ಕಾಂಗ್ರೆಸ್‌ ಗೆದ್ದರೆ ಮೊದಲ ಅಧಿವೇಶನದಲ್ಲೇ ಸಿಎಎ ರದ್ದು: ಚಿದಂಬರಂ

By Kannadaprabha NewsFirst Published Apr 22, 2024, 9:23 AM IST
Highlights

ಕೇಂದ್ರದಲ್ಲಿ ಇಂಡಿಯಾ ಬ್ಲಾಕ್ ಸರ್ಕಾರ ರಚಿಸಿದ ನಂತರ ಸಂಸತ್ತಿನ ಮೊದಲ ಅಧಿವೇಶನದಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ರದ್ದುಗೊಳಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಭಾನುವಾರ ಹೇಳಿದ್ದಾರೆ.

ತಿರುವನಂತಪುರಂ: ಕೇಂದ್ರದಲ್ಲಿ ಇಂಡಿಯಾ ಬ್ಲಾಕ್ ಸರ್ಕಾರ ರಚಿಸಿದ ನಂತರ ಸಂಸತ್ತಿನ ಮೊದಲ ಅಧಿವೇಶನದಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ರದ್ದುಗೊಳಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಭಾನುವಾರ ಹೇಳಿದ್ದಾರೆ. ಸಿಎಎಯನ್ನು ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸದಿದ್ದರೂ ಅದನ್ನು ರದ್ದುಗೊಳಿಸುವುದು ಕಾಂಗ್ರೆಸ್ ಪಕ್ಷದ ಉದ್ದೇಶವಾಗಿದೆ. ಪ್ರಣಾಳಿಕೆ ತುಂಬಾ ಸುದೀರ್ಘವಾಗಿದ್ದ ಕಾರಣ ಅದನ್ನು ಉಲ್ಲೇಖಿಸಿರಲಿಲ್ಲ ಎಂದು ಚಿದಂಬರಂ ಹೇಳಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ನಿರಂತರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ಅದರ ಪ್ರಣಾಳಿಕೆಯು ಸಿಎಎಯನ್ನು ಉಲ್ಲೇಖಿಸಲು ವಿಫಲವಾಗಿದೆ ಎಂದು ಹೇಳಿದ್ದರು. ಅದಕ್ಕೆ ಚಿದು ಈ ರೀತಿ ಉತ್ತರಿಸಿದರು.

ಚುನಾವಣಾ ಆಯೋಗದ ಆದೇಶ ಪಾಲಿಸಲ್ಲ: ಉದ್ಧವ್ ಸವಾಲು

ಮುಂಬೈ: ತಮ್ಮ ಪಕ್ಷ ಹೊರತಂದಿರುವ ನೂತನ ಧ್ಯೇಯಗೀತೆಯಿಂದ ‘ಹಿಂದೂ’ ಮತ್ತು ‘ಜೈ ಭವಾನಿ’ ಎಂಬ ಪದಗಳನ್ನು ತೆಗೆದು ಹಾಕಬೇಕು ಎಂಬ ಚುನಾವಣಾ ಆಯೋಗದ ಸೂಚನೆಯನ್ನು ಪಾಲಿಸುವುದಿಲ್ಲ ಎಂದು ಶಿವಸೇನೆ (ಉದ್ಧವ್‌ ಬಣ) ನಾಯಕ ಉದ್ಧವ್‌ ಠಾಕ್ರೆ ಸಡ್ಡು ಹೊಡೆದಿದ್ದಾರೆ.

‘ತುಳಜಾ ಭವಾನಿ ಆಶೀರ್ವಾದದಿಂದ ಛತ್ರಪತಿ ಶಿವಾಜಿ ಮಹಾರಾಜರು, ಹಿಂದವೀ ಸಮಾಜ ಸ್ಥಾಪಿಸಿದ್ದರು. ಹೀಗಿರುವಾಗ ಹಿಂದೂ ಮತ್ತು ಜೈ ಭವಾನಿ ಎಂಬ ಪದ ತೆಗೆಯುವಂತೆ ನೀಡಿದ ನೋಟಿಸ್‌ ಮಹಾರಾಷ್ಟ್ರಕ್ಕೆ ಮಾಡಿದ ಅವಮಾನ. ನಾವೇನು ಹಿಂದೂ ಧರ್ಮ ಅಥವಾ ದೇವರ ಹೆಸರಲ್ಲಿ ಮತ ಕೇಳುತ್ತಿಲ್ಲ. ಹೀಗಾಗಿ ಧ್ಯೇಯ ಗೀತೆಯಿಂದ ಆ ಎರಡೂ ಪದಗಳನ್ನು ತೆಗೆಯುವುದಿಲ್ಲ’ ಎಂದಿದ್ದಾರೆ.

‘ಒಂದು ವೇಳೆ ನಮ್ಮ ನಿರ್ಧಾರದ ವಿರುದ್ಧ ಆಯೋಗ ಕ್ರಮ ಕೈಗೊಂಡಿದ್ದೇ ಆದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಜೈ ಬಜರಂಗ ಬಲಿ ಎಂದು ಇವಿಎಂ ಬಟನ್‌ ಒತ್ತಿ ಎಂದು ಹೇಳಿದ್ದರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ತಿಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಹಿಂದೆ 400 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ನಿಂದ ಈಗ ಕನಿಷ್ಠ 300 ಸೀಟಲ್ಲಿ ಸ್ಪರ್ಧಿಸಲೂ ಪರದಾಟ: ಮೋದಿ

click me!