ದೀಪಾವಳಿಯಂದೇ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 9 ಜನ ಸಾವನ್ನಪ್ಪಿದ್ದಾರೆ
ಹೈದರಾಬಾದ್: ದೀಪಾವಳಿಯಂದೇ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 9 ಜನ ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ನಾಂಪಲ್ಲಿ ಸಮೀಪದ ಬಜಾರ್ ಗಾರ್ಡ್ (ಬಜಾರ್‌ಘಾಟ್) ಪ್ರದೇಶದಲ್ಲಿ ಜನವಸತಿಯಿದ್ದ ಐದಂತಸ್ತಿನ ಕಟ್ಟಡವೊಂದರಲ್ಲಿ ಈ ದುರಂತ ಸಂಭವಿಸಿದೆ.
ಇಂದು ಮುಂಜಾನೆ ಐದಂತಸ್ತಿನ ಕಟ್ಟಡದ 2ನೇ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. 9.35ರ ಸುಮಾರಿಗೆ ಈ ಬಗ್ಗೆ ಅಗ್ನಿ ಶಾಮಕ ಇಲಾಖೆಗೆ ಕರೆ ಬಂದಿದೆ. ಕೂಡಲೇ 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಪ್ರಾಥಮಿಕ ವರದಿಯ ಪ್ರಕಾರ, 2ನೇ ಮಹಡಿಯಲ್ಲಿ ಕೆಲವು ರಾಸಾಯನಿಕ ತುಂಬಿದ್ದ ಡ್ರಮ್‌ಗಳನ್ನು ಸ್ಟೋರ್ ಮಾಡಲಾಗಿತ್ತು. ಇದರಲ್ಲಿಯೇ ಬೆಂಕಿ ಕಾಣಿಸಿಕೊಂಡು ನಂತರ ಸುತ್ತಲೂ ಹರಡಿದೆ ಎಂದು ತಿಳಿದು ಬಂದಿದೆ.
ದೀಪಾವಳಿ ಹಬ್ಬದ ದಿನವೇ ಅಗ್ನಿ ಅವಘಡ; ಫರ್ನಿಚರ್ ಶೋ ರೂಂ ಸಂಪೂರ್ಣ ಸುಟ್ಟು ಭಸ್ಮ!
ಬೆಂಕಿಯಿಂದಾಗಿ ಈ ಕಟ್ಟಡದ 3 ನಾಲ್ಕು ಹಾಗೂ 5ನೇ ಮಹಡಿಯಲ್ಲಿದ್ದ ಜನ ಅಲ್ಲಿ ಸಿಲುಕಿದ್ದರು. 2ನೇ ಮಹಡಿಯ ಬೆಂಕಿಯಿಂದ ಕಾಣಿಸಿಕೊಂಡ ಹೊಗೆ ಮೇಲಿನ ಮಹಡಿಗಳಿಗೆ ಹಬ್ಬಿತ್ತು. ನಾವು ಈಗಾಗಲೇ 10 ಜನರನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈ ಬಜಾರ್ ಗಾರ್ಡ್ ಪ್ರದೇಶವೂ ಹೈದರಾಬಾದ್‌ನ ಕೇಂದ್ರ ಸ್ಥಾನವಾಗಿದ್ದು, ಸಣ್ಣಪುಟ್ಟ ಕೈಗಾರಿಕೆಗಳನ್ನು ಹೊಂದಿದ್ದು, ಅತೀ ಹೆಚ್ಚು ಜನಸಂದಣಿ ಹೊಂದಿರುವ ಪ್ರದೇಶವಾಗಿರುವ ಜೊತೆಗೆ ಹೈದರಾಬಾದ್‌ನ ರೈಲು ನಿಲ್ದಾಣಕ್ಕೂ ಸಮೀಪದಲ್ಲಿದೆ.
ಕಾಶ್ಮೀರದ ದಾಲ್ ಸರೋವರದಲ್ಲಿ ಅಗ್ನಿ ದುರಂತ, ಹೌಸ್ ಬೋಟ್ ಹೊತ್ತಿ ಉರಿದು 3 ಪ್ರವಾಸಿಗರು ಸಾವು!
ಹೆಚ್ಚಿನ ಅನಾಹುತವಾಗದಂತೆ ತಡೆಯಲು ಕೆಮಿಕಲ್ ತುಂಬಿದ್ದ 12 ಬ್ಯಾರಲ್ ಹಾಗೂ 38 ಜಾರ್ ಕ್ಯಾನ್‌ಗಳನ್ನು ಘಟನಾ ಸ್ಥಳದಿಂದ ತೆಗೆಯಲಾಗಿದೆ. ಘಟನೆಯಲ್ಲಿ ಮೃತರಾದವವರನ್ನು 58 ವರ್ಷದ ಎಂಡಿ ಅಜಂ, 50 ವರ್ಷದ ರೆಹಾನಾ ಸುಲ್ತಾನ್, 26 ವರ್ಷದ ಫೈಜಾ ಸಮೀನ್, 35 ವರ್ಷದ ತಹೂರಾ ಫರೀನ್, 6 ವರ್ಷದ ತೋಬಾ, 13 ವರ್ಷದ ತರೂಬಾ, 66 ವರ್ಷದ ಎಂಡಿ ಜಾಕೀರ್ ಹುಸೇನ್, 32 ವರ್ಷದ ಹಸೀಬ್ ಉರ್ ರೆಹಮಾನ್, 55 ವರ್ಷದ ನಿಕತ್ ಸುಲ್ತಾನ್ ಎಂದು ಗುರುತಿಸಲಾಗಿದ್ದು, ಇನ್ನು ಮೂರು ಜನ ಈ ದುರಂತದಲ್ಲಿ ಗಾಯಗೊಂಡಿದ್ದಾರೆ. ಒಟ್ಟು 16 ಜನರನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಭೇಟಿ ನೀಡಿದ್ದಾರೆ. ಹಾಗೆಯೇ ನಗರಾಭಿವೃದ್ಧಿ ಸಚಿವ ಕೆ.ಟಿ ರಾಮ್‌ರಾವ್ ಕೂಡ ಭೇಟಿ ನೀಡಿದ್ದಾರೆ.