
ಕಾರವಾರ(ಅ.12): ಕರ್ನಾಟಕದ ಪಡುಬಿದ್ರಿ, ಕಾಸರಕೋಡು ಸೇರಿದಂತೆ ದೇಶದ 8 ಬೀಚ್‌ಗಳು ಪ್ರತಿಷ್ಠಿತ ಬ್ಲೂ ಫ್ಲ್ಯಾಗ್ ಗೌರವಕ್ಕೆ ಪಾತ್ರವಾಗಿದೆ. ಈ ಮೂಲಕ ವಿಶ್ವದ ಅತ್ಯಂತ ಸ್ವಚ್ಛ ಬೀಚ್‌ಗಳ ಸಾಲಿಗೆ ಇವು ಸೇರ್ಪಡೆಯಾಗಿವೆ. ಅಲ್ಲದೆ ಇಂಥ ಬೀಚ್‌ಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಅತ್ಯುತ್ತಮ ಕ್ರಮಗಳಿಗೆ ಜಾಗತಿಕ ಮಟ್ಟದ 50 ದೇಶಗಳಲ್ಲಿ 3ನೇ ಸ್ಥಾನವನ್ನೂ ಭಾರತ ಪಡೆದುಕೊಂಡಿದೆ.
"
ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ‘ಈ ಗೌರವ ದೇಶದ ಪಾಲಿಗೆ ಹೆಮ್ಮೆಯ ಸಮಯ. ಇದು ಸರ್ಕಾರದ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಚಟುವಟಿಕೆಗಳಿಗೆ ಸಿಕ್ಕ ಜಾಗತಿಕ ಮಾನ್ಯತೆ. ಇಂಥದ್ದೊಂದು ಮಾನ್ಯತೆ ಪಡೆಯಲು ಬೀಚ್‌ಗಳಿಗೆ 6 ವರ್ಷಗಳ ಗಡುವು ನೀಡಿತ್ತಾದರೂ, ಅದನ್ನು ಕೇವಲ ಎರಡೇ ವರ್ಷದಲ್ಲಿ ಸಾಧಿಸಿದ ಹೆಮ್ಮೆ ಭಾರತದ್ದು. ಇಡೀ ಏಷ್ಯಾ ಪೆಸಿಫಿಕ್ ವಲಯದಲ್ಲಿ ಇಂಥ ಸಾಧನೆ ಮಾಡಿದ ಏಕೈಕ ದೇಶ ಭಾರತ’ ಎಂದು ಜಾವಡೇಕರ್ ಹೇಳಿದ್ದಾರೆ.
ಭಾರತದ 8 ಬೀಚ್‌ಗಳು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ಬೀಚ್, ಗುಜರಾತ್‌ನ ಶಿವರಾಜ್‌ಪುರ, ಕೇರಳದ ಕಾಪ್ಪಡ್, ಆಂಧ್ರದ ಋುಷಿಕೊಂಡ, ಒಡಿಶಾದ ಗೋಲ್ಡನ್, ಅಂಡಮಾನ್ ಮತ್ತು ನಿಕೋಬಾರ್‌ನ ರಾಧಾನಗರ್, ಕೇಂದ್ರಾಡಳಿತ ಪ್ರದೇಶ ದಿಯುನ ಘೋಗ್ಲಾ ಬೀಚ್‌ಗಳು ಬ್ಲೂಫ್ಲ್ಯಾಗ್ ಪ್ರಮಾಣ ಪತ್ರಕ್ಕೆ ಪಾತ್ರವಾಗಿದೆ.
ಶಿಫಾರಸು: ದೇಶದ 13 ಬೀಚ್‌ಗಳು ಇಂಥ ಮಾನ್ಯತೆಗೆ ಅರ್ಜಿ ಹಾಕಿದ್ದವು. ಈ ಪೈಕಿ ರಾಷ್ಟ್ರೀಯ ಆಯ್ಕೆ ಸಮಿತಿಯು 8 ಬೀಚ್‌ಗಳನ್ನು ಅಂತಾರಾಷ್ಟ್ರೀಯ ಆಯ್ಕೆಗಾರರ ಸಮಿತಿಗೆ ಶಿಫಾರಸು ಮಾಡಿತ್ತು. ಆ ಎಲ್ಲಾ ಬೀಚ್‌ಗಳಿಗೆ ಇದೀಗ ಡೆನ್ಮಾರ್ಕ್ ದೇಶದ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ (ಎಫ್‌ಇಇ) ಸಂಸ್ಥೆ ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ನೀಡಿದೆ.
ಕೊಡುವುದು ಯಾರು?
ಡೆನ್ಮಾರ್ಕ್ ಮೂಲದ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟ್ ಎಜುಕೇಷನ್ ಎಂಬ ಸಂಸ್ಥೆ ಈ ಪ್ರಮಾಣಪತ್ರ ನೀಡುತ್ತದೆ.
ಮಾನದಂಡಗಳೇನು ?
ಬ್ಲೂ ಫ್ಲ್ಯಾಗ್ ಮಾನ್ಯತೆಗೆ ಸುರಕ್ಷತೆ, ಪರಿಸರ ಶಿಕ್ಷಣ, ಜಾಗೃತಿ ಮತ್ತು ನಿರ್ವಹಣೆ ಎಂಬ 4 ವಿಭಾಗಗಲ್ಲಿ 33 ಬಗೆಯ ಮಾನದಂಡಗಳಿವೆ. ಪರಿಸರ ಸಹ್ಯತೆ, ಸ್ವಚ್ಛತೆ, ಸಮುದ್ರದ ನೀರಿನ ಶುದ್ಧತೆ, ನಿರಪಾಯಕಾರಿ, ಅಂತಾರಾಷ್ಟ್ರೀಯ ಗುಣಮಟ್ಟ, ಮೂಲ ಸೌಕರ್ಯ, ಪ್ಲಾಸ್ಟಿಕ್ ಮುಕ್ತ, ತ್ಯಾಜ್ಯ ನಿರ್ವಹಣೆ, ಹಸಿರು ಪರಿಸರ, ಪರಿಸದ ಅಧ್ಯಯನಕ್ಕೆ ಅವಕಾಶ ಇತ್ಯಾದಿ ಮಾನದಂಡಗಳನ್ನು ಪಾಲಿಸಿರಬೇಕು.
ಏನಿದು ಬ್ಲೂ ಫ್ಲ್ಯಾಗ್?
ಬೀಚಿನ ಸುರಕ್ಷತೆ, ಕಡಲ ನೀರಿನ ಗುಣಮಟ್ಟ, ಪರಿಸರ ಸ್ನೇಹಿ ವಾತಾವರಣ, ಬೀಚಿನ ಸ್ವಚ್ಛತೆ, ಪ್ರವಾಸಿಗರಿಗೆ ಅನುಕೂಲತೆ ಮತ್ತಿತರೆ 33 ಅಂಶ ಪರಿಶೀಲಿಸಿ ನೀಡುವ ಪ್ರಮಾಣಪತ್ರವಿದು. ಈ ಎಲ್ಲ ಮಾನದಂಡ ಅನುಸರಿಸಿದ ಕಡಲತೀರಗಳಲ್ಲಿ ನೀಲಿ ಬಣ್ಣದ ಧ್ವಜ ಹಾರಿಸಲಾಗುತ್ತದೆ.
ಏನು ಲಾಭ?
ಇಂಥ ಪ್ರಮಾಣಪತ್ರ ಪಡೆದ ಬೀಚ್‌ಗಳು, ನೈಸರ್ಗಿಕವಾಗಿ, ಸಾಮಾಜಿಕವಾಗಿ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ವಿದೇಶಿ ಪ್ರವಾಸಿಗರು ಇಲ್ಲಿಗೆ ತೆರಳಲು ಇಷ್ಟಪಡುತ್ತಾರೆ. ಇದರಿಂದ ಈ ಬೀಚ್‌ಗಳ ಸುತ್ತಮುತ್ತಲ ಪ್ರದೇಶಗಳಲ್ಲೂ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ