
ನವದೆಹಲಿ(ಮೇ.28): ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ನೂತನ ಸಂಸತ್ ಭವನದ ಲೋಕಾರ್ಪಣೆ ಸಮಾರಂಭ ಇಂದು(ಭಾನುವಾರ) ಅದ್ಧೂರಿಯಾಗಿ ನೆರವೇರಲಿದೆ. ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೂ ವಿವಿಧ ಗಣ್ಯರ ಸಮ್ಮುಖದಲ್ಲಿ ಇಡೀ ದಿನ ಕಾರ್ಯಕ್ರಮಗಳು ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನವನ್ನು ವಿಧ್ಯುಕ್ತವಾಗಿ ಉದ್ಘಾಟನೆ ಮಾಡಲಿದ್ದಾರೆ.
20,000 ಕೋಟಿ ರು. ವೆಚ್ಚದ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ಹೊಸ ಸಂಸತ್ ಭವನ ನಿರ್ಮಾಣಗೊಂಡಿದೆ. ಕಳೆದ ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ನಿರ್ಮಾಣದ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡಿವೆ. ಹಳೆಯ ಸಂಸತ್ ಭವನದ ಪಕ್ಕದಲ್ಲೇ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಆಕರ್ಷಕ ವಾಸ್ತುವಿನ್ಯಾಸದ ಹೊಸ ಭವನ ನಿರ್ಮಾಣಗೊಂಡಿದೆ. ಇದರಲ್ಲಿ 888 ಸಂಸದರು ಆಸೀನರಾಗಬಹುದಾದ ಲೋಕಸಭೆ ಹಾಗೂ 300 ಆಸನಗಳ ರಾಜ್ಯಸಭೆ ಸಭಾಂಗಣಗಳಿವೆ. ಈಗಿನ ಸಂಸತ್ ಭವನದಲ್ಲಿ 543 ಆಸನಗಳ ಲೋಕಸಭೆ ಹಾಗೂ 250 ಆಸನಗಳ ರಾಜ್ಯಸಭೆಯಿದೆ. 2020ರ ಡಿ.10ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನಕ್ಕೆ ಶಂಕುಸ್ಥಾಪನೆ ಮಾಡಿದ್ದರು.
ನೂತನ ಸಂಸತ್ ಭವನ ಉದ್ಘಾಟನೆ ಅಡೆ ತಡೆ ನಿವಾರಣೆ, ಮೋದಿ ವಿರುದ್ಧ ಸಲ್ಲಿಕೆಯಾದ ಅರ್ಜಿ ವಜಾ!
ಹೊಸ ಸಂಸತ್ ಭವನವನ್ನು ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸದೆ ಪ್ರಧಾನಿಯೇ ಉದ್ಘಾಟಿಸುತ್ತಿದ್ದಾರೆ ಎಂದು ಆಕ್ಷೇಪಿಸಿ 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿವೆ. ಇದೇ ವೇಳೆ, 1947ರಲ್ಲಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಹಸ್ತಾಂತರಗೊಂಡಿದ್ದರ ಪ್ರತೀಕವಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಪ್ರದಾನ ಮಾಡಲ್ಪಟ್ಟಿದ್ದ ಚಿನ್ನದ ರಾಜದಂಡ (ಸೆಂಗೋಲ್)ವನ್ನು ಹೊಸ ಲೋಕಸಭೆಯಲ್ಲಿ ಪ್ರತಿಷ್ಠಾಪನೆ ಮಾಡುವ ವಿಚಾರಕ್ಕೂ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅದಕ್ಕೆ ಸೊಪ್ಪುಹಾಕದೆ ಕೇಂದ್ರ ಸರ್ಕಾರ ಬೆಳಿಗ್ಗೆ 7.15ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಸಂಸತ್ ಭವನವನ್ನು ದೇಶಕ್ಕೆ ಸಮರ್ಪಣೆ ಮಾಡುವ ಸಮಾರಂಭವನ್ನು ಹಮ್ಮಿಕೊಂಡಿದೆ.
ನೂತನ ಸಂಸತ್‌ನಲ್ಲಿ ವಿಜೃಂಭಿಸಲಿದೆ ಚಿನ್ನದ ರಾಜದಂಡ: ಮದ್ರಾಸ್-ಡೆಲ್ಲಿ ತಲುಪಿದ ಸೆಂಗೋಲ್ ಪ್ರಯಾಣ ಹೇಗಿತ್ತು..?
ಏನೇನು ಕಾರ್ಯಕ್ರಮ?
ಭಾಗ 1
ಬೆಳಿಗ್ಗೆ 7.15: ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ
7.30: ಹೋಮ ಹಾಗೂ ಧಾರ್ಮಿಕ ಪೂಜೆಯ ವಿಧಿವಿಧಾನಗಳು
8.30: ಹೊಸ ಲೋಕಸಭೆಯ ಸಭಾಂಗಣಕ್ಕೆ ಪ್ರಧಾನಿ ಆಗಮನ
9.00: ಸ್ಪೀಕರ್ ಆಸನದ ಬಳಿ ಚಿನ್ನದ ರಾಜದಂಡ (ಸೆಂಗೋಲ್) ಪ್ರತಿಷ್ಠಾಪನೆ
9.30: ಮೊಗಸಾಲೆಯಲ್ಲಿ ಪ್ರಾರ್ಥನಾ ಕಾರ್ಯಕ್ರಮ. ಬಳಿಕ ಪ್ರಧಾನಿ ನಿರ್ಗಮನ
ಭಾಗ 2
ಬೆಳಿಗ್ಗೆ 11.30: ಅತಿಥಿಗಳು ಹಾಗೂ ಗಣ್ಯರ ಆಗಮನ
ಮಧ್ಯಾಹ್ನ 12.00: ಪ್ರಧಾನಿ ನರೇಂದ್ರ ಮೋದಿ ಆಗಮನ, ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮ ಆರಂಭ
12.10: ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ ಅವರಿಂದ ಭಾಷಣ. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳ ಸಂದೇಶವನ್ನು ಓದುವ ಸಾಧ್ಯತೆ
12.17: ಎರಡು ಕಿರು ಚಿತ್ರಗಳ ಪ್ರದರ್ಶನ
12.38: ರಾಜ್ಯಸಭೆ ವಿಪಕ್ಷ ನಾಯಕರ ಭಾಷಣ (ಹಾಜರಿ ಅನುಮಾನ). ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ
1.05: ಪ್ರಧಾನಿ ಮೋದಿಯವರಿಂದ 75 ರು. ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿ ಬಿಡುಗಡೆ
1.10: ಪ್ರಧಾನಿ ಮೋದಿ ಭಾಷಣ
2.00: ಕಾರ್ಯಕ್ರಮ ಮುಕ್ತಾಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ