
ಬೆಂಗಳೂರು/ನವದೆಹಲಿ (ಫೆ.17): ದೇಶದ ತಾಂತ್ರಿಕ ವಲಯದ ಪ್ರತಿಷ್ಠಿತ ಕಾರ್ಯಕ್ರಮವಾದ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್'ನಲ್ಲಿ ಭದ್ರತಾ ಲೋಪದ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ 'ನಿಯೋಸೇಪಿಯನ್' (NeoSapien) ಕಂಪನಿಯ ಸಿಇಒ ಧನಂಜಯ್ ಯಾದವ್, ಸಮಿಟ್‌ನಲ್ಲಿ ತಮ್ಮ ಕಂಪನಿಯ ಪ್ರಮುಖ ಎಐ ವೇರಬಲ್ ಸಾಧನಗಳು ಕಳ್ಳತನವಾಗಿವೆ ಎಂದು ಆರೋಪಿಸಿದ್ದು, ಇಡೀ ಟೆಕ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಫೆಬ್ರವರಿ 16 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯನ್ನು ಉದ್ಘಾಟಿಸಬೇಕಿತ್ತು. ಈ ಕಾರ್ಯಕ್ರಮದ ಭದ್ರತೆಯ ದೃಷ್ಟಿಯಿಂದ, ಭದ್ರತಾ ಸಿಬ್ಬಂದಿ ಪ್ರದರ್ಶನ ಹಾಲ್ ಅನ್ನು ಖಾಲಿ ಮಾಡಿಸಿದ್ದರು. ಈ ವೇಳೆ ತಮ್ಮ ಬೆಲೆಬಾಳುವ ಸಾಧನಗಳನ್ನು ಜೊತೆಗೆ ಕೊಂಡೊಯ್ಯಬೇಕೇ ಎಂದು ಧನಂಜಯ್ ಯಾದವ್ ಅವರು ಸಿಬ್ಬಂದಿಯನ್ನು ವಿಚಾರಿಸಿದ್ದರು. ಅದಕ್ಕೆ ಭದ್ರತಾ ಸಿಬ್ಬಂದಿ, 'ಯಾವುದೇ ಅಗತ್ಯವಿಲ್ಲ, ಇತರರೂ ತಮ್ಮ ಲ್ಯಾಪ್‌ಟಾಪ್‌ಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ. ನಾವು ಭದ್ರತೆ ನೋಡಿಕೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದರು. ಆದರೆ, 6 ಗಂಟೆಗಳ ನಂತರ ವಾಪಸ್ ಬಂದು ನೋಡಿದಾಗ ಸಾಧನಗಳು ನಾಪತ್ತೆಯಾಗಿದ್ದವು ಮತ್ತು ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿದ್ದವು ಎಂದು ಧನಂಜಯ್ ವಿವರಿಸಿದ್ದಾರೆ.
ಕಳ್ಳತನವಾದ ಈ ಸಾಧನ ಸಾಮಾನ್ಯ ವೇರಬಲ್ ಡಿವೈಸ್ ಆಗಿರಲಿಲ್ಲ. ಇದು ಸಂಭಾಷಣೆಗಳನ್ನು ಟ್ರ್ಯಾಕ್ ಮಾಡಿ, ಭಾವನೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹೊಂದಿರುವ ಭಾರತದ ಮೊದಲ ಪೇಟೆಂಟ್ ಪಡೆದ ಎಐ ವೇರಬಲ್ ಸಾಧನವಾಗಿತ್ತು. ಇದನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತರಬೇಕೆಂದು ಧನಂಜಯ್ ಬಹಳ ಉತ್ಸುಕರಾಗಿದ್ದರು. ಆದರೆ, ಕಳ್ಳತನದ ಈ ಘಟನೆ ಅವರ ಕನಸಿಗೆ ತಣ್ಣೀರೆರೆಚಿದಂತಾಗಿದೆ.
ಈ ಘಟನೆಯ ಬಗ್ಗೆ ಧನಂಜಯ್ ಯಾದವ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. "ಇದು ತುಂಬಾ ನಿರಾಶಾದಾಯಕ ಅನುಭವ. ಕೇವಲ ಭದ್ರತಾ ಸಿಬ್ಬಂದಿ ಮತ್ತು ಅಧಿಕೃತ ಪ್ರತಿನಿಧಿಗಳಿಗೆ ಮಾತ್ರ ಪ್ರವೇಶವಿದ್ದ ಹೈ-ಸೆಕ್ಯುರಿಟಿ ಜಾಗದಲ್ಲಿ ಇದು ಹೇಗೆ ಸಾಧ್ಯವಾಯಿತು? ವಿಮಾನ ಪ್ರಯಾಣ, ವಸತಿ ಮತ್ತು ಸ್ಟಾಲ್ ಬಾಟಿಗೆಯಂತಹ ಖರ್ಚುಗಳನ್ನು ಮಾಡಿಕೊಂಡು ಇಲ್ಲಿಗೆ ಬಂದ ನಮಗೆ ಸಿಕ್ಕಿದ್ದು ಈ ಆಘಾತ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಂದರ್ ಪಿಚೈ, ಬಿಲ್ ಗೇಟ್ಸ್ ಮತ್ತು ಸ್ಯಾಮ್ ಆಲ್ಟ್‌ಮನ್ ಅವರಂತಹ ವಿಶ್ವಪ್ರಸಿದ್ಧ ವ್ಯಕ್ತಿಗಳು ಭಾಗವಹಿಸುವ ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಇಂತಹ ಭದ್ರತಾ ಲೋಪ ಸಂಭವಿಸಿರುವುದು ಭಾರತದ ಆತಿಥ್ಯದ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯಬೇಕಿದ್ದು, ಕಳ್ಳತನವಾದ ಸಾಧನಗಳ ಪತ್ತೆಗೆ ಒತ್ತಾಯ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ