ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿ ಗೌರವಿಸಿ ಅಂಚೆ ಚೀಟಿ ಬಿಡುಗಡೆ!

By Suvarna NewsFirst Published May 26, 2020, 9:31 AM IST
Highlights

ಲಾಕ್‌ಡೌನ್‌ ಸಂಕಷ್ಟದ ನಡುವೆ ಅಪ್ಪನನ್ನು ಕೂರಿಸಿ 1200 ಕಿ. ಮೀ ಸೈಕಲ್ ತುಳಿದ ಜ್ಯೋತಿಗೆ ಅಂಚೆ ವಿಭಾಗದ ಗೌರವ| ಉಚಿತ ಶಿಕ್ಷಣ ನೀಡಲು ಮುಂದೆ ಬಂದಿವೆ ಹಲವಾರು ಸಂಸ್ಥೆಗಳು| ಜ್ಯೋತಿ ಸಾಹಸ ಹಾಡಿ ಹೊಗಳಿದ ಇವಾಂಕಾ ಟ್ರಂಪ್

ಪಾಟ್ನಾ(ಮೇ.26): ಬಿಹಾರದ ದರ್‌ಭಂಗಾ ನಿವಾಸಿ 15 ವರ್ಷದ ಜ್ಯೋತಿ ಕುಮಾರಿ ಸಾಹಸ ಹಾಗೂ ಧೈರ್ಯವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಜ್ಯೋತಿಗೆ ಜನರು ವಿಭಿನ್ನ ರೀತಿಯಲ್ಲಿ ಗೌರವಿಸುತ್ತಿದ್ದಾರೆ. ಸದ್ಯ ದರ್‌ಭಂಗಾ ಅಂಚೆ ವಿಭಾಗ ಜ್ಯೋತಿ ಗೌರವಿಸಿ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಜ್ಯೋತಿ ಕುಮಾರಿ ಕೆಲ ದಿನಗಳ ಹಿಂದಷ್ಟೇ  ತನ್ನ ಕಾಲು ನೋವಿನಿಂದ ಬಳಲುತ್ತಿದ್ದ ತನ್ನ ಅಪ್ಪನನ್ನು ಕೂರಿಸಿ ಸೈಕಲ್ ತುಳಿಯುತ್ತಾ ದೆಹಲಿಯ ಗುರುಗ್ರಾಮದಿಂದ ಬರೋಬ್ಬರಿ 1200 ಕಿ. ಮೀಟರ್ ದೂರದಲ್ಲಿರುವ ದರ್‌ಭಂಗಾಗೆ ಕರೆ ತಂದಿದ್ದಳು. ಇದಾದ ಬಳಿಕ ದೇಶವ್ಯಾಪಿ ಜನರೆಲ್ಲಾ ಜ್ಯೋತಿ ಸಹಾಯಕ್ಕೆ ಮುಂದಾಗಿದ್ದರು. 

1200 ಕಿ.ಮಿ ಸೈಕಲ್‌ ತುಳಿದ ಬಾಲಕಿ ಹೊಗಳಿದ ಇವಾಂಕ!

ಪೋಸ್ಟ್‌ ಆಫೀಸ್‌ನಲ್ಲಿ ಜ್ಯೋತಿ ಹೆಸರಲ್ಲಿ ಖಾತೆ

ಹೀಗಿರುವಾಗಲೇ ದರ್‌ಭಂಗಾ ಅಂಚೆ ವಿಭಾಗದ ಅಧೀಕ್ಷಕ ಉಮೇಶ್ ಚಂದ್ರ ಪ್ರಸಾದ್ ಖುದ್ದು ಜ್ಯೋಯತಿ ಇರುವ ಹಳ್ಳಿಗೆ ತೆರಳಿ ಆಕೆಗೆ My Stamp ಅಂಚೆ ಚೀಟಿ ನೀಡಿ ಗೌರವಿಸಿದ್ದಾರೆ. ಜೊತೆಗೆ 5100 ರೂ. ಚೆಕ್ ಹಾಗೂ ಶಾಲು ಹಾಕಿ ಸನ್ಮಾನ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಉಮೇಶ್ ಚಂದ್ರ ಪ್ರಸಾದ್ ಜ್ಯೋತಿ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಖಾತೆಯೊಂದನ್ನೂ ತೆರೆಯಲಾಗಿದೆ ಎಂದಿದ್ದಾರೆ. ಇನ್ನು ಜ್ಯೋತಿ ಸನ್ಮಾನಿಸುವ ವೇಳೆ ಅಲ್ಲಿ ಅಂಚೆ ವಿಭಾಗದ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

ಜ್ಯೋತಿಯನ್ನು ಒಂಭತ್ತನೇ ತರಗತಿಗೆ ದಾಖಲಿಸಿದ ಜಿಲ್ಲಾಧಿಕಾರಿ ಸೈಕಲ್ ಗಿಫ್ಟ್

ಇನ್ನು ಇದಕ್ಕೂ ಮುನ್ನ ಗುರುಗ್ರಾಮದಿಂದ ದರ್‌ಭಂಗಾಗೆ ತಲುಪಿದ ಜ್ಯೋತಿಯನ್ನು ಇಲ್ಲಿನ ಜಿಲ್ಲಾಧಿಕಾರಿ ಭೇಟಿಯಾಗಿ ಆಕೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಈ ವೆಳೆ ಆಕೆಗೆ ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿ, ಒಂಭತ್ತನೇ ತರಗತಿಗೆ ದಾಖಲಾತಿ ಕೂಡಾ ಮಾಡಿಸಿದ್ದಾರೆ. ಇದೇ ವೇಳೆ ದರ್‌ಭಂಗಾದ ಅತ್ಯಂತ ಪ್ರಸಿದ್ಧ ಸಿಬಿಎಸ್‌ಇ ಡಾನ್‌ ಬೊಸ್ಕೋ ಶಾಲೆ ಜ್ಯೋತಿಗೆ ಒಂಭತ್ತನೆ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ಪುಸ್ತಕ ಹಾಗೂ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದೆ.

ಅಪ್ಪನನ್ನು 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!

ಜ್ಯೋತಿ ಶಿಕ್ಷಣದ ಖರ್ಚು ನೋಡಿಕೊಳ್ಳುವುದಾಗಿ LJP ಘೋಷಣೆ

ಇವೆಲ್ಲದರ ನಡುವೆ ಜನಶಕ್ತಿ ಪಾರ್ಟಿ ಜ್ಯೋತಿ ಕುಮಾರಿ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನೋಡಿಕೊಳ್ಳುವುದಾಗಿ ಘೋಷಿಸಿದೆ. ಈಗಾಗಲೇ ಜ್ಯೋತಿ ಹೆತ್ತವರೊಂದಿಗೆ ಮಾತನಾಡಿ ಜ್ಯೋತಿ ತನಗಿಷ್ಟವಿರುವ ವಿಷಯವನ್ನು ಆಯ್ಕೆ ಮಾಡಿ ಶಿಕ್ಷಣ ಪೂರೈಸಲಿ, ಆಕೆ ಶಿಕ್ಷಣದ ಸಂಪೂರ್ಣ ವೆಚ್ಚ ಭರಿಸುವುದಾಗಿ ಪಕ್ಷದ ಅಧ್ಯಕ್ಷರು ತಿಳಿಸಿದ್ದಾರೆ.

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್ 

ಅಲ್ಲದೇ ಜ್ಯೋತಿ ಸಾಹಸ ಗಮನಿಸಿದ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಟ್ರಯಲ್ಸ್ ಗೆ ಬರುವಂತೆ ಸೂಚನೆ ನೀಡಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಜ್ಯೋತಿ ''ಇದು ನಿಜಕ್ಕೂ ಖುಷಿ ಕೊಟ್ಟಿದೆ, ಮುಂದಿನ ತಿಂಗಳು ದೆಹಲಿಯಲ್ಲಿ ಟ್ರಯಲ್ಸ್ ಗೆ ಭಾಗಿಯಾಗಲಿದ್ದೇನೆ'' ಎಂದು ಪಿಟಿಐಗೆ ತಿಳಿಸಿದ್ದಾರೆ.

ಜ್ಯೋತಿ ಸಾಧನೆಗೆ ಭೇಷ್ ಎಂದ ಭಾರತ!

ಒಂದು ವೇಳೆ ಜ್ಯೋತಿ ಸೈಕ್ಲಿಂಗ್ ಟ್ರಯಲ್ಸ್ ಪಾಸ್ ಮಾಡಿದರೆ, ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿರುವ 'ಸ್ಟೇಟ್ ಆಫ್‌ ದ ಆರ್ಟ್ ನ್ಯಾಷನಲ್' ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾಳೆ ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದಾರೆ.

click me!