
ನವದೆಹಲಿ (ಜೂ.24): ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರವು ಮೋಡ ಬಿತ್ತನೆಯ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ ಎಂದು ದೇಶದ ಪ್ರಮಖ ಟೆಕ್ನಾಲಜಿ ಸಂಸ್ಥೆಯಾಗಿರುವ ಐಐಟಿ-ಕೆ ಗುರುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಮಳೆಯ ಸಂಭವನೀಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮೋದ ಬಿತ್ತನೆಯನ್ನು ಮಾಡಲಾಗುತ್ತದೆ. ಇದರಲ್ಲಿ ಸಿಲ್ವರ್ ಅಯೋಡೈಡ್, ಡ್ರೈ ಐಸ್, ಸಾಮಾನ್ಯ ಉಪ್ಪು ಮತ್ತು ಇತರ ಅಂಶಗಳಂತಹ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಲಾಗಿರುತ್ತದೆ ಎಂದು ಸಂಸ್ಥೆ ಹೇಳಿದೆ. ಐಐಟಿ ಕಾನ್ಪುರದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು ಕೆಲವು ವರ್ಷಗಳ ಹಿಂದೆ ಈ ಯೋಜನೆಯನ್ನು ಆರಂಭ ಮಾಡಿತ್ತು. ಬುಧವಾರ ಸೆಸ್ನಾ ಏರ್‌ಕ್ರಾಫ್ಟ್ ಬಳಸಿ ನಡೆಸಿದ ಮೋಡ ಬಿತ್ತನೆಯ ಪ್ರಯೋಗದ ವೇಳೆ ವಿಮಾನವು ಅಂದಾಜು 5 ಸಾವಿರ ಅಡಿ ಎತ್ತರಕ್ಕೆ ಏರಿತ್ತು. ಪರೀಕ್ಷಾರ್ಥ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಬಳಿಕ ಐಐಟಿ ಕಾನ್ಪುರದಲ್ಲಿರುವ ಲ್ಯಾಬ್‌ನ ಏರ್‌ಸ್ಟ್ರಿಪ್‌ನಲ್ಲಿ ವಿಮಾನ ಯಶಸ್ವಿಯಾಗಿ ಕೆಳಗಿಳಿಯಿತು.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ (DGCA) ಸೂಕ್ತ ಅನುಮೋದನೆಯೊಂದಿಗೆ ಪ್ರಯೋಗವನ್ನು ನಡೆಸಲಾಯಿತು. ಐಐಟಿ ಕಾನ್ಪುರದ ಫ್ಲೈಟ್ ಲ್ಯಾಬರೋಟರಿಯ ಏರ್‌ಸ್ಟ್ರಿಪ್‌ನಿಂದ ಸೆಸ್ನಾ ವಿಮಾನವನ್ನು ಹಾರಿಸಲಾಗಿತ್ತು. ಈ ವಿಮಾನಕ್ಕೆ ಅಮೆರಿಕದ ಉತ್ಪಾದಕರಿಂದ ತರಿಸಿಕೊಳ್ಳಲಾಗಿದ್ದ ಮೋಡ ಬಿತ್ತನೆಯ ಯಂತ್ರಗಳನ್ನು ಅಳವಡಿಸಲಾಗಿತ್ತು ಎಂದು ತಿಳಿಸಿದೆ.
ವಿಮಾನದಲ್ಲಿನ ಮಾರ್ಪಾಡುಗಳಿಗೆ ವಿಮಾನದ ತಯಾರಕರು ಮತ್ತು ಡಿಜಿಸಿಎ ಕೂಡ ಅನುಮೋದನೆ ನೀಡಿತ್ತು. ಪರೀಕ್ಷಾರ್ಥ ಪ್ರಯೋಗದಲ್ಲಿ ಎಂದಿನ ಅಭ್ಯಾಸದಂತೆ ಫ್ಲೇರ್‌ಅನ್ನು ಬಳಸಿಕೊಂಡು ರಾಸಾಯನಿಕ ಏಜೆಂಟ್‌ಗಳನ್ನು ವಾತಾವರಣಕ್ಕೆ ಹರಡಿತು ಎಂದು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮಣಿಂದ್ರ ಅಗರವಾಲ್ ಹೇಳಿದ್ದಾರೆ.
"ಮೋಡ ಬಿತ್ತನೆಗಾಗಿ ನಮ್ಮ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿರುವುದು ನಮಗೆ ಖುಷಿ ತಂದಿದೆ. ನಾವು ಜ್ವಾಲೆಗಳನ್ನು ಮೋಡಗಳಿಗೆ ಹಾರಿಸಲಿಲ್ಲ, ಇದು ಉಪಕರಣಗಳಿಗೆ ಪ್ರಯೋಗವಾಗಿತ್ತು. ಯಶಸ್ವಿ ಪರೀಕ್ಷಾ ಹಾರಾಟವು ನಂತರದ ಹಂತಗಳಲ್ಲಿ ನಾವು ಈಗ ಮೋಡ ಬಿತ್ತನೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಸೂಚಿಸುತ್ತದೆ" ಅಗರವಾಲ್ ಹೇಳಿದರು.
ಕರುನಾಡಿಗೆ ಮೂರು ದಿನದಲ್ಲಿ ಮಳೆಯಾಗದಿದ್ದರೆ ಮೋಡ ಬಿತ್ತನೆ ಮಾಡಲು ನಿರ್ಧಾರ
"ನಾವು ಈಗ ಕೆಲವು ವರ್ಷಗಳಿಂದ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಕೋವಿಡ್‌ನಿಂದಾಗಿ ವಿಮಾನ ಖರೀದಿ ಹಾಗೂ ಇದರ ಮಾರ್ಪಾಡುಗಳಲ್ಲಿ ಬದಲಾವಣೆ ಮಾಡಲು ಸಮಯ ಹಿಡಿಯಿತು' ಎಂದು ಅವರು ಹೇಳಿದರು. ಈಗ, ಡಿಜಿಸಿಎಯಿಂದ ಅನುಮೋದನೆ ಮತ್ತು ಮೊದಲ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನಾವು ಸೆಟಪ್ ಅನ್ನು ಪೂರ್ಣಗೊಳಿಸಲು ಹತ್ತಿರವಾಗಿದ್ದೇವೆ ಎಂದು ಅಗರ್ವಾಲ್ ಹೇಳಿದರು.
ಕೊನೆಗೂ ಬಂತು ಮೋಡಬಿತ್ತನೆಗೆ ಅಮೆರಿಕ ವಿಮಾನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ