
ನವದೆಹಲಿ(ಡಿ.11): ವಾಯುಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ(IAF Helicopter crash) ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ಸೇರಿ 13 ಮಂದಿ ಸೇನಾಧಿಕಾರಿಗಳು ನಿಧನರಾಗಿದ್ದಾರೆ. ಮಡಿದವರ ಪೈಕಿ ಮತ್ತೆ 6 ಮೃತದೇಹದ ಗುರುತು ಪತ್ತೆಯಾಗಿದೆ(6 more bodies identified). ಗುರುತು ಮತ್ತೆಯಾದ ಪಾರ್ಥೀವ ಶರೀರಗಳನ್ನು ವಿಶೇಷ ವಿಮಾನದಲ್ಲಿ ಯೋಧರ ತವರಿಗೆ ಕಳುಹಿಸಲಾಗಿದೆ.
ಬಿಪಿನ್ ರಾವತ್(CDS Gen Bipin Rawat Death), ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್ ಹಾಗೂ ಲಫ್ಟಿನೆಂಟ್ ಕರ್ನಲ್ ಸಿಂಗ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆದಿದೆ. ಆದರೆ ಇನ್ನುಳಿದವರ ಗುರುತು ಪತ್ತೆಯಾಗದ ಕಾರಣ ಡಿಎನಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ಮತ್ತೆ 6 ಮೃತದೇಹದ ಗುರತು ಪತ್ತೆಯಾಗಿದೆ. ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚವ್ಹಾಣ್, ಸ್ಕ್ವಾರ್ಡ್ರನ್ ಲೀಡರ್ ಕುಲ್ದೀಪ್ ಸಿಂಗ್, ಜ್ಯೂನಿಯರ್ ವಾರಂಟ್ ಆಫೀಸರ್ ರಾಣಾ ಪ್ರತಾಪ್ ದಾಸ್, ಜ್ಯೂನಿಯರ್ ವಾರಂಟ್ ಆಫೀಸರ್ ಅಕ್ಕಾಲ್ ಪ್ರದೀಪ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಹಾಗೂ ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜ್ ಗುರುತು ಪತ್ತೆಯಾಗಿದೆ.
ಇಂದು ಗುರುತು ಪತ್ತೆಯಾದ 6 ಯೋಧರ ಪಾರ್ಥೀವ ಶರೀರವನ್ನು ವಿಶೇಷ ವಿಮಾನದಲ್ಲಿ ಅವರವರವ ಸ್ವಗ್ರಾಮಕ್ಕೆ ಕಳುಹಿಸಲಾಗಿದೆ. ಯೋಧರ ಅಂತ್ಯಕ್ರಿಯೆ ಸಕಲ ಮಿಲಿಟರಿ ಗೌರವದೊಂದಿಗೆ ನಡೆಸಲಾಗುತ್ತದೆ. ಇನ್ನು ನಾಲ್ಕು ಕುಟುಂಬಗಳು ಪಾರ್ಥೀವ ಶರೀರಕ್ಕಾಗಿ ಕಾಯುತ್ತಿದೆ. ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಹವಿಲ್ದಾರ್ ಸತ್ಪಾಲ್ ರೈ, ನಾಯಕ್ ಗುರಸೇವಕ್ ಹಾಗೂ ನಾಯಕ್ ಜಿತೇಂದ್ರ ಕುಮಾರ್ ಪಾರ್ಥೀವ ಶರೀರಕ್ಕಾಗಿ ಕುಟುಂಬಸ್ಥರು ಕಣ್ಣೀರಿನಿಂದಲೇ ಕಾಯುತ್ತಿದ್ದಾರೆ. ಗುರುತ ಪತ್ತೆಯಾಗದ ಮೃತದೇಹದಲ್ಲಿರುವ ನಾಲ್ಕು ಯೋಧರು ಬಿಪಿನ್ ರಾವತ್ ಸ್ಟಾಫ್ ಆಫೀಸರ್ ಆಗಿದ್ದರು.
ಬಿಪಿನ್ ರಾವತ್ , ಪತ್ನಿ ಮಧುಲಿಕಾ ಹಾಗೂ ಬ್ರಿಗೇಡಿಯರ್ ಲಿಡ್ಡರ್ ಅಂತ್ಯಕ್ರಿಯೆ ಶುಕ್ರವಾರ(ಡಿ.10) ಸಕಲ ಮಿಲಿಟರಿ ಗೌರವದೊಂದಿಗೆ ನಡೆಸಲಾಗಿದೆ. ದೆಹಲಿಯ ಬ್ರಾರ್ ಸ್ಕ್ವೇರ್ ಕಂಟೊನ್ಮೆಂಟ್ ರುದ್ರಭೂಮಿಯಲ್ಲಿ ಈ ಮೂವರು ಅಂತ್ಯಸಂಸ್ಕಾರ ಮಾಡಲಾಗಿದೆ.
ಪೈಲೆಟ್, ಕೂ ಪೈಲೆಟ್, ಸ್ಟಾಫ್ ಸೇರಿದಂತೆ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದ ವಾಯುಸೇನೆಯ Mi-17V5 ಹೆಲಿಕಾಪ್ಟರ್ ತಮಿಳುನಾಡಿನ ಕೂನುರು ಬಳಿಯ ನೀಲಗಿರಿ ಕಾಡಿನಲ್ಲಿ ಅಪಘಾತಕ್ಕೆ ಗುರಿಯಾಗಿತ್ತು. ಕಾಡಿನಲ್ಲಿ ಹೆಲಿಕಾಪ್ಟರ್ ಹೊತ್ತಿ ಉರಿದು ಛಿದ್ರ ಛಿದ್ರವಾಗಿತ್ತು. ತಕ್ಷಣವೇ ರಕ್ಷಣಾ ಕಾರ್ಯಗಳು ಆರಂಭಗೊಂಡಿತ್ತು. ಈ ಅಫಘಾತದಲ್ಲಿ 13 ಮಂದಿ ಮೃತಪಟ್ಟಿದ್ದರೆ, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ. ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವರುಣ್ ಸಿಂಗ್‌ರನ್ನು ಬೆಂಗಳೂರಿನ ಸೇನಾ ಆಸ್ಪತ್ರೆಯಾದ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವರುಣ್ ಸಿಂಗ್ ಆರೋಗ್ಯ ಗಂಭೀರವಾಗಿದೆ ಎಂದ ವಾಯುಸೇನಾ ಅಧಿಕಾರಿಗಳು ಹೇಳಿದ್ದಾರೆ.
ವೆಲ್ಲಿಂಗ್ಟನ್ ಸೇನಾ ಕಾಲೇಜಿನ ಕಾರ್ಯಕ್ರಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. 27 ನಿಮಿಷದ ಪ್ರಯಾಣ 20 ನಿಮಿಷಕ್ಕೆ ದುರಂತ ಅಂತ್ಯಕಂಡಿದೆ. ಇನ್ನು 7 ನಿಮಿಷ ಸಾಗಿದರೆ ಹೆಲಿಕಾಪ್ಟರ್ ವೆಲ್ಲಿಂಗ್ಟನ್ ಸೇನಾ ಕಾಲೇಜಿನಲ್ಲಿ ಲ್ಯಾಂಡ್ ಆಗುತ್ತಿತ್ತು. ಆದರೆ ಹೆಲಿಕಾಪ್ಟರ್ ಟೇಕ್ ಆಫ್ ಆದ 20 ನಿಮಿಷಕ್ಕೆ ಪತನಗೊಂಡು ದುರಂತ ಅಂತ್ಯಕಂಡಿದೆ.
ಬಿಪಿನ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಅವರನ್ನು ಒಂದೇ ಚಿತೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ರಾವತ್ ಇಬ್ಬರು ಪುತ್ರಿಯರು ಅಂತಿಮ ವಿಧಿವಿಧಾನಗಳನ್ನು ನೆರವೆರಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಇನ್ನು ಲಿಡ್ಡರ್ ಪತ್ನಿ ಎಲ್ಲಾ ದುಃಖವನ್ನು ಹಿಡಿದಿಟ್ಟುಕೊಂಡು ಲಿಡ್ಡರ್‌ಗೆ ಅಂತಿಮ ನಮನ ಸಲ್ಲಿಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ