ಹಾವಾಡಿಗರ ಭದ್ರತೆಯಲ್ಲಿ ಪುರಿ ದೇಗುಲದ ರತ್ನ ಭಂಡಾರ ಓಪನ್; ಒಳಗೆ ಎಷ್ಟಿದೆ ನಿಧಿ? ಏನಿದರ ರಹಸ್ಯ?

By Kannadaprabha NewsFirst Published Jul 15, 2024, 10:05 AM IST
Highlights

ಈ ಒಳಕೋಣೆಯಲ್ಲಿ ಪುರಿ ದೇಗುಲಕ್ಕೆ ಭಕ್ತರು ಮತ್ತು ಹಿಂದಿನ ರಾಜಮನೆತನದವರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಇವುಗಳ ಮೌಲ್ಯ ಸಾವಿರಾರು ಕೋಟಿ ರು. ಇರಬಹುದು ಎಂದು ಊಹಿಸಲಾಗಿದೆ.

ಪುರಿ: ಒಡಿಶಾದ ಪುರಿಯಲ್ಲಿರುವ 12ನೇ ಶತಮಾನದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ಅಪಾರ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಡಲಾಗಿರುವ, ‘ರತ್ನ ಭಂಡಾರ’ ಎಂದು ಕರೆಯಲಾಗುವ ಕೋಣೆಯನ್ನು 46 ವರ್ಷಗಳ ಬಳಿಕ ಭಾನುವಾರ ತೆರೆಯಲಾಯಿತು. ರತ್ನ ಭಂಡಾರದ ದುರಸ್ತಿ ಮತ್ತು ಆಭರಣಗಳ ಮೌಲ್ಯಮಾಪನದ ಉದ್ದೇಶದಿಂದ ಈ ಪ್ರಕ್ರಿಯೆ ಆರಂಭಿಸಲಾಗಿದೆ. ಭಾನುವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಅಧಿಕಾರಿಗಳು ಮತ್ತು ದೇಗುಲದ ಮುಖ್ಯಸ್ಥರ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಸಿ ಬಳಿಕ ಮಧ್ಯಾಹ್ನ 1.28ಕ್ಕೆ ಭೀತರ್ ಭಂಡಾರ (ಒಳ ಕೋಣೆ) ಮತ್ತು ಬಾಹರ್‌ ಭಂಡಾರ್‌ (ಹೊರ ಕೋಣೆ) ಎರಡನ್ನೂ ತೆರೆಯಲಾಯಿತು.

ಹೊರ ಕೋಣೆಯಲ್ಲಿ ಪುರಿ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವರಿಗೆ ವಿಶೇಷ ದಿನಗಳಂದು ಪೂಜೆಗೆ ಬಳಸುವ ಚಿನ್ನಾಭರಣ ಇಡಲಾಗಿದ್ದು, ಅದರ ದ್ವಾರವನ್ನು ಕಾಲಕಾಲಕ್ಕೆ ತೆರೆಯಲಾಗುತ್ತದೆ. ಆದರೆ ಒಳ ಕೋಣೆಯ ದ್ವಾರವನ್ನು 1978ರ ಬಳಿಕ ಇದೇ ಮೊದಲ ಬಾರಿಗೆ ತೆರೆಯಲಾಯಿತು. ಈ ಒಳಕೋಣೆಯಲ್ಲಿ ಪುರಿ ದೇಗುಲಕ್ಕೆ ಭಕ್ತರು ಮತ್ತು ಹಿಂದಿನ ರಾಜಮನೆತನದವರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಇವುಗಳ ಮೌಲ್ಯ ಸಾವಿರಾರು ಕೋಟಿ ರು. ಇರಬಹುದು ಎಂದು ಊಹಿಸಲಾಗಿದೆ. ಈ ಹಿಂದೆ 1978ರಲ್ಲಿ ಭಂಡಾರ ತೆರೆಯಲಾಗಿತ್ತಾದರೂ ಅದರಲ್ಲಿನ ವಸ್ತುಗಳನ್ನು ನಿಖರವಾಗಿ ಲೆಕ್ಕ ಹಾಕಿರಲಿಲ್ಲ.

Latest Videos

ಈ ಎರಡೂ ಕೋಣೆಯಲ್ಲಿ ಸಂಗ್ರಹಿಸಲಾದ ಚಿನ್ನಾಭರಣಗಳನ್ನು ಹೊರತೆಗೆದು ಸಾಗಿಸಲು ವಿಶೇಷ 4.5 ಅಡಿ ಉದ್ದ, 2.5 ಅಡಿ ಎತ್ತರ ಮತ್ತು 2.5 ಅಡಿ ಅಗಲದ ಮರದ ಬಾಕ್ಸ್‌ ಸಿದ್ಧಪಡಿಸಲಾಗಿದ್ದು, ಅದರಲ್ಲಿ ತುಂಬಿ ನಂತರ ವಿಶೇಷ ತಾತ್ಕಾಲಿಕ ಭಧ್ರತಾ ಕೋಣೆಯೊಂದರಲ್ಲಿ ಇಡಲಾಗುವುದು. ನಂತರ ಸರ್ಕಾರದ ಅನುಮೋದನೆ ಬಳಿಕ ಈ ಚಿನ್ನಾಭರಣಗಳ ಮೌಲ್ಯಮಾಪನ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಗುಲದ ರತ್ನ ಭಂಡಾರ ತೆರೆಯುವ ವಿಷಯ ಇತ್ತೀಚೆಗೆ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಹೊರಹೊಮ್ಮಿತ್ತು. ತಾನು ಅಧಿಕಾರಕ್ಕೆ ಬಂದರೆ ಕೋವಿಡ್‌ ವೇಳೆ ಮುಚ್ಚಲಾಗಿದ್ದ ಪುರಿ ದೇಗುಲದ 3 ಬಾಗಿಲು ಭಕ್ತರಿಗೆ ಮುಕ್ತಗೊಳಿಸುವ ಮತ್ತು ರತ್ನ ಭಂಡಾರ ತೆರೆಯುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅದರಂತೆ ಬಿಜೆಪಿ ಸರ್ಕಾರ ರಚನೆಯಾದ ದಿನವೇ ದೇಗುಲದ ಎಲ್ಲಾ 4 ಬಾಗಿಲು ತೆಗೆದು ಭಕ್ತರಿಗೆ ಮುಕ್ತಗೊಳಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಭಾನುವಾರ ರತ್ನ ಭಂಡಾರದ ಬಾಗಿಲು ತೆರೆಯಲಾಗಿದೆ.

ಏನಿದು ರತ್ನಭಂಡಾರ?

ರತ್ನಭಂಡಾರದ ಒಳಕೋಣೆಯಲ್ಲಿ ಪುರಿ ದೇಗುಲಕ್ಕೆ ಭಕ್ತರು ಮತ್ತು ಹಿಂದಿನ ರಾಜಮನೆತನದವರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಇವುಗಳಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳು, ಪಾತ್ರೆಗಳು ಇವೆ ಎನ್ನಲಾಗಿದೆ.

ನಕಲಿ ಕೀ ಬಳಸಿ ರತ್ನ ಭಂಡಾರ ಓಪನ್; ಇತ್ತ ಪುರಿ ಎಸ್‌ಪಿ ಆರೋಗ್ಯದಲ್ಲಿ ಏರುಪೇರು

ಒಳಗೆ ಎಷ್ಟು ನಿಧಿ ಇರಬಹುದು?

2018 ರಲ್ಲಿ ಅಂದಿನ ಕಾನೂನು ಸಚಿವ ಪ್ರತಾಪ್ ಜೇನಾ ಒಡಿಶಾ ವಿಧಾನಸಭೆಗೆ ಹೇಳಿಕೆ ನೀಡಿ, ‘ರತ್ನ ಭಂಡಾರವನ್ನು ಕೊನೆಯ ಬಾರಿಗೆ ಅಂದರೆ 1978ರಲ್ಲಿ ತೆರೆದಾಗ ಸುಮಾರು 12,500 ಭರಿ (ಒಂದು ಭರಿ ಎಂದರೆ 11.66 ಗ್ರಾಂಗೆ ಸಮಾನ) ಚಿನ್ನಾಭರಣಗಳಿದ್ದವು ಎಂದು ಹೇಳಿದ್ದರು. ಅಲ್ಲದೇ 22 ಸಾವಿರ ಭರಿಗೂ ಅಧಿಕ ತೂಕದ ಬೆಳ್ಳಿಯ ಪಾತ್ರೆಗಳು ಇದ್ದವು ಎಂದಿದ್ದರು.

ಹಾವು ಇವೆ ಎಂಬ ಭೀತಿ

ಈ ನಡುವೆ ರತ್ನ ಭಂಡಾರ ಕಾಯಲು ಹಾವುಗಳು ಇದೆ ಎಂಬ ನಂಬಿಕೆ ಇದೆ. ಹೀಗಾಗಿ ಭಾನುವಾರದ ಪ್ರಕ್ರಿಯೆ ವೇಳೆ 2 ಹಾವು ಹಿಡಿಯುವ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

46 ವರ್ಷಗಳ ರತ್ನ ಭಂಡಾರದ ಬೀಗದ ಕೈ ರಹಸ್ಯ ಏನು ? ಕೀ ನಾಪತ್ತೆಗೂ ತಮಿಳುನಾಡಿಗೂ ಲಿಂಕ್ ಮಾಡಿದ್ದೇಕೆ ಪಿಎಂ ?

ಎಷ್ಟಿರಬಹುದು ಚಿನ್ನ?

1978ರಲ್ಲಿ ಗವರ್ನರ್ ನೇತೃತ್ವದ ಸಮಿತಿ ರಹಸ್ಯ ಕೋಣೆ ಪ್ರವೇಶಿಸಿತ್ತು. ಒಳಕೋಣೆಯಲ್ಲಿ 44 ಕೆಜಿ ಚಿನ್ನ, 149 ಕೆಜಿ ಬೆಳ್ಳಿ ಇದೆ ಎಂದು ಹೇಳಿತ್ತು. ಒಟ್ಟಾರೆ 46 ಕೆಜಿ ಚಿನ್ನ ಇದೆ ಎಂದು ಸರ್ಕಾರ 2018ರಲ್ಲಿ ಹೇಳಿತ್ತು. ಹೀಗಾಗಿ ಎಷ್ಟು ಚಿನ್ನವಿದೆ ಎಂಬ ಕುತೂಹಲ ಮನೆ ಮಾಡಿದೆ.

click me!