ಪಾಟ್ನಾ: ರಸಗುಲ್ಲಾ ಯಾರಿಗೆ ಇಷ್ಟ ಇಲ್ಲ ಹೇಳಿ. ಸಿಹಿ ರಸದಿಂದ ತುಂಬಿದ ಬಲು ರುಚಿಯನ್ನು ಹೊಂದಿರುವ ಸ್ಪಂಜಿನಂತಹ ಈ ಸಿಹಿಯನ್ನು ಇಷ್ಟ ಪಡದವರಿಲ್ಲ. ಆದರೆ ಈ ರಸಗುಲ್ಲಾ ಬಿಹಾರದಲ್ಲಿ ರೈಲ್ವೆ ಇಲಾಖೆಗೆ ಕಹಿಯಾಗಿ ಪರಿಣಮಿಸಿತು. ಬಿಹಾರದ ಲಖಿಸರಾಯ್‌ನಲ್ಲಿರುವ ಬರಾಹಿಯಾ ರೈಲು ನಿಲ್ದಾಣದಲ್ಲಿ 10 ರೈಲುಗಳ ನಿಲುಗಡೆಗೆ ಒತ್ತಾಯಿಸಿ ಹಲವಾರು ಸ್ಥಳೀಯರು ಸುಮಾರು 40 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದಾರೆ. ಹಲವಾರು ಸ್ಥಳೀಯರು ರೈಲ್ವೆ ಹಳಿಗಳ ಮೇಲೆ ಟೆಂಟ್‌ಗಳನ್ನು ಹಾಕಿದರು, ಹೀಗಾಗಿ ರೈಲುಗಳ ಚಲನೆಯನ್ನು 40 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹೌರಾ-ದೆಹಲಿ ರೈಲು ಮಾರ್ಗದಲ್ಲಿ 24 ಗಂಟೆಗಳ ಕಾಲ ಹನ್ನೆರಡು ರೈಲುಗಳನ್ನು ರದ್ದುಗೊಳಿಸಬೇಕಾಯಿತು. ಮತ್ತು 100 ಕ್ಕೂ ಹೆಚ್ಚು ರೈಲುಗಳನ್ನು ಬೇರೆಡೆಗೆ ತಿರುಗಿಸಬೇಕಾಯಿತು ಇದರಿಂದ ಸಾವಿರಾರು ರೈಲು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಲಖಿಸರೈ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate of Lakhisarai) ಸಂಜಯ್ ಕುಮಾರ್ (Sanjay Kumar) ಪ್ರಕಾರ, ಹೆಚ್ಚಿನ ಸಂಖ್ಯೆಯ ಜನರು ನಿಲ್ದಾಣದಲ್ಲಿ ಹಳಿಗಳ ಮೇಲೆ ಕುಳಿತು, ಬರಹಿಯಾದಲ್ಲಿ ನಿಲುಗಡೆ ಇಲ್ಲದ ಹಲವಾರು ಎಕ್ಸ್‌ಪ್ರೆಸ್ ರೈಲುಗಳನ್ನು ನಿಲ್ಲಿಸುವಂತೆ ಪ್ರತಿಭಟನೆ ಮಾಡಿದರು.
ಈ ಪ್ರತಿಭಟನೆಗೂ ರಸಗುಲ್ಲಾ ಏನು ಸಂಬಂಧ
ಜನರ ಪ್ರತಿಭಟನೆಗೂ ರಸಗುಲ್ಲಾಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ಆದರೆ ಬಹುಶಃ ಅನೇಕ ಜನರಿಗೆ ಬಿಹಾರದ ಲಖಿಸಾರೈ ರಸಗುಲ್ಲಾ ದೇಶಾದ್ಯಂತ ಪೇಮಸ್ ಎಂಬುದು. ಇಲ್ಲಿನ ರಸಗುಲ್ಲಾಕ್ಕೆ ಹೆಚ್ಚಿನ ಬೇಡಿಕೆ ಇರುವ ಕಾರಣ, ಅಲ್ಲಿ ತಯಾರಿಸಿದ ಈ ರಸಗುಲ್ಲಾವನ್ನು ದೇಶದ ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಮದುವೆ ಅಥವಾ ಯಾವುದೇ ವಿಶೇಷ ಸಂದರ್ಭದಲ್ಲಿ ತಮ್ಮ ಅತಿಥಿಗಳಿಗೆ ಬಡಿಸಲು ಈ ರಸ ತುಂಬಿದ ರಸಗುಲ್ಲಾಗಳನ್ನು ಖರೀದಿಸಲು ಜನರು ವಿಶೇಷವಾಗಿ ಸಣ್ಣ ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಲಖಿಸಾರೈ ಪಟ್ಟಣದಲ್ಲಿ 200ಕ್ಕೂ ಹೆಚ್ಚು ಅಂಗಡಿಗಳು ಈ ವ್ಯಾಪಾರ ನಡೆಸುತ್ತಿದ್ದು, ಪ್ರತಿನಿತ್ಯ ಟನ್ ಗಟ್ಟಲೆ ರಸಗುಲ್ಲಾ ಇಲ್ಲಿ ತಯಾರಾಗುತ್ತದೆ.
ಜಸ್ಟ್ ಮೂರು ಪದಾರ್ಥ ಇದ್ರೆ ಸಾಕು, ರಸಭರಿತವಾದ ರಸಗುಲ್ಲಾ ಮನೆಯಲ್ಲೇ ಮಾಡ್ಬೋದು
ಆದರೆ ಇಲ್ಲಿ ರೈಲುಗಳು ನಿಲುಗಡೆಯಾಗದಿರುವುದರಿಂದ ಈ ರಸಗುಲ್ಲಾ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ರೈಲು ನಿಲ್ಲದ ಪರಿಣಾಮ ದೇಶದ ವಿವಿಧ ಭಾಗಗಳಿಗೆ ದಾಸ್ತಾನು ಸರಬರಾಜು ಮಾಡಲು ಸಾಧ್ಯವಾಗದೆ ರಸಗುಲ್ಲಾ ತಯಾರಕರು ಸಂಕಷ್ಟಕ್ಕೀಡಾಗಿದ್ದರು. ಕೋವಿಡ್ ಅವಧಿಯಲ್ಲಂತೂ ಬರಾಹಿಯಾದಲ್ಲಿ ರೈಲುಗಳು ನಿಲ್ಲದಿರುವುದು ಸಿಹಿ ತಿನಿಸಿನ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಿತು. ಕೋವಿಡ್ ನಂತರವೂ ರೈಲು ನಿಲ್ದಾಣದಲ್ಲಿ ಯಾವುದೇ ರೈಲುಗಳು ನಿಲ್ಲದ ಕಾರಣ ಸ್ಥಳೀಯರು ಮತ್ತು ಮಿಠಾಯಿ ವ್ಯಾಪಾರಿಗಳು ತೀವ್ರ ಆಕ್ರೋಶಗೊಂಡರು.
ರೆಸಿಪಿ: ಉಳಿದಿರುವ ಅನ್ನದಿಂದಲೂ ಮಾಡಬಹುದು ರಸಗುಲ್ಲಾ!
ಈ ಹಿಂದೆ, ಈ ವ್ಯಾಪಾರವನ್ನು ರೈಲುಗಳ ಮೂಲಕ ನಿರ್ವಹಿಸುವುದು ರಸಗುಲ್ಲಾ ವ್ಯಾಪಾರಿಗಳಿಗೆ ಅಗ್ಗದ ಮತ್ತು ಸುಲಭದ ಕೆಲಸವಾಗಿತ್ತು. ಈ ಬಗ್ಗೆ ಮಾತನಾಡಿದ ರಸಗುಲ್ಲಾ ಉದ್ಯಮಿ ರಂಜನ್ ಶರ್ಮಾ (Ranjan Sharma), ರೈಲಿನಲ್ಲಿ ಬರಾಹಿಯಾದಿಂದ (Barahiya) ಪಾಟ್ನಾಗೆ (Patna) ಪ್ರಯಾಣ ದರ 55 ರೂಪಾಯಿ ಮತ್ತು ಕೇವಲ ಎರಡು ಗಂಟೆ ತೆಗೆದುಕೊಳ್ಳುತ್ತದೆ. ಒಂದು ವೇಳೆ ವ್ಯಾಪಾರಿಗಳು ರಸ್ತೆಯ ಮೂಲಕ ರಸಗುಲ್ಲಾಗಳ ಸ್ಟಾಕ್ ಅನ್ನು ಸಾಗಿಸಿದರೆ ಇದರ ವೆಚ್ಚ ಒಟ್ಟು 150 ರೂ. ತಗಲುವುದು. ಇದಲ್ಲದೆ ಕ್ಯಾಬ್ ಅಥವಾ ಕಾರಿನಲ್ಲಿ ಸಾಗಿಸಿದರೆ ಇದರ ವೆಚ್ಚ ಮತ್ತಷ್ಟು ದುಬಾರಿಯಾಗುವುದು. ಮದುವೆಗಳಿರುವ ಋತುವಿನಲ್ಲಿ ಬೇಡಿಕೆ ಹೆಚ್ಚಾದಂತೆ ಈ ವೆಚ್ಚವು ಇನ್ನೂ ಹೆಚ್ಚು ಹೆಚ್ಚಾಗುತ್ತದೆ.
ಈ ರಸಗುಲ್ಲಾ ವ್ಯಾಪಾರಿಗಳ ಪ್ರತಿಭಟನೆಯ ನಂತರ ಹದಿನೈದು ದಿನಗಳಲ್ಲಿ ಎಕ್ಸ್‌ಪ್ರೆಸ್ ರೈಲನ್ನು ನಿಲುಗಡೆ ಮಾಡುವುದಾಗಿ ರೈಲ್ವೇ (railways) ಲಿಖಿತವಾಗಿ ಭರವಸೆ ನೀಡಿದೆ. ಬಳಿಕ ರಸಗುಲ್ಲಾ (Rasgulla) ವ್ಯಾಪಾರಿಗಳು ಪ್ರತಿಭಟನೆಯನ್ನು ಹಿಂಪಡೆದುಕೊಂಡಿದ್ದಾರೆ. ಮುಂದಿನ 60 ದಿನಗಳಲ್ಲಿ ಇತರ ರೈಲುಗಳು ಇಲ್ಲಿ ನಿಲುಗಡೆ ನೀಡಲಿವೆ.