ಮಹಾರಾಷ್ಟ್ರದ ಸಿಂಧುದುರ್ಗ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಕುಸಿದು ಬಿದ್ದಿದ್ದು ಮಹಾರಾಷ್ಟ್ರ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದು, ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಪಾಲ್ಘರ್ (ಮಹಾರಾಷ್ಟ್ರ) (ಆ.31): ಮಹಾರಾಷ್ಟ್ರದ ಸಿಂಧುದುರ್ಗ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪ್ರತಿಮೆ ಕುಸಿದು ಬಿದ್ದಿದ್ದು ಮಹಾರಾಷ್ಟ್ರ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದು, ಬಹಿರಂಗ ಕ್ಷಮೆಯಾಚಿಸಿದ್ದಾರೆ. ‘ಛತ್ರಪತಿ ಶಿವಾಜಿ ಮಹಾರಾಜ್ ಎಂಬುದು ಕೇವಲ ರಾಜನ ಹೆಸರಲ್ಲ. ನಮಗೆ ಅವರು ದೇವರು. ನಾನಿಂದು ಅವರ ಕಾಲಿಗೆ ತಲೆಯಿಟ್ಟು ಕ್ಷಮೆ ಕೇಳುತ್ತೇನೆ’ ಎಂದು ಶುಕ್ರವಾರ ಪ್ರಧಾನಿ ಹೇಳಿದ್ದಾರೆ.
ಮಹಾರಾಷ್ಟ್ರ ಪಾಲ್ಘರ್ ಜಿಲ್ಲೆಯಲ್ಲಿ ನೂತನ ಬಂದರು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ನಮ್ಮ ಮೌಲ್ಯಗಳು ಬೇರೆ. ನನಗೆ ನಮ್ಮ ದೇವರಿಗಿಂತ ದೊಡ್ಡವರು ಯಾರೂ ಇಲ್ಲ. ಶಿವಾಜಿ ನಮಗೆ ದೇವರು. ನಾನು ಇಲ್ಲಿಗೆ ಬಂದಿಳಿದ ತಕ್ಷಣ ಮೊದಲು ಮಾಡಿದ ಕೆಲಸವೇ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿದ್ದಕ್ಕೆ ಕ್ಷಮೆ ಕೇಳಿದ್ದು. ಇದರಿಂದ ನೋವು ಅನುಭವಿಸಿದ ಜನರಲ್ಲೂ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದರು.
ರಾಹುಲ್ ಗಾಂಧಿಗೆ ಟಾಂಗ್: ‘ಕೆಲವರು ವೀರ ಸಾವರ್ಕರ್ ಅವರನ್ನು ಅವಮಾನಿಸುತ್ತಲೇ ಇರುತ್ತಾರೆ. ಆದರೆ ಕ್ಷಮೆ ಕೇಳುವುದಿಲ್ಲ’ ಎಂದು ಇದೇ ವೇಳೆ ಮೋದಿ ಹೇಳಿದರು. ಈ ಮೂಲಕ ಈ ಹಿಂದೊಮ್ಮೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಕಿಚಾಯಿಸಿದರು.
ಬಳ್ಳಾರಿ ಜೈಲಲ್ಲಿ ಮಂಕಾದ ದರ್ಶನ್: ಬ್ಯಾರಕ್‌ನಲ್ಲೇ ಓಡಾಟ
ಕಳೆದ ಡಿಸೆಂಬರ್‌ನಲ್ಲಿ ಮೋದಿ ಉದ್ಘಾಟಿಸಿದ್ದ ಹಾಗೂ ನೌಕಾಪಡೆ-ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ನಿರ್ಮಿಸಿದ್ದ ಶಿವಾಜಿ ಪ್ರತಿಮೆ ಕೆಲ ದಿನಗಳ ಹಿಂದೆ ಕುಸಿದುಬಿದ್ದಿತ್ತು. ಇದಾದ ಬಳಿಕ ರಾಜ್ಯದಲ್ಲಿ ಬಿಜೆಪಿ-ಶಿವಸೇನೆ-ಎನ್‌ಸಿಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದು, ಮುಖ್ಯಮಂತ್ರಿ ಏಕನಾಥ ಶಿಂಧೆ ರಾಜೀನಾಮೆಗೆ ಒತ್ತಾಯಿಸುತ್ತಿವೆ.