ಬ್ಯಾಂಕಾಕ್‌ನಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಾಯಕರು ಮಾತುಕತೆ ನಡೆಸಿದ್ದು, ಉಭಯ ದೇಶಗಳ ಸಂಬಂಧ ಸುಧಾರಣೆಗೆ ಪ್ರಯತ್ನಿಸಿದ್ದಾರೆ. ಅಲ್ಪಸಂಖ್ಯಾತರ ಸುರಕ್ಷತೆ, ಗಡಿ ಸಮಸ್ಯೆಗಳು ಮತ್ತು ಶೇಖ್ ಹಸೀನಾ ಹಸ್ತಾಂತರದ ಕುರಿತು ಚರ್ಚೆ ನಡೆದಿದೆ. ಈ ಭೇಟಿ ತಕ್ಷಣದ ಪರಿಹಾರ ನೀಡದಿದ್ದರೂ, ಮಾತುಕತೆ ಮುಂದುವರಿಸುವ ಆಶಯ ಮೂಡಿಸಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಎಪ್ರಿಲ್ 4, 2025ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನ ಸಲಹೆಗಾರರಾದ ಮುಹಮ್ಮದ್ ಯೂನುಸ್ ಅವರು ಕೊನೆಗೂ ಬ್ಯಾಂಕಾಕ್‌ನಲ್ಲಿ ಮಾತುಕತೆ ನಡೆಸಿದರು. ಎಂಟು ತಿಂಗಳ ಹಿಂದೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ವಿವಾದಾತ್ಮಕ ಪದಚ್ಯುತಿಯ ಬಳಿಕ ಇದು ಮೋದಿ - ಯೂನುಸ್ ಮೊದಲ ಭೇಟಿಯಾಗಿದೆ. ಬಂಗಾಳ ಕೊಲ್ಲಿ ಬಹು-ವಲಯ ಮತ್ತು ತಾಂತ್ರಿಕ ಸಹಕಾರ (BIMSTEC) ಗುಂಪಿನ ನಾಯಕರ ಶೃಂಗಸಭೆಯ ಬಳಿಕ ಶಾಂಗ್ರಿಲಾ ಹೋಟೆಲ್‌ನಲ್ಲಿ ಉಭಯ ನಾಯಕರ ನಡುವೆ 40 ನಿಮಿಷಗಳ ಮಾತುಕತೆ ನಡೆಯಿತು. ಈ ಮಾತುಕತೆ ನಿಜಕ್ಕೂ ಉಭಯ ದೇಶಗಳ ನಡುವೆ ಹೆಪ್ಪುಗಟ್ಟಿದ ಸಂಬಂಧವನ್ನು ಸಹಜ ಸ್ಥಿತಿಗೆ ಮರಳಿಸಲು ಅತ್ಯವಶ್ಯಕವಾಗಿತ್ತು. ಉಭಯ ನಾಯಕರೂ ತಮ್ಮ ಕಳವಳಗಳನ್ನು ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದಾರೆ. ಭಾರತ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸುರಕ್ಷತೆಯ ಕುರಿತು ತನ್ನ ಆತಂಕ ವ್ಯಕ್ತಪಡಿಸಿದರೆ, ಬಾಂಗ್ಲಾದೇಶ ಶೇಖ್ ಹಸೀನಾರ ಹಸ್ತಾಂತರ ನಡೆಸುವಂತೆ ಆಗ್ರಹಿಸಿತು. ಈ ಭೇಟಿಯಿಂದ ಸಮಸ್ಯೆಗಳೇನೂ ಪರಿಹಾರ ಕಾಣಲಿಲ್ಲ. ಆದರೆ, ಭಾರತ - ಬಾಂಗ್ಲಾದೇಶ ಎರಡು ದೇಶಗಳಿಗೂ ಪರಸ್ಪರ ಮಾತುಕತೆಗಳು ಬೇಕು ಎಂಬ ಸಂದೇಶವನ್ನು ಇದು ನೀಡಿತು. ಹಲವು ತಿಂಗಳುಗಳ ಮೌನದ ಬಳಿಕ ನಡೆದ ಈ ಮಾತುಕತೆ ನಿಜಕ್ಕೂ ರಾಜತಾಂತ್ರಿಕವಾಗಿ ಗೆಲುವೇ ಸರಿ.
ನರೇಂದ್ರ ಮೋದಿಯವರು ಭಾರತದ 'ಪ್ರಜೆಗಳು ಮೊದಲು' ಎಂಬ ಧೋರಣೆಯ ಕುರಿತು ಮಾತನಾಡಿದ್ದು, ಬಾಂಗ್ಲಾದೇಶದ ಜೊತೆಗಿನ ಸಂಬಂಧ ಹೇಗೆ ಉಭಯ ದೇಶಗಳ ಪ್ರಗತಿಗೆ ನೆರವಾಯಿತು ಎಂದು ವಿವರಿಸಿದ್ದಾರೆ. ಹಾಗೆಂದು ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆಯ ವಿಚಾರವನ್ನು ಪ್ರಸ್ತಾಪಿಸಲು ಮೋದಿ ಹಿಂದೇಟು ಹಾಕಿಲ್ಲ. ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸುರಕ್ಷತೆ ಭಾರತದಲ್ಲೂ ಬಹು ಚರ್ಚಿತ ವಿಷಯವಾಗಿದೆ. ಮೋದಿಯವರು ಅಲ್ಪಸಂಖ್ಯಾತರ ಮೇಲಿನ ದಾಳಿಯ ವಿರುದ್ಧ ಸರಿಯಾದ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳುವಂತೆ ಯೂನುಸ್‌ರನ್ನು ಆಗ್ರಹಿಸಿದರು. ಆ ಮೂಲಕ, ಬಾಂಗ್ಲಾದೇಶದಲ್ಲಿನ ಬೆಳವಣಿಗೆಗಳ ಕುರಿತು ಭಾರತ ಕೇವಲ ಮೂಕ ಪ್ರೇಕ್ಷಕನಾಗಿಲ್ಲ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದು, ಬಾಂಗ್ಲಾದೇಶ ಕ್ರಮ ಕೈಗೊಳ್ಳುವುದನ್ನು ತಾನು ಎದುರು ನೋಡುತ್ತಿದ್ದೇನೆ ಎಂಬ ಸಂದೇಶವನ್ನು ಭಾರತ ರವಾನಿಸಿದೆ. ಅದರೊಡನೆ, ಉಭಯ ದೇಶಗಳು ದ್ವೇಷದ ಮಾತುಗಳನ್ನು ಆಡುವುದರಿಂದ ಯಾವುದೇ ಪ್ರಯೋಜನವಾಗದು ಎಂದು ಮೋದಿ ತಿಳುವಳಿಕೆಯ ಮಾತನ್ನೂ ಆಡಿದ್ದಾರೆ. ಉಭಯ ದೇಶಗಳ ನಾಯಕರು ಸಮಾಧಾನಕರ ಮನಸ್ಥಿತಿಯಿಂದ ಕಾರ್ಯಾಚರಿಸಬೇಕು ಎಂಬುದು ಮೋದಿಯವರ ಇಂಗಿತವಾದಂತಿತ್ತು.
ಇದನ್ನೂ ಓದಿ: ದುಬಾರಿಯಾದ ಟ್ರಂಪ್ ಸುಂಕದ ಹೊಡೆತ: ಭಾರತದ ಚಾಲಾಕಿ ನಡೆ
ಇನ್ನೊಂದೆಡೆ ಬಾಂಗ್ಲಾದೇಶದ ಪ್ರಧಾನ ಸಲಹೆಗಾರ ಯೂನುಸ್ ಸಹ ಈ ಭೇಟಿಗೆ ಸಿದ್ಧರಾಗಿ ಬಂದಂತಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದೆ ಎನ್ನಲಾದ ವರದಿಗಳು ಅತಿರಂಜಿತವಾಗಿವೆ ಎಂದ ಯೂನುಸ್, ಭಾರತೀಯ ಪತ್ರಕರ್ತರನ್ನೂ ಅಲ್ಲಿಗೆ ಆಗಮಿಸಿ ವಸ್ತುಸ್ಥಿತಿಯನ್ನು ಅವಲೋಕಿಸುವಂತೆ ಕರೆ ನೀಡಿದರು. ತನ್ನ ಸರ್ಕಾರ ಯಾವುದೇ ಧರ್ಮ ಅಥವಾ ಲಿಂಗಾಧಾರಿತ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಯೂನುಸ್ ಭರವಸೆ ನೀಡಿದರು. ಕಳೆದ ಆಗಸ್ಟ್ ತಿಂಗಳಿನಲ್ಲಿ ಢಾಕಾದಿಂದ ಭಾರತಕ್ಕೆ ಆಗಮಿಸಿ ಆಶ್ರಯ ಪಡೆದಿರುವ ಶೇಖ್ ಹಸೀನಾರನ್ನು ಹಸ್ತಾಂತರಿಸುವಂತೆ ಯೂನುಸ್ ಭಾರತವನ್ನು ಆಗ್ರಹಿಸಿದ್ದಾರೆ. ಶೇಖ್ ಹಸೀನಾ ಪ್ರತಿಭಟನಾಕಾರ ವಿದ್ಯಾರ್ಥಿಗಳನ್ನು ದಮನಿಸಲು ಅವರ ಮೇಲೆ ಮಾರಕ ದಾಳಿ ನಡೆಸಲು ಆದೇಶ ನೀಡಿದ್ದರು ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದ್ದು, ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಮರಳಿ, ನ್ಯಾಯಾಂಗ ವಿಚಾರಣೆ ಎದುರಿಸಬೇಕು ಎನ್ನುವುದು ಬಾಂಗ್ಲಾದೇಶದ ವಾದ. ಯೂನುಸ್ ಸರ್ಕಾರದ ಕುರಿತು ಹಸೀನಾ ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವುದನ್ನೂ ಯೂನುಸ್ ಪ್ರಸ್ತಾಪಿಸಿದ್ದು, ಹಸೀನಾರನ್ನು ಮರಳಿಸುವಂತೆ ಕೋರಿದ್ದಾರೆ.
ಹಸೀನಾ ಹಸ್ತಾಂತರದ ಕುರಿತಂತೆ ಉಭಯ ದೇಶಗಳ ನಡುವೆ ಮಾತುಕತೆ ನಡೆದಿದೆ. ಆದರೆ ಭಾರತ ಸದ್ಯದ ಮಟ್ಟಿಗೆ ಆ ಕುರಿತು ಮೌನವಾಗಿಯೇ ಉಳಿದಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಬಾಂಗ್ಲಾದೇಶ ಹಸೀನಾ ಹಸ್ತಾಂತರಕ್ಕೆ ಮನವಿ ಸಲ್ಲಿಸಿರುವುದನ್ನು ಸ್ಪಷ್ಟಪಡಸಿದ್ದಾರೆ. ಆದರೆ ಈ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಇನ್ನು ಹಸೀನಾ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಡೆದಿರುವ ಸಮಸ್ಯೆಗಳು ಸಾಮಾಜಿಕ ಜಾಲತಾಣ ಕಲ್ಪಿತ ಎಂಬ ಸುಲಭವಾದ ಆರೋಪವನ್ನು ಮೋದಿ ಮಾಡಿದ್ದಾರೆ ಎಂದು ಬಾಂಗ್ಲಾದೇಶ ಭಾವಿಸಿದೆ. ಆದರೆ ಈ ಕುರಿತು ಇನ್ನಷ್ಟು ಜಗಳಾಡುವುದು ತನಗೆ ಬೇಕಿಲ್ಲ ಎಂಬ ಸಂದೇಶವನ್ನೂ ಭಾರತ ಈ ಮೂಲಕ ರವಾನಿಸಿದೆ.
ಮಾತುಕತೆಯಲ್ಲಿ ಒಂದಷ್ಟು ಇತರ ವಿಚಾರಗಳೂ ಪ್ರಸ್ತಾಪಿತವಾದವು. ಬಾಂಗ್ಲಾದೇಶದ ಆಕ್ರೋಶಕ್ಕೆ ಕಾರಣವಾದ, ಗಡಿಯಲ್ಲಿ ಭಾರತೀಯ ಪಡೆಗಳು ಬಾಂಗ್ಲಾದೇಶೀಯರನ್ನು ಹತ್ಯೆಗೈಯುವ ವಿಚಾರವನ್ನು ಯೂನುಸ್ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಮೋದಿ ಭಾರತದ ಸುರಕ್ಷತೆಗಾಗಿ ಕಠಿಣ ಗಡಿ ನಿಯಮಗಳು ಅವಶ್ಯಕವಾಗಿವೆ ಎಂದು ಸಮರ್ಥನೆ ನೀಡಿದ್ದಾರೆ. ನೀರಿನ ವಿಚಾರಗಳೂ ಚರ್ಚೆಗೆ ಬಂದಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಂಗಾ ಮತ್ತು ತೀಸ್ತಾ ನದಿ ನೀರು ಹಂಚಿಕೆಯ ಕುರಿತು ಪ್ರಗತಿ ಸಾಧಿಸಬೇಕೆಂದು ಯೂನುಸ್ ಬಯಸಿದ್ದಾರೆ. ಮೋದಿ ಪ್ರಜಾಪ್ರಭುತ್ವಕ್ಕೆ ಕೇವಲ ಭರವಸೆಗಳು ಸಾಕಾಗುವುದಿಲ್ಲ ಎಂದಿದ್ದು, ಬಾಂಗ್ಲಾದೇಶ ಪ್ರಜಾಸತ್ತಾತ್ಮಕ ಚುನಾವಣೆಯತ್ತ ಹೆಜ್ಜೆ ಇಡಬೇಕು ಎಂಬ ಸಂದೇಶ ರವಾನಿಸಿದ್ದಾರೆ.
ಈ ಮಾತುಕತೆಯ ಮೂಲಕ ಹೇಳಿಕೊಳ್ಳುವಂತಹ ಯಾವುದೇ ಪ್ರಗತಿ ಸಾಧಿತವಾಗಿಲ್ಲ. ಹಸೀನಾ, ಅಲ್ಪಸಂಖ್ಯಾತರು, ಮತ್ತು ಗಡಿಗಳಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಅಷ್ಟು ಸುಲಭವಾಗಿ ಒಂದೇ ದಿನದಲ್ಲಿ ಸರಿಹೋಗುವಂತವಲ್ಲ. ಆದರೆ ಸಮಸ್ಯೆಗಳು ಸರಿಹೋಗುವುದು ಸದ್ಯದ ಮುಖ್ಯ ವಿಚಾರವಲ್ಲ. ಉಭಯ ನಾಯಕರು ಭೇಟಿಯಾಗಿ, ಮಾತುಕತೆ ನಡೆಸಿರುವುದು ಸದ್ಯದ ಮಟ್ಟಿಗೆ ದೊಡ್ಡ ಬೆಳವಣಿಗೆ. ಅವರು ಉಭಯ ದೇಶಗಳ ನಡುವೆ ಇರುವ ದ್ವಿಪಕ್ಷೀಯ ಮಾರ್ಗಗಳ ಮೂಲಕ ಇನ್ನಷ್ಟು ಮಾತುಕತೆ ನಡೆಸಲು ವೇದಿಕೆ ಸಿದ್ಧಪಡಿಸಿದ್ದಾರೆ. 2015ರಲ್ಲಿ ಮೋದಿ ಯೂನುಸ್ ಅವರಿಗೆ ಚಿನ್ನದ ಪದಕವನ್ನು ನೀಡಿದ ಸಂದರ್ಭದ ಛಾಯಾಚಿತ್ರವನ್ನೂ ಯೂನುಸ್ ಮೋದಿಯವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ. ಬಹುಶಃ ಇದು ಭಾರತ - ಬಾಂಗ್ಲಾದೇಶಗಳ ಸಂಬಂಧ ಐತಿಹಾಸಿಕವಾಗಿದ್ದು, ಅದನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶವೂ ಆಗಿರಬಹುದು.
ಇದನ್ನೂ ಓದಿ: ಅಸಾಧ್ಯವನ್ನೂ ಸಾಧ್ಯವಾಗಿಸುವ ಸಾಂಘಿಕ ಪ್ರಯತ್ನ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಯಶಸ್ಸಿನ ಕಥೆ!
ಈ ಭೇಟಿ ಒಂದೇ ಬಾರಿಗೆ ಎಲ್ಲ ಸಮಸ್ಯೆಗಳನ್ನು ಜಾದೂ ಎಂಬಂತೆ ಪರಿಹರಿಸಲು ಸಾಧ್ಯವಿಲ್ಲ. ಭಾರತ - ಬಾಂಗ್ಲಾದೇಶ ನಾಯಕರ ಭೇಟಿ ಸ್ಥಗಿತಗೊಂಡಿರುವ ಸ್ನೇಹವನ್ನು ಪುನರಾರಂಭಿಸುವ ಹೆಜ್ಜೆಯಾಗಿದೆ. ಉಭಯ ನಾಯಕರಿಗೂ ಪರಸ್ಪರರ ಅವಶ್ಯಕತೆಯ ಅರಿವಿದ್ದು, ವ್ಯಾಪಾರ, ಸುರಕ್ಷತೆ ಮತ್ತು ಪ್ರಾದೇಶಿಕ ಸ್ಥಿರತೆಗಳು ಕಡೆಗಣಿಸಬಹುದಾದ ವಿಚಾರಗಳಲ್ಲ. ಭಾರತ - ಬಾಂಗ್ಲಾದೇಶದ ಸಂಬಂಧದಲ್ಲಿ ಮುಂದಿನ ಹಾದಿ ಖಂಡಿತಾ ಸುಗಮವಾದುದಲ್ಲ. ಹಸೀನಾ ಭವಿಷ್ಯ, ಅಲ್ಪಸಂಖ್ಯಾತರ ಹಕ್ಕುಗಳು, ಮತ್ತು ಗಡಿ ಉದ್ವಿಗ್ನತೆಗಳು ಅಷ್ಟು ಸುಲಭವಾಗಿ ಪರಿಹಾರ ಕಾಣಲು ಸಾಧ್ಯವಿಲ್ಲ. ಆದರೆ, ಒಂದು ವೇಳೆ ಮೋದಿ ಮತ್ತು ಯೂನುಸ್ ಮಾತುಕತೆ ಮುಂದುವರಿಸಿದರೆ, ಈ ನಿಟ್ಟಿನಲ್ಲಿ ಒಂದಷ್ಟು ಧನಾತ್ಮಕ ಪ್ರಗತಿ ಸಾಧ್ಯವಾದೀತು. ಸದ್ಯದ ಮಟ್ಟಿಗೆ ಭಾರತ - ಬಾಂಗ್ಲಾದೇಶಗಳು ಪರಸ್ಪರ ಕೈ ಕುಲುಕಿವೆಯೇ ಹೊರತು ಆಲಿಂಗಿಸಿಲ್ಲ! ಕೆಲವೊಂದು ಬಾರಿ ಪರಿಸ್ಥಿತಿಯನ್ನು ಒಂದಷ್ಟು ತಿಳಿಯಾಗಿಸಲು ಇಷ್ಟೇ ಸಾಕಾಗುವುದೂ ಇದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)