
ನವದೆಹಲಿ(ಮೇ.22): ಯುನೆಸ್ಕೋ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಶಿಲಾಬಂಡೆಗಳು ಸೇರಿ 6 ಸ್ಥಳಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಈ ಘೋಷಣೆ ಮಾಡಿದೆ.
ಹಿರೇಬಣಕಲ್ ಅಲ್ಲದೆ, ಮಧ್ಯಪ್ರದೇಶದ ಸಾತ್ಪುರ ಹುಲಿ ಅಭಯಾರಣ್ಯ, ವಾರಾಣಸಿಯ ಗಂಗಾ ನದಿ ಘಾಟ್‌ಗಳು, ಮಹಾರಾಷ್ಟ್ರದ ಮರಾಠಾ ಸೇನಾ ವಾಸ್ತುಶಿಲ್ಪ, ಜಬಲ್ಪುರ ನರ್ಮದಾ ಕಣಿವೆಯ ಭೇಡಾಘಾಟ್-ಲಮೇಘಾಟ್ ಹಾಗೂ ತಮಿಳುನಾಡಿನ ಕಾಂಚಿಪುರಂ ದೇಗುಲಗಳು, ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪ್ರಸ್ತಾವಕ್ಕೆ ಕಳಿಲ್ಪಟ್ಟಿವೆ.
ಯುನೆಸ್ಕೋ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ, ವಿನಾಶದ ಅಂಚಿನಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು
ಇದರೊಂದಿಗೆ ಭಾರತದ ಕಡೆಯಿಂದ ಈ 6 ಸ್ಥಳಗಳನ್ನು ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಿದ್ಧ ಮಾಡಿಕೊಂಡಂತಾಗಿದೆ. ಈ ಹೊಸ 6 ಪ್ರಸ್ತಾವಗಳು ಸೇರಿ ಭಾರತದ ಕಡೆಯಿಂದ ಸಲ್ಲಿಕೆ ಆಗಲಿರುವ ಪ್ರಸ್ತಾವನೆಗಳ ಪಟ್ಟಿ48ಕ್ಕೆ ಏರಿಕೆ ಆಗಿದೆ. ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಈ ಸ್ಥಳಗಳು ಸೇರ್ಪಡೆ ಆಗಬೇಕೆಂದರೆ ಮೊದಲು ಅವನ್ನು ತಾತ್ಕಾಲಿಕ ಪಟ್ಟಿಗೆ ಸಂಬಂಧಿಸಿದ ದೇಶಗಳು ಸೇರಿಸಬೇಕು ಎಂಬುದು ನಿಯಮ. ಈ ಪ್ರಸ್ತಾವನೆಗೆ ಸಂಬಂಧಿಸಿದ ಪೂರಕ ಸಾಕ್ಷ್ಯಗಳನ್ನು ಭಾರತ ಯುನೆಸ್ಕೋಗೆ ಸಲ್ಲಿಸಬೇಕು. ಆ ಬಳಿಕ ಇವನ್ನು ಪಾರಂಪರಿಕ ತಾಣಕ್ಕೆ ಸೇರಿಸುವ ಬಗ್ಗೆ ಯುನೆಸ್ಕೋ ನಿರ್ಧರಿಸಲಿದೆ.
ಹಿರೇಬಣಕಲ್ ಬಂಡೆಗಳು:
ಹಿರೇಬಣಕಲ್ ಶಿಲಾಬಂಡೆಗಳು 2800 ವರ್ಷದಷ್ಟು ಹಳೆಯವಾಗಿವೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಈ ಊರು ಇದೆ. ಶಿಲಾಯುಗದ ಅಂತಿಮ ಚರಣ ಎಂದು ಹೇಳಲಾಗುವ ನವ ಶಿಲಾಯುಗದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಗೆ ಬಳಸಲಾಗಿರುವ ಜಾಗದ ಗುರುತುಗಳಿವೆ. ಇಲ್ಲಿರುವ ಗ್ರಾನೈಟ್ ಪುರಾತನ ಕಟ್ಟಡಗಳನ್ನು ಅನೇಕ ಸಂಸ್ಕಾರಗಳನ್ನು ನಡೆಸಲು ಬಳಲಸಲಾಗುತ್ತಿತ್ತು ಎನ್ನಲಾಗಿದ್ದು, ಪುರಾತನ ಕಾಲದ ಮಹತ್ವವನ್ನು ಸಾರಿ ಹೇಳುತ್ತವೆ.
ಈಗಾಗಲೇ ಕೊಪ್ಪಳ ಜಿಲ್ಲೆಯ ಪಕ್ಕದಲ್ಲೇ ಇರುವ ವಿಜಯನಗರ ಜಿಲ್ಲೆಯ ಹಂಪಿ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ