
ಹೈದರಾಬಾದ್ (ಜ.29): ವಿಕಾರಾಬಾದ್ ಜಿಲ್ಲೆಯ ಬಂಟ್ವಾರಂ ಮಂಡಲದ ಯಾಚಾರಂ ಗ್ರಾಮದಲ್ಲಿ ತನ್ನ ವೃತ್ತಿಪರ ತರಬೇತಿಯನ್ನು ಬಳಸಿಕೊಂಡು ನಿದ್ರಾಜನಕ ಇಂಜೆಕ್ಷನ್ ನೀಡುವ ಮೂಲಕ ತನ್ನ ಹೆತ್ತವರನ್ನು ಕೊಂದ ಆರೋಪದ ಮೇಲೆ 25 ವರ್ಷದ ನರ್ಸ್ ಅನ್ನು ಬಂಧಿಸಲಾಗಿದೆ.
ಆರೋಪಿ ನಕ್ಕಲ ಸುರೇಖಾ ತನ್ನ ತಾಯಿ ಲಕ್ಷ್ಮಿ (54) ಮತ್ತು ತಂದೆ ದಶರತ್ (58) ಅವರಿಗೆ ಆರ್ಟಾಸಿಲ್ (Artacil) ಎಂಬ ನಿದ್ರಾಜನಕ ಔಷಧವನ್ನು ಅಧಿಕ ಪ್ರಮಾಣದಲ್ಲಿ ಇಂಜೆಕ್ಟ್ ಮಾಡಿ ಅವರನ್ನು ಸಾಯಿಸಿದ ಆರೋಪ ಹೊತ್ತಿದ್ದಾರೆ. ಸುರೇಖಾ ಸಂಗರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇಂಜೆಕ್ಷನ್ ಮತ್ತು ಅದನ್ನು ನೀಡುವ ಜ್ಞಾನವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾರಂ ಪೊಲೀಸರ ಪ್ರಕಾರ, ಸುರೇಖಾ ಸೋಶಿಯಲ್ ಮೀಡಿಯಾ ಇನ್ಸ್‌ಟಾಗ್ರಾಮ್ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆ ವ್ಯಕ್ತಿ ಬೇರೆ ಜಾತಿಗೆ ಸೇರಿದವನಾದ್ದರಿಂದ, ಆಕೆಯ ಪೋಷಕರು ಈ ಸಂಬಂಧವನ್ನು ವಿರೋಧಿಸಿದರು, ಇದು ಮನೆಯಲ್ಲಿ ಪದೇ ಪದೇ ಜಗಳಗಳಿಗೆ ಕಾರಣವಾಗಿತ್ತು.
ನರ್ಸಿಂಗ್ ಕೌಶಲ ತನಗೆ ಇದ್ದ ಕಾರಣ ಕೊಲೆ ಮಾಡಿದರೂ ನನ್ನ ಮೇಲೆ ಅನುಮಾನ ಬರದಂತೆ ಮಾಡಬಹುದು ಎಂದು ಸುರೇಖಾ ಯೋಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 24 ರ ರಾತ್ರಿ, ಮೈ-ಕೈ ನೋವಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವಳು ತನ್ನ ಹೆತ್ತವರಿಗೆ ನಿದ್ರಾಜನಕ ಇಂಜೆಕ್ಷನ್‌ನ ಹೈ ಡೋಸ್ ನೀಡಿದ್ದಾಳೆ ಎಂದು ಹೇಳಲಾಗಿದೆ.
ಇಂಜೆಕ್ಷನ್ ಚುಚ್ಚಿದ ನಂತರ, ಇಬ್ಬರೂ ಪೋಷಕರು ಪ್ರಜ್ಞೆ ಕಳೆದುಕೊಂಡರು ಎಂದು ವರದಿಯಾಗಿದೆ. ನಂತರ ಸುರೇಖಾ ತನ್ನ ಸಹೋದರನಿಗೆ ಇದರ ಮಾಹಿತಿ ನೀಡಿದರು.ಇಬ್ಬರೂ ಸೇರಿ ತಂದೆ-ತಾಯಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಬರುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಮನೆಯನ್ನು ಪರಿಶೀಲಿಸಿದಾಗ, ಪೊಲೀಸರು ಬಳಸಿದ ಸಿರಿಂಜ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಪತ್ತೆಹಚ್ಚಿದ್ದು, ಅನುಮಾನಕ್ಕೆ ಕಾರಣವಾಗಿದೆ. ಹೆಚ್ಚಿನ ತನಿಖೆಯಲ್ಲಿ ಈ ಸಾವುಗಳಲ್ಲಿ ಸುರೇಖಾ ಅವರ ಪಾತ್ರ ಬೆಳಕಿಗೆ ಬಂದಿದೆ. ಅವರನ್ನು ಬುಧವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ