ತುಕ್ಡೇ ತುಕ್ಡೇ ಗ್ಯಾಂಗ್‌ ಸದಸ್ಯ ಯಾರು?

By Suvarna NewsFirst Published Jan 16, 2020, 10:27 AM IST
Highlights

ತುಕ್ಡೇ ತುಕ್ಡೇ ಗ್ಯಾಂಗ್‌ ಸದಸ್ಯರಾರು?| ಆರ್‌ಟಿಐನ ಈ ಅರ್ಜಿ ಕಂಡು ಅಧಿಕಾರಿಗಳು ತಬ್ಬಿಬ್ಬು| ಗುಪ್ತಚರ, ಕಾನೂನು ಸಂಸ್ಥೆಗಳು ಇಂಥ ಪದವೇ ಬಳಸಿಲ್ಲ| ಹೆಸರು ಬಹಿರಂಗಕ್ಕೆ ಇಚ್ಚಿಸದ ಅಧಿಕಾರಿಗಳಿಂದ ಮಾಹಿತಿ

ನವದೆಹಲಿ[ಜ.16]: ‘ತುಕ್ಡೇ ತುಕ್ಡೇ ಗ್ಯಾಂಗ್‌ನ ಮೂಲ ಸ್ಥಾನ ಯಾವುದು? ಇದರ ಸದಸ್ಯರು ಯಾರು? ಅಕ್ರಮ ಚಟುವಟಿಕೆ ತಡೆ ಕಾಯ್ದೆಯಡಿ ಏಕೆ ಇದನ್ನು ನಿಷೇಧಿಸಿಲ್ಲ? ಎಂಬ ಪ್ರಶ್ನೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಪ್ರಶ್ನೆಗಳು ಕೇಂದ್ರದ ಗೃಹ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿವೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಗಳು, ‘ಗುಪ್ತಚರ ಇಲಾಖೆ ಅಥವಾ ಇನ್ಯಾವುದೇ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳು ತಮ್ಮ ವರದಿಯಲ್ಲಿ ತುಕ್ಡೇ ತುಕ್ಡೇ ಗ್ಯಾಂಗ್‌ ಪದವನ್ನೇ ಬಳಸಿಲ್ಲ’ ಎಂದು ಹೇಳಿದ್ದಾರೆ. 2016ರಲ್ಲಿ ಜೆಎನ್‌ಯು ಪ್ರತಿಭಟನೆ ವೇಳೆ ಕೆಲ ವಿದ್ಯಾರ್ಥಿಗಳು ದೇಶದ್ರೋಹದ ಘೋಷಣೆಗಳನ್ನು ಕೂಗಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದರು. ಆದರೆ, ತಮ್ಮ ವರದಿಯಲ್ಲಿ ದಿಲ್ಲಿ ಪೊಲೀಸರು, ಎಲ್ಲಿಯೂ ತುಕ್ಡೇ ತುಕ್ಡೇ ಗ್ಯಾಂಗ್‌ ಪದ ಬಳಸಿಯೇ ಇಲ್ಲ. ಅಲ್ಲದೆ, ಸರ್ಕಾರ ಅಥವಾ ಇತರೆ ಭದ್ರತಾ ಸಂಸ್ಥೆಗಳು ಸಹ ಈ ಪದವನ್ನು ತಮ್ಮ ವರದಿಗಳಲ್ಲಿ ಉಲ್ಲೇಖಿಸಿಯೇ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಶಿಕ್ಷಿಸುವ ಸಮಯ ಬಂದಿದೆ: ತುಕ್ಡೇ ತುಕ್ಡೇ ಗ್ಯಾಂಗ್‌ಗೆ ಅಮಿತ್ ಶಾ ಎಚ್ಚರಿಕೆ

ಆದಾಗ್ಯೂ, ಕೇಂದ್ರ ಸರ್ಕಾರದ ವಿರುದ್ಧ ಧ್ವನಿಯೆತ್ತುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಇನ್ನಿತರ ಪ್ರತಿಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಹಲವು ಸಾರ್ವಜನಿಕ ಭಾಷಣಗಳಲ್ಲಿ ತುಕ್ಡೇ ತುಕ್ಡೇ ಗ್ಯಾಂಗ್‌ ಎಂದು ದೂಷಿಸಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ಜೆಎನ್‌ಯುನಲ್ಲಿ ತಾವು ಅಧ್ಯಯನ ಮಾಡುವ ವೇಳೆ ತುಕ್ಡೇ ತುಕ್ಡೇ ಗ್ಯಾಂಗ್‌ ಇರಲಿಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದರು.

ಜನವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!