ಕೇಂದ್ರ ಸರ್ಕಾರದಿಂದಲೇ ಹೊಸ ಸುದ್ದಿಸಂಸ್ಥೆ ಆರಂಭಕ್ಕೆ ಪ್ಲಾನ್‌: ದೂರದರ್ಶನಕ್ಕೆ ಹೊಸರೂಪ

By Kannadaprabha NewsFirst Published Apr 22, 2024, 5:18 AM IST
Highlights

ಚಿಹ್ನೆ ಬಣ್ಣ ಕಿತ್ತಳೆ ವರ್ಣಕ್ಕೆ ಬದಲಾವಣೆಯಾಗುವ ಮೂಲಕ ಸುದ್ದಿಯಲ್ಲಿರುವ ಕೇಂದ್ರ ಸರ್ಕಾರದ ಅಧೀನದ ದೂರದರ್ಶನ, ಮುಂದಿನ ದಿನಗಳಲ್ಲಿ ಬೃಹತ್‌ ಬದಲಾವಣೆಗೆ ಸಜ್ಜಾಗಿದೆ. 

ನವದೆಹಲಿ (ಏ.22): ಚಿಹ್ನೆ ಬಣ್ಣ ಕಿತ್ತಳೆ ವರ್ಣಕ್ಕೆ ಬದಲಾವಣೆಯಾಗುವ ಮೂಲಕ ಸುದ್ದಿಯಲ್ಲಿರುವ ಕೇಂದ್ರ ಸರ್ಕಾರದ ಅಧೀನದ ದೂರದರ್ಶನ, ಮುಂದಿನ ದಿನಗಳಲ್ಲಿ ಬೃಹತ್‌ ಬದಲಾವಣೆಗೆ ಸಜ್ಜಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮರಳಿ 3ನೇ ಸಲ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ದೂರದರ್ಶನ ಮತ್ತು ಅದರ ಮಾತೃಸಂಸ್ಥೆ ಪ್ರಸಾರ ಭಾರತಿಗೆ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ. 

ಹಾಲಿ ಭಾರತೀಯ ಗ್ರಾಹಕರಿಗೆ ಸೀಮಿತವಾಗಿರುವ ದೂರದರ್ಶನವನ್ನು ಜಾಗತಿಕ ಬ್ರ್ಯಾಂಡ್‌ ಆಗಿ ರೂಪಿಸುವ ಮತ್ತು ಈ ಸಂಬಂಧ 15 ದೇಶಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಆರಂಭಿಸುವ ಗುರಿಯನ್ನೂ ಸರ್ಕಾರ ಹಾಕಿಕೊಂಡಿದೆ ಎಂದು ಇಂಗ್ಲಿಷ್‌ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಜೊತೆಗೆ ಪ್ರಸಾರ ಭಾರತಿಯ ಶಬ್ದ್‌ ಪೋರ್ಟಲ್‌ ಅನ್ನು ಜಾಗತಿಕ ಸುದ್ದಿಸಂಸ್ಥೆಯಾಗಿ ಅಭಿವೃದ್ಧಿಪಡಿಸಲಾಗುವುದು. ಇದರ ಮೂಲಕ ನಿತ್ಯ ಆಡಿಯೋ, ವಿಡಿಯೋ, ಫೋಟೋ ಮತ್ತು ಇತರೆ ಸೇವೆ ನೀಡಲಾಗುವುದು.

ಇದರ ವ್ಯಾಪ್ತಿಗೆ ದೇಶ-ವಿದೇಶಗಳ 1000ಕ್ಕೂ ಹೆಚ್ಚು ಮಾಧ್ಯಮಗಳನ್ನು ಸೇರಿಸಿಕೊಳ್ಳಲಾಗುವುದು. ಜೊತೆಗೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಹಬ್‌ ಆರಂಭಿಸುವ ಮತ್ತು ಭಾರತ್‌ ನಮನ್‌ ಎಂಬ ಪೋರ್ಟಲ್‌ ಆರಂಭಿಸುವ ಇರಾದೆಯೂ ಇದೆ. ಇದರಲ್ಲಿ ದೂರದರ್ಶನದ ಎಲ್ಲಾ ಹಳೆಯ ಮಾಹಿತಿಗಳು, ಪುಸ್ತಕಗಳು, ಫೋಟೋ ಜನರಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳಲಾಗುವುದು. ಇನ್ನು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತತ್‌ಕ್ಷಣದ ಭಾಷಾಂತರ, ಉಪಶೀರ್ಷಿಕೆ ಮತ್ತು ಕೃತಕ ಬುದ್ಧಿಮತ್ತೆ ಆಧರಿತ ವಿಷಯ ಸಂಗ್ರಹ ಸೇವೆ ನೀಡಲಿದೆ.

ಕಾಂಗ್ರೆಸ್‌ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ: ಪ್ರಧಾನಿ ಮೋದಿ

ಅಲ್ಲದೆ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಸಮ್ಮೇಳನ ಆಯೋಜಿಸುವ ಮತ್ತು ಸುಳ್ಳು ಸುದ್ದಿ ಪತ್ತೆಗೆ ಇರುವ ಪಿಐಬಿ ಫ್ಯಾಕ್ಟ್‌ ಚೆಕ್‌ ಅನ್ನು ಇನ್ನಷ್ಟು ವಿಸ್ತರಿಸುವ ಗುರಿ ರೂಪಿಸಲಾಗಿದೆ. ಇನ್ನು ದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾಸ್‌ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಕೋರ್ಸ್‌ ಆರಂಭಿಸುವ ಉದ್ದೇಶವೂ ಇದೆ. ಅಲ್ಲದೆ ಡಿಡಿ ಫ್ರಿ ಡಿಶ್‌ ಸೇವೆಯನ್ನು ನೆರೆಹೊರೆಯ ದೇಶಗಳಿಗೂ ವಿಸ್ತರಿಸುವ, ಅದರ ವ್ಯಾಪ್ತಿಗೆ ಇನ್ನಷ್ಟು ಚಾನೆಲ್‌ ಸೇರಿಸಿಕೊಳ್ಳುವ ಇರಾದೆಯೂ ಇದೆ. ಸತತ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಹೊಂದಿರುವ ಮೋದಿ ಸರ್ಕಾರ, ಹೊಸ ಸರ್ಕಾರದಲ್ಲಿನ ತನ್ನ ಮೊದಲ 100 ದಿನದ ಕಾರ್ಯಕ್ರಮ ಮತ್ತು ಮುಂದಿನ 5 ವರ್ಷಗಳ ಯೋಜನೆಯ ಭಾಗವಾಗಿ ಈ ಕಾರ್ಯಕ್ರಮ ರೂಪಿಸಿದೆ.

click me!