* 3ನೇ ಅಲೆ ತೀವ್ರವಾಗಿರಬಹುದು: ಐಎಂಎ ಎಚ್ಚರಿಕೆ
* ಇನ್ನೂ ಹೆಚ್ಚು ಜನರಿಗೆ ಒಮಿಕ್ರೋನ್ ವ್ಯಾಪಿಸಬಹುದು
* ಇದನ್ನು ತಡೆಯಲು ಸರ್ಕಾರ ಕ್ರಮ ಜರುಗಿಸಬೇಕು
* ಮುಂಚೂಣಿ ಕಾರ‍್ಯಕರ್ತರಿಗೆ ಹೆಚ್ಚುವರಿ ಡೋಸ್ ನೀಡಬೇಕು
ನವದೆಹಲಿ(ಡಿ. 08) ದೇಶದಲ್ಲಿ ರೂಪಾಂತರಿ ಪ್ರಭೇದ ಒಮಿಕ್ರೋನ್ (Omicron) ಆತಂಕ ಹೆಚ್ಚಿರುವ ಬೆನ್ನಲ್ಲೇ, ದೇಶಕ್ಕೆ ಅಪ್ಪಳಿಸಲಿರುವ 3ನೇ ಅಲೆಯನ್ನು ದೊಡ್ಡ ಪ್ರಮಾಣದ್ದಾಗಿರಬಹುದು. ತುಂಬಾ ಜನರು ಸೋಂಕಿಗೆ ಈಡಾಗಬಹುದು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ (IMA) ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎಂಎ ಸದಸ್ಯರು, ‘ಈಗಾಗಲೇ ಕೆಲವು ರಾಜ್ಯಗಳಲ್ಲಿ ವರದಿಯಾಗಿರುವ ಒಮಿಕ್ರೋನ್ ರೂಪಾಂತರಿಯು ಮುಂದಿನ ದಿನಗಳಲ್ಲಿ ಹೆಚ್ಚು ಸೋಂಕು ಪಸರಿಸಬಹುದು. ಕೊರೋನಾ ಬಾಧೆಯಿಂದ ದೇಶ ಹೊರಬರುತ್ತಿರುವಾಗಲೇ ಸೋಂಕು ಹೆಚ್ಚಳವಾಗುತ್ತಿರುವುದು, ದೊಡ್ಡ ಹಿನ್ನಡೆಯೇ ಸರಿ. ಕೂಡಲೇ ನಾವು ಸರಿಯಾದ ಕ್ರಮ ಕೈಗೊಳ್ಳದಿದ್ದರೆ, 3ನೇ ಅಲೆಗೆ ಸಿಲುಕಬೇಕಾಗುತ್ತದೆ’ ಎಂದು ಹೇಳಿದರು.
undefined
Covid 19 Vaccine: ಒಮಿಕ್ರೋನ್ ಭೀತಿ: 3ನೇ ಡೋಸ್ ನೀಡಲು ಸರ್ಕಾರಕ್ಕೆ IMA ಆಗ್ರಹ!
ಹೀಗಾಗಿ 3ನೇ ಅಲೆಯಲ್ಲಿನ ಆರ್ಭಟ ತಪ್ಪಿಸಲು ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಮತ್ತು ಕಡಿಮೆ ಪ್ರತಿಕಾಯ ಶಕ್ತಿ ಇರುವ ನಾಗರಿಕರಿಗೆ ಹೆಚ್ಚುವರಿ ಡೋಸ್ ನೀಡಬೇಕು. ಅಲ್ಲದೆ 12ರಿಂದ 18 ವಯೋಮಾನದ ಮಕ್ಕಳಿಗೂ ಲಸಿಕೆ ನೀಡಿಕೆಯನ್ನು ತ್ವರಿತಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಲಾಗಿದೆ ಎಂದು ಐಎಂಎ ಸದಸ್ಯರು ಹೇಳಿದರು.
ಜನರು ದೊಡ್ಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು. ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಕೈಗಳ ಶುಚಿತ್ವ ಸೇರಿ ಕೊರೋನಾ ನಿಯಂತ್ರಣ ಮಾರ್ಗಸೂಚಿಗಳನ್ನು ಜನ ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದರು.
ಕೇವಲ 6822 ಹೊಸ ಕೋವಿಡ್ (Coronavirus) ಕೇಸು: 18.5 ತಿಂಗಳ ಕನಿಷ್ಠ! ಒಂದೆಡೆ ಒಮಿಕ್ರೋನ್ ರೂಪಾಂತರಿಯ ಆತಂಕ ಎದುರಾಗಿರುವ ನಡುವೆ, ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಕೇವಲ 6822 ಹೊಸ ಕೋವಿಡ್ ಕೇಸ್‌ಗಳು ಪತ್ತೆಯಾಗಿವೆ. ಇದು ಕಳೆದ 558 ದಿನಗಳ (18.5 ತಿಂಗಳ) ಕನಿಷ್ಠ.
ಇದೇ ವೇಳೆ, ಸಕ್ರಿಯ ಸೋಂಕಿತರ ಸಂಖ್ಯೆ 95,014ಕ್ಕೆ ಕುಸಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಒಂದು ದಿನದಲ್ಲಿ 220 ಮಂದಿ ಕೋವಿಡ್‌ಗೆ ಬಲಿಯಾಗಿದ್ದು, ಈ ಮಹಾಮಾರಿಗೆ ಈವರೆಗೆ 4,73,757 ಮಂದಿ ಮೃತಪಟ್ಟಂತಾಗಿದೆ. ಒಟ್ಟಾರೆ ಸೋಂಕಿತರ ಪೈಕಿ ಶೇ.0.27ರಷ್ಟುಮಂದಿ ಮಾತ್ರವೇ ಸಕ್ರಿಯ ಸೋಂಕಿತರಾಗಿದ್ದಾರೆ. ಏತನ್ಮಧ್ಯೆ, ಈವರೆಗೆ 128.76 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಮರುಸೋಂಕು: ಒಮಿಕ್ರೋನ್ ಸಾಮರ್ಥ್ಯ 3 ಪಟ್ಟು ಹೆಚ್ಚು: ಡೆಲ್ಟಾರೂಪಾಂತರಿಗೆ ಹೋಲಿಸಿದರೆ ಒಮ್ಮೆ ಸೋಂಕು ತಗುಲಿದವರಿಗೆ 90 ದಿನಗಳ ಬಳಿಕ ಮರು ಸೋಂಕು ತಗುಲಿಸುವ ಸಾಮರ್ಥ್ಯವು ಡೆಲ್ಟಾವೈರಸ್‌ಗೆ ಹೋಲಿಸಿದರೆ ಒಮಿಕ್ರೋನ್ ರೂಪಾಂತರಿಗೆ ಮೂರು ಪಟ್ಟು ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಹೇಳಿದ್ದರು. ಒಮಿಕ್ರೋನ್ ಪ್ರಕರಣಗಳ ಏರಿಕೆ ಹಾಗೂ ಸೋಂಕಿತರು ಆಸ್ಪತ್ರೆಗೆ ದಾಖಲಾದ ಸಂಖ್ಯೆಗಳಲ್ಲಿ ಏರಿಕೆಯ ನಡುವೆ ಸಾಕಷ್ಟುದಿನಗಳ ಅಂತರ ಕಂಡುಬಂದಿದೆ. ಹೀಗಾಗಿ ಒಮಿಕ್ರೋನ್ ಪ್ರಭಾವ ಎಷ್ಟುತೀವ್ರವಾಗಿರಬಹುದು ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಎರಡರಿಂದ ಮೂರು ವಾರಗಳ ಕಾಲ ಕಾಯಬೇಕಾಗಿದೆ.
ಒಮಿಕ್ರೋನ್ ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಲಸಿಕೆಯನ್ನು ಪಡೆಯದವರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ಒಳಗಾಗುತ್ತಿರುವುದು ಆಘಾತಕಾರಿ. ಬಹಳಷ್ಟುದೇಶಗಳಲ್ಲಿ ಮಕ್ಕಳಿಗೆ ಯಾವುದೇ ಲಸಿಕೆಯ ರಕ್ಷಣೆಯನ್ನು ನೀಡಲಾಗಿಲ್ಲ. ಕೆಲವೇ ದೇಶಗಳು ಮಕ್ಕಳಿಗೂ ಲಸಿಕೆ ನೀಡಲು ಮುಂದಾಗಿವೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಒಮಿಕ್ರೋನ್‌ಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದರೂ ಈ ವೈರಸ್ ಪ್ರಾಣಕ್ಕೆ ಸಂಚಕಾರ ತಂದ ಉದಾಹರಣೆ ಇಲ್ಲ.