ಸುಪ್ರೀಂ ಜಡ್ಜ್‌ ವಿರುದ್ಧವೇ ಆಂಧ್ರ ಸಿಎಂ ಸಮರ!

By Kannadaprabha NewsFirst Published Oct 12, 2020, 7:40 AM IST
Highlights

ಸುಪ್ರೀಂ ಜಡ್ಜ್‌ ವಿರುದ್ಧವೇ ಆಂಧ್ರ ಸಿಎಂ ಸಮರ!| ಅಮರಾವತಿ ಭೂಹಗರಣದಲ್ಲಿ 2ನೇ ಹಿರಿಯ ಜಡ್ಜ್‌ ಹಸ್ತಕ್ಷೇಪ| ಸಿಜೆಐ ಬೋಬ್ಡೆಗೆ ಪತ್ರ: ಆಂಧ್ರ ಹೈಕೋರ್ಟ್ ವಿರುದ್ಧವೂ ಆರೋಪ

ನವದೆಹಲಿ(ಅ.12): ದೇಶದ ನ್ಯಾಯಾಂಗ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿಯೊಬ್ಬರ ವಿರುದ್ಧವೇ ‘ಅಕ್ರಮಗಳ’ ಆರೋಪ ಮಾಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ಅವರಿಗೆ ಪತ್ರ ಬರೆದಿದ್ದಾರೆ.

ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ನಡೆದಿದೆ ಎನ್ನಲಾದ ‘ಅಮರಾವತಿ’ ರಾಜಧಾನಿ ನಿರ್ಮಾಣದ ಭೂಹಗರಣದ ತನಿಖೆಯ ಮೇಲೆ ಈ ನ್ಯಾಯಮೂರ್ತಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದು, ಆಂಧ್ರಪ್ರದೇಶದ ಹೈಕೋರ್ಟ್‌ ಮೇಲೂ ಪ್ರಭಾವ ಬೀರಿ ತಮಗೆ ಬೇಕಾದಂತೆ ಆದೇಶಗಳನ್ನು ಹೊರಡಿಸಿಕೊಳ್ಳುತ್ತಿದ್ದಾರೆ. ಚಂದ್ರಬಾಬು ನಾಯ್ಡುಗೆ ಈ ಜಡ್ಜ್‌ ಹತ್ತಿರದವರಾಗಿದ್ದು, ಸ್ವತಃ ಜಡ್ಜ್‌ ಕುಟುಂಬದವರೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಗನ್‌ ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್‌ಗೆ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆಯಿರುವ ಜಡ್ಜ್‌ ವಿರುದ್ಧವೇ ಹೀಗೆ ಒಂದು ರಾಜ್ಯದ ಮುಖ್ಯಮಂತ್ರಿ ಆರೋಪಗಳ ಮಳೆಗರೆದು ಎಂಟು ಪುಟಗಳ ಪತ್ರ ಬರೆದಿರುವುದು ನ್ಯಾಯಾಂಗ ಮತ್ತು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಅಮರಾವತಿ ಭೂ ಹಗರಣ:

ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಅಮರಾವತಿ ಎಂಬ ನೂತನ ರಾಜಧಾನಿ ನಿರ್ಮಾಣಕ್ಕೆ ಅಪಾರ ಪ್ರಮಾಣದ ಭೂಮಿ ಸ್ವಾಧೀನಪಡಿಸಿಕೊಂಡಿದ್ದರು. ಆದರೆ ಅದಕ್ಕೂ ಮುನ್ನ ರಾಜಧಾನಿ ತಲೆಯೆತ್ತಲಿರುವ ಪ್ರದೇಶದಲ್ಲಿ ತಿಂಗಳಿಗೆ 5000 ರು.ಗಿಂತ ಕಡಿಮೆ ಆದಾಯವಿರುವ 797 ಬಿಳಿ ಪಡಿತರ ಚೀಟಿದಾರರು 2000 ಕೋಟಿ ರು. ಹಣ ನೀಡಿ 700ಕ್ಕೂ ಹೆಚ್ಚು ಎಕರೆ ಜಾಗ ಖರೀದಿಸಿದ್ದರು. ಅವರಲ್ಲಿ ಬಹುತೇಕ ಮಂದಿಯ ಬಳಿ ಪಾನ್‌ ಕಾರ್ಡ್‌ ಕೂಡ ಇರಲಿಲ್ಲ. ಕಡುಬಡವರು ಕೋಟಿಗಟ್ಟಲೆ ಹಣ ನೀಡಿ ಭೂಮಿ ಖರೀದಿಸಲು ಹೇಗೆ ಸಾಧ್ಯ ಎಂಬ ಕಾರಣಕ್ಕೆ ಜಗನ್‌ ಮುಖ್ಯಮಂತ್ರಿಯಾದ ನಂತರ ಸಿಐಡಿ ತನಿಖೆಗೆ ಆದೇಶಿಸಿದ್ದರು. ಅಲ್ಲದೆ, ಚಂದ್ರಬಾಬು ಅವಧಿಯ ಐದು ವರ್ಷಗಳ ಆಡಳಿತದಲ್ಲಿ ಕೈಗೊಂಡ ಎಲ್ಲ ನಿರ್ಧಾರಗಳ ಬಗ್ಗೆಯೂ ಭ್ರಷ್ಟಾಚಾರ ನಿಗ್ರಹ ದಳದ ತನಿಖೆಗೆ ಆದೇಶಿಸಿದ್ದರು. ಈ ಹಗರಣಗಳ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್‌ ಜಡ್ಜ್‌ ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಜಗನ್‌ ಅವರ ಆರೋಪವಾಗಿದೆ.

 

click me!