
ನವದೆಹಲಿ: ‘1992ರ ಡಿ.6 ರಂದು ಟಿವಿಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳ್ಳುವುದನ್ನು ನೋಡಿ ನನಗೆ ಕಣ್ಣೀರು ಬಂದಿತ್ತು’ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಬ್ರಿಟಿಷ್ ಪತ್ರಿಕೆ ‘ದಿ ಗಾರ್ಡಿಯನ್’ಗೆ ನೀಡಿದ ಸಂದರ್ಶನದಲ್ಲಿ, ‘ಬಾಬ್ರಿ ಮಸೀದಿ ಧ್ವಂಸ ನೋಡಿ ನನಗೆ ಕಣ್ಣೀರು ಬಂದಿತ್ತು. ಆ ಘಟನೆಯು ಭಾರತದ ಜಾತ್ಯತೀತ ಸ್ವರೂಪ ಉಳಿಸಿಕೊಳ್ಳಲು ಒಂದು ಸುದೀರ್ಘ ಹೋರಾಟದ ಅಗತ್ಯವಿದೆ ಎಂಬುದನ್ನು ನನ್ನ ಅರಿವಿಗೆ ತಂದಿತು’ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.
‘ತುರ್ತು ಪರಿಸ್ಥಿತಿ ಅವಧಿಯಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಲಾಗಿದ್ದರೂ ಅದನ್ನು ಸಂವಿಧಾನಬದ್ಧವಾಗಿಯೇ ಮಾಡಲಾಗಿತ್ತು. ಇಂದಿರಾ ಗಾಂಧಿ ಅವರ ದೃಷ್ಟಿಯಿಂದ ನೋಡಿದರೆ ಆ ಸಮಯದಲ್ಲಿ ಅವರು ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ವ್ಯಾಪಕವಾಗುತ್ತಿದ್ದ ಸಂಘಟಿತ ಗಲಭೆಯನ್ನು ಎದುರಿಸಲು ಪರದಾಡುತ್ತಿದ್ದರು. ಹೀಗಾಗಿ ತುರ್ತುಸ್ಥಿತಿ ಅನಿವಾರ್ಯವಾಗಿತ್ತು’ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿಕೊಂಡಿದ್ದಾರೆ.
ತಮ್ಮ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕೃತಿ ಬಿಡುಗಡೆಗೂ ಮುನ್ನ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಹಿಂದೆ ನಡೆದು ಹೋದ ಘಟನೆಗಳ ಕುರಿತು ಹಿಂತಿರುಗಿ ನೋಡುವುದರಿಂದ ಜನರಿಗೆ ಅದನ್ನು ಸರಿಯಾಗಿ ಗ್ರಹಿಸಲು ನೆರವಾಗುತ್ತದೆ ಮತ್ತು ಸ್ವತಃ ಇಂದಿರಾ ಗಾಂಧಿ ಅವರೇ ಮುಂದೆ ಆ ಘಟನೆಗೆ ಸಾರ್ವಜನಿಕವಾಗಿ ವಿಷಾದವನ್ನೂ ವ್ಯಕ್ತಪಡಿಸಿದ್ದಲ್ಲದೆ, ತುರ್ತು ಪರಿಸ್ಥಿತಿಗಾಗಿ ಕ್ಷಮೆಯನ್ನೂ ಕೋರಿದ್ದರು’ ಎಂದರು.
‘ತುರ್ತುಪರಿಸ್ಥಿತಿಗೆ ಸಂಜಯ್ ಗಾಂಧಿ ಅವರ ಹೆಸರು ಪರ್ಯಾಯ ಪದವಾದಂತಿತ್ತು, ಇಂದಿರಾ ಗಾಂಧಿ ಅವರು ಪುತ್ರ ರಾಜೀವ್ ಗಾಂಧಿ ಹಾಗೂ ಇತರರ ಮಾತುಕೇಳಿದ್ದರೆ ತುರ್ತು ಪರಿಸ್ಥಿತಿ ಅವಧಿಯ ಕೌರ್ಯವನ್ನು ತಪ್ಪಿಸಬಹುದಿತ್ತೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಸೋನಿಯಾ, ‘ಸಾರ್ವಜನಿಕರ ಮನಸ್ಸಿನಲ್ಲಿ ತುರ್ತುಪರಿಸ್ಥಿತಿಗೆ ಸಂಜಯ್ ಅವರೊಬ್ಬರೇ ಪರ್ಯಾಯವಾಗಿ ಕಂಡರೂ ಇತರೆ ಕಾಂಗ್ರೆಸ್ ನಾಯಕರಿಂದಲೂ ಇಂದಿರಾ ಮೇಲೆ ತೀವ್ರ ಒತ್ತಡವಿತ್ತು. ರಾಜೀವ್ ಗಾಂಧಿ ಅವರಂಥ ವಿಭಿನ್ನ ಚಿಂತನೆಗಳನ್ನು ಹೊಂದಿದ್ದ ವ್ಯಕ್ತಿಗಳು ಇಂದಿರಾ ಗಾಂಧಿ ಅವರ ಸುತ್ತ ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು’ ಎಂದ ಸೋನಿಯಾ, ‘ಕೊನೆಗೂ ನನ್ನ ನನ್ನ ಅತ್ತೆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸ್ವಂತ ವಿವೇಚನೆ ಬಳಸಿಕೊಂಡು ಪರಿಹಾರೋಪಾಯಗಳನ್ನು ಕಂಡುಕೊಂಡರೆಂಬುದು ನನ್ನ ಭಾವನೆ’ ಎಂದು ಸ್ಪಷ್ಟಪಡಿಸಿದರು.
‘ತುರ್ತು ಪರಿಸ್ಥಿತಿ ಬಳಿಕವಷ್ಟೇ ನನಗೆ ಆ ಸಮಯದ ಪರಿಣಾಮಗಳ ಗಂಭೀರತೆ ನನಗೆ ತಿಳಿಯಿತು. ಪ್ರಜಾತಾಂತ್ರಿಕ ಹಕ್ಕುಗಳನ್ನು ಆ ಸಮಯದಲ್ಲಿ ಮೊಟಕುಗೊಳಿಸಲಾಗಿತ್ತು. ಹೇಬಿಯಸ್ ಕಾರ್ಪಸ್ ಅನ್ನು ರದ್ದು ಮಾಡಲಾಗಿತ್ತು. ಆದರೆ ಇದನ್ನು ಸಾಂವಿಧಾನಿಕವಾಗಿಯೇ ಮಾಡಲಾಗಿತ್ತು’ ಎಂದು ಸೋನಿಯಾ ತಿಳಿಸಿದರು.
ಕಳೆದ 12 ವರ್ಷಗಳಲ್ಲಿ ದೇಶ, ಪ್ರಜಾಪ್ರಭುತ್ವ ಮತ್ತು ಸಾಂಸ್ಥಿಕ ರಚನೆಗಳಿಗೆ ವ್ಯಾಪಕ ಹಾನಿ ಮಾಡಲಾಗಿದೆ. ಒಂದು ವೇಳೆ ಈ ಸರ್ಕಾರ (ಮೋದಿ ಸರ್ಕಾರ) ಹೋದರೂ ಆರೋಗ್ಯಕರ ವ್ಯವಸ್ಥೆ ಮರುರೂಪಿಸಲು ಸಾಕಷ್ಟು ಸಮಯ ಹಾಗೂ ರಾಜಕೀಯ ಪಕ್ಷಗಳ ಪರಿಶ್ರಮ ಬೇಕಾಗಬಹುದು’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ