ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು.. ತಮ್ಮದೇ ಪ್ರಾಂಶುಪಾಲರನ್ನ 27 ಬಾರಿ ಇರಿದು ಕೊಂದರು.. ಕಾರಣ?

Published : Aug 20, 2026, 04:00 PM IST
School principal killed

ಸಾರಾಂಶ

ಐಷಾರಾಮಿ ಜೀವನದ ಹಪಾಹಪಿಗೆ ಬಿದ್ದ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು, ತಮ್ಮ ಶಾಲೆಯ ಪ್ರಾಂಶುಪಾಲರನ್ನು 27 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಕ್ಕಳನ್ನು ತಿದ್ದಲು ಹೋದ ಗುರುವನ್ನೇ ಹಣಕ್ಕಾಗಿ ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಈ ಪ್ರಕರಣ, ಸಮಾಜದಲ್ಲಿ ಮಕ್ಕಳ ಕ್ರೂರ ಮನಸ್ಥಿತಿಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

ತೆಲಂಗಾಣ: ವಿದ್ಯೆ ಕಲಿಸುವ ಗುರುಗಳನ್ನೇ ವಿದ್ಯಾರ್ಥಿಗಳು ಕೊಲೆ ಮಾಡುವಂತಹ ಕ್ರೂರ ಮನಸ್ಥಿತಿ ಇಂದಿನ ಮಕ್ಕಳಲ್ಲಿ ಬೆಳೆಯುತ್ತಿದೆಯೇ? ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದ ಈ ಘಟನೆ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಕೇವಲ ಐಷಾರಾಮಿ ಜೀವನದ ಹಪಾಹಪಿಗೆ ಬಿದ್ದ ಇಬ್ಬರು 10ನೇ ತರಗತಿಯ ವಿದ್ಯಾರ್ಥಿಗಳು, ತಮ್ಮದೇ ಶಾಲೆಯ ಪ್ರಾಂಶುಪಾಲರನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.

ಏನಿದು ಘಟನೆ?

ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯ ಶಾಲೆಯೊಂದರ ಪ್ರಾಂಶುಪಾಲರಾದ ಕಲ್ಲು ರೂಪಾ ರೆಡ್ಡಿ ಎಂಬುವವರು ಆಗಸ್ಟ್ 11ರಂದು ತಮ್ಮ ಮನೆಯಲ್ಲಿಯೇ ಭೀಕರವಾಗಿ ಕೊಲೆಯಾಗಿದ್ದರು. ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ದಿಗಿಲು ಹುಟ್ಟಿಸುವ ಸತ್ಯಾಂಶಗಳು ಲಭ್ಯವಾಗಿವೆ. ಈ ಕೊಲೆ ಮಾಡಿದ್ದು ಬೇರಾರೂ ಅಲ್ಲ, ಅದೇ ಶಾಲೆಯ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು!

ಈ ಇಬ್ಬರು ವಿದ್ಯಾರ್ಥಿಗಳು ಹಾಸ್ಟೆಲ್‌ನ ಒಂದೇ ರೂಮಿನಲ್ಲಿದ್ದರು. ಇವರಿಗೆ ದುಬಾರಿ ಐಫೋನ್, ಬೈಕ್ ಮತ್ತು ಐಷಾರಾಮಿ ಜೀವನ ನಡೆಸುವ ಹುಚ್ಚು ಇತ್ತು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೇಗ ಹಣ ಮಾಡುವುದು ಹೇಗೆ? ಎಂದು ಸರ್ಚ್ ಮಾಡುತ್ತಿದ್ದರು. ಇವರ ಈ ದುಂದುವೆಚ್ಚದ ಬಗ್ಗೆ ತಿಳಿದ ಪ್ರಾಂಶುಪಾಲ ರೂಪಾ ರೆಡ್ಡಿ ಅವರು, ವಿದ್ಯಾರ್ಥಿಗಳನ್ನು ತಿದ್ದಲು ಪ್ರಯತ್ನಿಸಿದ್ದರು. ನಿಮ್ಮ ನಡವಳಿಕೆ ಬಗ್ಗೆ ಪೋಷಕರಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಸಿದ್ದರು. ಇದೇ ಈ ವಿದ್ಯಾರ್ಥಿಗಳ ಕೆಂಗಣ್ಣಿಗೆ ಕಾರಣವಾಯಿತು.

27 ಬಾರಿ ಚಾಕುವಿನಿಂದ ಇರಿತ!

ತಮ್ಮ ಹಾದಿಗೆ ಅಡ್ಡ ಬಂದ ಪ್ರಾಂಶುಪಾಲರನ್ನು ಮುಗಿಸಲು ಸ್ಕೆಚ್ ಹಾಕಿದ ವಿದ್ಯಾರ್ಥಿಗಳು, ಸುಮಾರು ಒಂದು ವಾರ ಅವರ ಮನೆಯ ರೆಕ್ಕಿ (Reece) ನಡೆಸಿದ್ದರು. ಸಿಸಿಟಿವಿ ಕ್ಯಾಮೆರಾಗಳಿಂದ ತಪ್ಪಿಸಿಕೊಳ್ಳಲು ಮುಖವಾಡ ಗ್ಲೌಸ್ ಧರಿಸಿ ಮನೆಯ ಹಿಂಬಾಗಿಲಿನಿಂದ ನುಗ್ಗಿದ್ದರು. ಪ್ರಾಂಶುಪಾಲರು ಇವರನ್ನು ಗುರುತಿಸಿದ ತಕ್ಷಣ ಬರೋಬ್ಬರಿ 27 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ನಂತರ ಮನೆಯಲ್ಲಿದ್ದ ನಗದು ಮತ್ತು ಮೊಬೈಲ್ ಫೋನ್ ಕದ್ದು ಪರಾರಿಯಾಗಿದ್ದರು.

ಈ ನಿಗೂಢ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಿಕ್ಕಿದ್ದು ಒಂದೇ ಒಂದು ಸುಳಿವು. ಸಾಯುವ ಕೆಲವೇ ಕ್ಷಣಗಳ ಮೊದಲು ರೂಪಾ ರೆಡ್ಡಿ ಅವರು ತಮ್ಮ ಅತ್ತೆಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆಗ ಅವರು ಹೇಳಿದ ಕೊನೆಯ ಮಾತು ಬಾಬು. ಆ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಬಾಬು ಎಂದು ಕರೆಯುವ ರೂಢಿಯಿತ್ತು. ಇದನ್ನೇ ಬೆನ್ನತ್ತಿದ ಪೊಲೀಸರು ಸುಮಾರು 80 ಜನರನ್ನು ವಿಚಾರಣೆ ನಡೆಸಿ ಅಂತಿಮವಾಗಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?

ಪೊಲೀಸರು ಈ ವಿದ್ಯಾರ್ಥಿಗಳನ್ನು ತಡೆದು ತಪಾಸಣೆ ನಡೆಸಿದಾಗ ಅವರ ಬಳಿ 1.54 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ವಿಶೇಷವೆಂದರೆ ಆ ಹಣದಲ್ಲಿದ್ದ ಮೂರು 500 ರೂಪಾಯಿ ನೋಟುಗಳ ಮೇಲೆ ರಕ್ತದ ಕಲೆಗಳಿದ್ದವು! ಅಲ್ಲದೆ ಕದ್ದ ಹಣದಲ್ಲಿ ಇವರು ಈಗಾಗಲೇ 60 ಸಾವಿರ ರೂಪಾಯಿ ನೀಡಿ ಹೊಸ ಐಫೋನ್ ಖರೀದಿಸಿದ್ದರು. ಪ್ರಾಂಶುಪಾಲರ ಹತ್ಯೆಯ ಈ ಘಟನೆ ಕೇವಲ ಒಂದು ಕ್ರಿಮಿನಲ್ ಪ್ರಕರಣವಲ್ಲ. ಇದು ಇಂದಿನ ಮಕ್ಕಳಲ್ಲಿ ಬೆಳೆಯುತ್ತಿರುವ ಅತಿಯಾದ ಆಸೆ ಸಾಮಾಜಿಕ ಜಾಲತಾಣಗಳ ನಕಾರಾತ್ಮಕ ಪ್ರಭಾವ ಮತ್ತು ನೈತಿಕ ಮೌಲ್ಯಗಳ ಕುಸಿತಕ್ಕೆ ಕನ್ನಡಿ ಹಿಡಿದಿದೆ. ಮಕ್ಕಳ ಕೈಗೆ ಮೊಬೈಲ್ ನೀಡುವ ಮುನ್ನ ಅವರು ಏನು ಮಾಡುತ್ತಿದ್ದಾರೆ ಎಂಬ ನಿಗಾ ವಹಿಸುವುದು ಪೋಷಕರಿಗೆ ಈಗ ಅನಿವಾರ್ಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

1984ರ ಸಿಖ್ ವಿರೋಧಿ ಗಲಭೆ ಕೇಸ್, ಜೀವಾವಧಿ ಶಿಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ನಿಧನ
ತಾಯಿಯ ಒಂದೇ ಒಂದು ಏಟು ಬದಲಿಸಿತು ಜೀವನ: ₹13 ಸಾವಿರ ಸಂಬಳದಿಂದ ₹3,000 ಕೋಟಿ ಕಂಪನಿ ಕಟ್ಟಿದ ಆಕಾಶ್ ಗುಪ್ತಾ