ಒಡಿಶಾದ ಅತಿ ದೊಡ್ಡ ಮದ್ಯ ಮಾರಾಟ ಮತ್ತು ತಯಾರಕ ಸಂಸ್ಥೆಯಾದ ಬಲ್ಡಿಯೊ ಸಾಹು ಗ್ರೂಪ್ ಆಫ್ ಕಂಪನೀಸ್ ಮತ್ತು ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಸೇರಿ ಸಾಹುಗೆ ಸೇರಿದ್ದ ಅನೇಕ ಸ್ಥಳಗಳ ಮೇಲೆ ಬುಧವಾರದಿಂದಲೇ ಐಟಿ ಅಧಿಕಾರಿಗಳ ತಂಡ ದಾಳಿ ಮಾಡುತ್ತಿದೆ. 30 ಕಪಾಟಿನಲ್ಲಿ ತುಂಬಿಟ್ಟಿದ್ದ ಹಾಗೂ 156 ಚೀಲಗಳಲ್ಲಿ ತುಂಬಿದ್ದ ನೋಟುಗಳ ಕಂತೆಗಳನ್ನು ಜಪ್ತಿ ಮಾಡಲಾಗಿದೆ.
ಭುವನೇಶ್ವರ (ಡಿಸೆಂಬರ್ 10, 2023): ತೆರಿಗೆ ವಂಚನೆ ಆರೋಪದಡಿ ಜಾರ್ಖಂಡ್‌ನ ಕಾಂಗ್ರೆಸ್ ಸಂಸದ ಹಾಗೂ ಮದ್ಯ ಉದ್ಯಮಿ ಧೀರಜ್ ಸಾಹುಗೆ ಸೇರಿದ ಒಡಿಶಾ ಮತ್ತು ಜಾರ್ಖಂಡ್‌ನ ವಿವಿಧ ಸ್ಥಳಗಳು ಹಾಗೂ ಕಂಪನಿಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಸತತ 4 ದಿನವೂ ದಾಳಿ ಮುಂದುವರಿಸಿದ್ದು, ಜಪ್ತಿಯಾದ ನಗದಿನ ಪ್ರಮಾಣ ಬೆಚ್ಚಿಬೀಳಿಸುವಂತೆ 290 ಕೋಟಿ ರೂ. ದಾಟಿದೆ. ಈ ನಡುವೆ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದ್ದು, ಮೊತ್ತ 400 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ.
ಇದು, ‘ಈವರೆಗೆ ದೇಶದ ಯಾವುದೇ ತನಿಖಾ ಸಂಸ್ಥೆ ಒಂದೇ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ಅತ್ಯಧಿಕ ನಗದು ಎಂಬ ದಾಖಲೆ ಬರೆದಿದೆ’ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.
undefined
ಇದನ್ನು ಓದಿ: ಐಟಿ ರೇಡ್ ವೇಳೆ ಜಾರ್ಖಂಡ್ ಕಾಂಗ್ರೆಸ್ ಎಂಪಿ ಬಳಿ 400 ಕೋಟಿ ಹಣ! ಈವರೆಗೂ 225 ಕೋಟಿ ಕ್ಯಾಶ್ ಎಣಿಸಿದ ಅಧಿಕಾರಿಗಳು
ಎಲ್ಲಿಯವರೆಗೆ ಬಂದಿದೆ ಎಣಿಕೆ?:
ಬೋಲಂಗಿರ್‌ನಲ್ಲಿರುವ ಒಡಿಶಾದ ಅತಿ ದೊಡ್ಡ ಮದ್ಯ ಮಾರಾಟ ಮತ್ತು ತಯಾರಕ ಸಂಸ್ಥೆಯಾದ ಬಲ್ಡಿಯೊ ಸಾಹು ಗ್ರೂಪ್ ಆಫ್ ಕಂಪನೀಸ್ ಮತ್ತು ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ ಸೇರಿ ಸಾಹುಗೆ ಸೇರಿದ್ದ ಅನೇಕ ಸ್ಥಳಗಳ ಮೇಲೆ ಬುಧವಾರದಿಂದಲೇ 40 ಐಟಿ ಅಧಿಕಾರಿಗಳ ತಂಡ ದಾಳಿ ಮಾಡುತ್ತಿದೆ. 30 ಕಪಾಟಿನಲ್ಲಿ ತುಂಬಿಟ್ಟಿದ್ದ ಹಾಗೂ 156 ಚೀಲಗಳಲ್ಲಿ ತುಂಬಿದ್ದ ನೋಟುಗಳ ಕಂತೆಗಳನ್ನು ಜಪ್ತಿ ಮಾಡಲಾಗಿದೆ. ಆದರೆ ಎಣಿಕೆ ಕಾರ್ಯ ಸತತ 4ನೇ ದಿನವೂ ಮುಂದುವರಿದಿದೆ.
ಬೋಲಗೀರ್ ಸ್ಟೇಟ್ ಬ್ಯಾಂಕ್‌ನ ಎಲ್ಲ ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. 4 ದಿನವಾದರೂ ಎಣಿಕೆ ಮುಗಿದಿಲ್ಲ. ಏಕೆಂದರೆ ಆ ಪ್ರಮಾಣದಲ್ಲಿ ನಗದು ಜಪ್ತಾಗಿದೆ. ಸುಮಾರು 40 ದೊಡ್ಡ ಮತ್ತು ಸಣ್ಣ ಯಂತ್ರಗಳಿಂದ ನೋಟುಗಳ ಎಣಿಕೆ ಕಾರ್ಯ ನಡೆಸಲಾಗುತ್ತಿದ್ದು, ಇದಕ್ಕಾಗಿ ಹೆಚ್ಚಿನ ಇಲಾಖೆ ಮತ್ತು ಬ್ಯಾಂಕ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಹಣವನ್ನು ರಾಜ್ಯದ ಸರ್ಕಾರಿ ಬ್ಯಾಂಕ್‌ಗಳಿಗೆ ನಿರಂತರವಾಗಿ ಸಾಗಿಸಲಾಗುತ್ತಿದ್ದು, ಇದಕ್ಕಾಗಿ ಇನ್ನೂ ಹೆಚ್ಚಿನ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ.
ಇದನ್ನು ಓದಿ: ಐಟಿ ರೇಡ್: ಕಾಂಗ್ರೆಸ್ ಸಂಸದನ ನಿವಾಸದಲ್ಲಿ ಪತ್ತೆಯಾಯ್ತು ನೂರಾರು ಕೋಟಿ ರೂ. ನಗದು!
ವಶಪಡಿಸಿಕೊಳ್ಳಲಾದ ಬಹುತೇಕ ನೋಟುಗಳು 500 ರೂ .ಮುಖಬೆಲೆಯ ನೋಟುಗಳೇ ಆಗಿದ್ದು, ಉಳಿದವುಗಳು 200 ಮತ್ತು 100 ರು. ನೋಟುಗಳಾಗಿದೆ. ಈ ವೇಳೆ ಯಾವುದೇ 2,000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿಲ್ಲ. 2,000 ರೂ. ನೋಟುಗಳನ್ನು ಬದಲಿಸಿಕೊಂಡೇ ಇಷ್ಟು ಪ್ರಮಾಣದ ಹಣವನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಶಂಕಿಸಲಾಗಿದೆ.
ಇನ್ನಷ್ಟು ನಗದು ಸಿಗುವ ಶಂಕೆ:
30 ಕಪಾಟಿನಲ್ಲಿ ಹಣ ಸಿಕ್ಕ ಬಳಿಕ ಜಪ್ತಿ ಆದ 156 ಚೀಲಗಳ ಎಣಿಕೆ ಮುಂದುವರಿದಿದೆ. ಕೇವಲ 6 - 7 ಚೀಲದಲ್ಲಷ್ಟೇ 25 ಕೋಟಿ ರೂ. ಹಣ ಸಿಕ್ಕಿದೆ. ಶುಕ್ರವಾರ ರಾತ್ರಿ ವೇಳೆಗೆ ಒಟ್ಟು 225 ಕೋಟಿ ರೂ. ಎಣಿಕೆ ಮಾಡಲಾಗಿತ್ತು. ಇದರ ಪ್ರಮಾಣ ಶನಿವಾರ 290 ಕೋಟಿ ರೂ.ಗೆ ಏರಿದೆ. ಬೋಲಂಗಿರ್‌ನ ಕಂಪನಿಯಲ್ಲೇ 10 ಕಪಾಟಿನಲ್ಲಿದ್ದ ಸುಮಾರು 230 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದುದನ್ನು ವಿವಿಧ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಅನೇಕ ಕಡೆ ಹಣ ಬಿಚ್ಚಿಟ್ಟಿರುವ ಶಂಕೆ ಇದೆ. ಹೀಗಾಗಿ ಜಪ್ತಿ ಆಗಬಹುದಾದ ನಗದು 400 ಕೋಟಿ ರೂ. ದಾಟಬಹುದು.
ಇದನ್ನು ಓದಿ: ಚುನಾವಣೆಯಲ್ಲಿ ಹಂಚಲು ಕರ್ನಾಟಕದಿಂದ ತೆಲಂಗಾಣಕ್ಕೆ 3.5 ಕೋಟಿ ರೂ. ಹಣ ಸಾಗಾಟ! ಹೈದರಾಬಾದಲ್ಲಿ ಜಪ್ತಿ
ಲೆಕ್ಕವೇ ಇಲ್ಲದಷ್ಟು ಕಂತೆ ಕಂತೆ ಹಣ ವಶಕ್ಕೆ ಪಡೆದು ಅದನ್ನು ಎಣಿಸಲು ತನಿಖಾ ಸಂಸ್ಥೆಯು ಇಷ್ಟೊಂದು ಸಮಯ ತೆಗೆದುಕೊಂಡ ಉದಾಹರಣೆ ದೇಶದಲ್ಲಿ ಬಹುಶಃ ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದಿನ ದಾಖಲೆ 257 ಕೋಟಿ ರೂ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಾಪಾರಿಯೊಬ್ಬನಿಂದ 2019ರಲ್ಲಿ 257 ಕೋಟಿ ರೂ. ನಗದು ಜಪ್ತಿ ಮಾಡಲಾಗಿತ್ತು. ಈ ದಾಖಲೆಯನ್ನು ಈಗ ಸಾಹು ಮೇಲಿನ ದಾಳಿ ಮುರಿದಿದೆ.
ಸಾಹು, ಕಾಂಗ್ರೆಸ್ ಮೌನ:
ಈವರೆಗೆ ದಾಳಿಗೊಳಗಾದ ಸಂಸ್ಥೆಯಾಗಲೀ ರಾಜ್ಯಸಭಾ ಸಂಸದ ಧೀರಜ್ ಆಗಲಿ ಈ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಕಾಂಗ್ರೆಸ್ ಕೂಡ ಮೌನ ವಹಿಸಿದೆ. ಶನಿವಾರ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಇದನ್ನು ಪ್ರಶ್ನಿಸಿದ್ದು, ‘ಕಾಂಗ್ರೆಸ್ ಭ್ರಷ್ಟಾಚಾರ ಪರಂಪರೆ ಜೀವಂತ ಇದೆ ಎಂಬುದು ಸಾಬೀತಾಗಿದೆ’ ಎಂದಿದೆ.
ಇನ್ನೊಂದೆಡೆ ದಾಳಿಯನ್ನು ಸ್ವಾಗತಿಸಿರುವ ಒಡಿಶಾದ ಆಡಳಿತಾರೂಢ ಬಿಜೆಡಿಯು ವಶಕ್ಕೆ ಪಡೆದ ಹಣ ಕಾಂಗ್ರೆಸ್ ನಾಯಕರದ್ದು ಎಂದು ಜಾರ್ಖಂಡ್ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.ಆದರೆ ಕಾಂಗ್ರೆಸ್ ನಾಯಕರು ಇದು ಬಿಜೆಪಿ ಹಣ ಎನ್ನುತ್ತಿದ್ದಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಸೇರಿ ತಮ್ಮ ಹಣವನ್ನು ಉದ್ಯಮಿ ಬಳಿ ಇಟ್ಟಿರುವಂತೆ ತೋರುತ್ತಿದೆ ಎಂದು ವ್ಯಂಗ್ಯವಾಡಿದೆ.
34 ಕೋಟಿ ಆಸ್ತಿ ಘೋಷಿಸಿದ್ದ ಸಾಹು:
2018ರ ರಾಜ್ಯಸಭೆ ಚುನಾವಣೆ ವೇಳೆ ತನ್ನ ಚುನಾವಣಾ ಅಫಿಡವಿಟ್‌ನಲ್ಲಿ ಸಾಹು, 34 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾಗಿ ತಿಳಿಸಿದ್ದರು.
- 290 ಕೋಟಿ ರೂ... ಶನಿವಾರದವರೆಗೆ ಐಟಿ ಇಲಾಖೆ ಎಣಿಸಿರುವ ಹಣದ ಮೌಲ್ಯ
- 400 ಕೋಟಿ ರೂ... ಸಾಹು ಬಳಿ ಇಷ್ಟು ನಗದು ಇರಬಹುದು ಎಂಬ ಅಂದಾಜು
- 30 ಕಪಾಟು... ಸುಮಾರು 30 ಕಪಾಟುಗಳಲ್ಲಿ ಸಂಗ್ರಹಿಸಿ ಇಡಲಾಗಿದ್ದ ಹಣ
- 200 ಚೀಲ... ಈ ಹಣವನ್ನು 200 ಚೀಲದಲ್ಲಿ ಪ್ಯಾಕ್ ಮಾಡಿ ಸಂಗ್ರಹ
- 40 ಅಧಿಕಾರಿ.. ಐಟಿ ಇಲಾಖೆಯ 40 ಅಧಿಕಾರಿಗಳಿಂದ ದಾಳಿ
- 4 ದಿನ.. ಸತತ 4 ದಿನಗಳಿಂದ ಜಾರ್ಖಂಡ್, ಒಡಿಶಾದಲ್ಲಿ ಐಟಿ ರೇಡ್
- 40 ಯಂತ್ರ.. 40 ನೋಟು ಎಣಿಕೆ ಯಂತ್ರಗಳಿಂದ ಮುಂದುವರೆದ ಎಣಿಕೆ
- 34 ಕೋಟಿ ರೂ. 2018ರಲ್ಲಿ 34 ಕೋಟಿ ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿದ್ದ ಸಾಹು