
ನವದೆಹಲಿ: ಪಹಲ್ಗಾಂ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಕಠಿಣ ಹೆಜ್ಜೆಗಳನ್ನಿಡುತ್ತಿರುವ ಭಾರತ ಮತ್ತೊಂದು ನಿರ್ಧಾರ ಕೈಗೊಂಡಿದ್ದು, ಸುಳ್ಳು , ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಚಾರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಡಾನ್ ನ್ಯೂಸ್ ಸೇರಿದಂತೆ ಪಾಕಿಸ್ತಾನದ 16 ಯೂಟ್ಯೂಬ್‌ಗಳನ್ನು ನಿಷೇಧಿಸಿದೆ.
ಕೇಂದ್ರವು ಪಾಕಿಸ್ತಾನದ ಡಾನ್ ನ್ಯೂಸ್, ಇರ್ಷಾದ್ ಭಟ್ಟಿ, ಸಮಾ ಟೀವಿ, ಸಮಾ ಸ್ಪೋರ್ಟ್ ಸೇರಿದಂತೆ 16 ಯೂಟ್ಯೂಬ್ ಚಾನೆಲ್‌ಗಳಿಗೆ ನಿರ್ಬಂಧ ವಿಧಿಸಿದೆ.‘ಪಹಲ್ಗಾಮ್ ದಾಳಿ ಬಳಿಕ ಭಾರತ , ಸೇನೆ, ಭದ್ರತಾ ಪಡೆಗಳ ವಿರುದ್ಧ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯ, ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಭಾರತ ಸರ್ಕಾರ ಪಾಕಿಸ್ತಾನದ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ’ ಎಂದು ಗೃಹ ಇಲಾಖೆ ಹೇಳಿದೆ.
ಬಿಬಿಸಿ ಬಗ್ಗೆ ಆಕ್ಷೇಪ: ಇನ್ನು ಪಹಲ್ಗಾಂ ದುರಂತದ ಬಳಿಕ ಭಯೋತ್ಪಾದಕರನ್ನು ಬಂಡುಕೋರರು ಎಂದು ಕರೆದು ಸುದ್ದಿ ಪ್ರಕಟಿಸಿದ ಬಿಬಿಸಿ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಬಿಬಿಸಿ ಭಾರತದ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಸ್ಪಷ್ಟನೆ ನೀಡುವಂತೆ ಕೇಳಿದೆ.
ಇದನ್ನೂ ಓದಿ: ಚೀನಾ ತಂತ್ರಜ್ಞಾನ ಬಳಸಿ ದಾಳಿ ನಡೆಸಿದ ಉಗ್ರರು? ಆಘಾತಕಾರಿ ಸಂಚು ಬಯಲು!...
2 ದಿನದಲ್ಲಿ ಕಟಾವು ಮುಗಿಸಿ: ಗಡಿ ರೈತರಿಗೆ ಸೂಚನೆ
ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ, 2 ದಿನಗಳಲ್ಲಿ ಬೆಳೆ ಕಟಾವು ಮಾಡುವಂತೆ ಪಂಜಾಬ್‌ನ ಗಡಿಭಾಗದ ರೈತರಿಗೆ ಬಿಎಸ್‌ಎಫ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ತರಾತುರಿಯಲ್ಲಿ ಗೋಧಿ ಕಟಾವು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದೊಂದಿಗೆ ಪಂಜಾಬ್ 530 ಕಿ.ಮೀ ಉದ್ದದಷ್ಟು ಗಡಿ ಹಂಚಿಕೊಂಡಿದ್ದು, ಈ ವ್ಯಾಪ್ತಿಯಲ್ಲಿನ ಝೀರೋ ಲೈನ್ ಮತ್ತು ಗಡಿ ರೇಖೆ ಮಧ್ಯೆ ಒಟ್ಟು 45,000 ಎಕರೆ ಕೃಷಿ ಭೂಮಿಯಿದೆ. ಇಲ್ಲಿ ಭಾರತ ಮತ್ತು ಪಾಕ್ ನಡುವೆ ಕೂಗಳತೆಯ ದೂರವಾಗಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ ಕಟಾವು ಮಾಡುವುದು ಕಷ್ಟ ಎನ್ನುವ ಕಾರಣಕ್ಕೆ ಅಧಿಕಾರಿಗಳು ರೈತರಿಗೆ ಶೀಘ್ರವೇ ಕಟಾವು ಮುಗಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಪಾಕ್ ಬಿಕ್ಕಟ್ಟಿನ ನಡುವೆ ಆಫ್ಘನ್ ಜೊತೆ ಭಾರತದ ಚರ್ಚೆ
ಕಾಬೂಲ್: ಪಹಲ್ಗಾಂ ದಾಳಿ ಹಿನ್ನೆಲೆ ಭಾರತ-ಪಾಕಿಸ್ತಾನದ ಉದ್ವಿಗ್ನತೆ ತಾರಕಕ್ಕೇರಿರುವ ನಡುವೆ ಭಾರತ, ಆಫ್ಘಾನಿಸ್ತಾನ ಸರ್ಕಾರದ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳು ಕಾಬೂಲ್‌ನಲ್ಲಿ ಭೇಟಿಯಾಗಿದ್ದಾರೆ. ಉಭಯರು ಪ್ರಸಕ್ತ ರಾಜಕೀಯ ಮತ್ತು ವ್ಯಾಪಾರ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಈ ನಡುವೆ 26 ಪ್ರವಾಸಿಗರ ನರಮೇಧಕ್ಕೆ ಕಾರಣವಾದ ಪಹಲ್ಗಾಂ ಉಗ್ರ ದಾಳಿಯನ್ನು ತಾಲಿಬಾನ್ ಸರ್ಕಾರ ಖಂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ