಸ್ತಾನ ವಿಭಜನೆಯಾಗಿದೆ. ಈ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರೂ, ಮೌಲಾನಾ ಅಜಾದ್ ಸೇರಿದಂತೆ ಪ್ರಮುಖರು ಭಾರತ ಜಾತ್ಯಾತೀತ ರಾಷ್ಟ್ರವಾಗಿರಲಿದೆ ಎಂದಿದ್ದಾರೆ. ಹೀಗಿರುವಾಗ ಇದೀಗ ಪೌರತ್ವ ಕಾಯ್ದೆಯಲ್ಲಿ ಧರ್ಮ ಆಧಾರದಲ್ಲಿ ಪೌರತ್ವ ನೀಡುವುದು ಎಷ್ಟು ಸರಿ ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.

ಸಿಎಎ ಪೋರ್ಟಲ್ ಆರಂಭ, ಭಾರತದ ಪೌರತ್ವಕ್ಕಾಗಿ ಈ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಿ!

ಸಿಎಎ ಜಾರಿ ವಿರುದ್ದ ಯೂನಿಯನ್ ಮುಸ್ಲಿಮ್ ಲೀಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಪ್ರತಿಕ್ರಿಯಿಸಿದ ಶಶಿ ತರೂರ್, ಮುಸ್ಲಿಮ್ ಲೀಗ್‌ಗೆ ಸಂಪೂರ್ಣ ಬೆಂಬಲವಿದೆ. ಕಾನೂನು ಹೋರಾಟದ ಮೂಲಕ ಆಗಿರುವ ತಪ್ಪನ್ನು ಸರಿಪಡಿಸಲಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಜನರು ಬೆಂಬಲಿಸಿದರೆ ಸುಲಭವಾಗಿ ಸಿಎಎ ವಾಪಸ್ ಪಡೆಯಲಾಗುತ್ತದೆ ಎಂದು ಶಶಿ ತರೂರ್ ಹೇಳಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳ ಪೈಕಿ ಸಿಎಎ ವಾಪಸ್ ಕೂಡ ಸೇರಿಸಲಾಗುತ್ತದೆ. ಪೌರತ್ವದಲ್ಲಿ ನಾವು ಧರ್ಮವನ್ನು ತರುವುದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. 

 

ಪೌರತ್ವ ಕಾಯ್ದೆಯಿಂದ ಮುಸ್ಲಿಮರನ್ನು ಹೊರಗಿಟ್ಟಿದ್ದು ಯಾಕೆ? ಇಲ್ಲಿದೆ ಸಿಎಎ ಅರ್ಜಿ ಸಲ್ಲಿಕೆ ವಿವರ!

ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸಿಎಎಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಎ ಜನರನ್ನು ಜಾತಿ ಧರ್ಮ ಆಧಾರದ ಮೇಲೆ ಭಾಗ ಮಾಡುತ್ತದೆ. ಅದನ್ನು ನಾವು ಕೇರಳದಲ್ಲಿ ಜಾರಿ ಮಾಡುವುದಿಲ್ಲ. ಇದರ ವಿರುದ್ಧ ಇಡೀ ಕೇರಳ ಒಗ್ಗಟ್ಟಾಗಿರುತ್ತದೆ ಎಂದು ವಿಜಯನ್‌ ಹೇಳಿದ್ದಾರೆ.  ಚುನಾವಣೆ ವೇಳೆ ಧ್ರುವೀಕರಣ ಮಾಡುವ ಹುನ್ನಾರದಿಂದಲೇ ಚುನಾವಣೆ ಅವಧಿಯಲ್ಲಿ ಜಾರಿ ತಂದಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  
 

click me!