Pakistan: ಹಿಂದೂ ದೇವಾಲಯದಲ್ಲಿ ವಿಧ್ವಂಸಕ ಕೃತ್ಯ, ಸುತ್ತಿಗೆಯಿಂದ ಪ್ರತಿಮೆಗೆ ಒಡೆದು ಹಾನಿ!

By Suvarna NewsFirst Published Dec 21, 2021, 5:03 PM IST
Highlights

* ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ

* ಕರಾಚಿಯಲ್ಲಿ ನಡೆದ ಘಟನೆ ಖಂಡಿಸಿದ ಬಿಜೆಪಿ

* ಕರಾಚಿಯಲ್ಲಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹಕ್ಕೆ ಹಾನಿ 

ಇಸ್ಲಮಾಬಾದ್(ಡಿ.21): ಪಾಕಿಸ್ತಾನದಲ್ಲಿ ಮತ್ತೊಮ್ಮೆ ಹಿಂದೂ ದೇವಾಲಯದ ಧ್ವಂಸ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಸೋಮವಾರ, ಕರಾಚಿಯಲ್ಲಿ ವ್ಯಕ್ತಿಯೊಬ್ಬ ದೇವಸ್ಥಾನಕ್ಕೆ ನುಗ್ಗಿ ವಿಗ್ರಹಕ್ಕೆ ಹಾನಿ ಮಾಡಿದ್ದಾನೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಘಟನೆಯನ್ನು ಖಂಡಿಸಿದ್ದಾರೆ. ಈ ಹಿಂದೆ ಅಕ್ಟೋಬರ್‌ನಲ್ಲಿಯೂ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು. ಆ ಸಮಯದಲ್ಲಿ, ಅಪರಿಚಿತ ಕಳ್ಳರು ಸಿಂಧ್ ಪ್ರಾಂತ್ಯದ ದೇವಾಲಯವನ್ನು ಅಪವಿತ್ರಗೊಳಿಸಿದ್ದರು.

ಮಾಧ್ಯಮ ವರದಿಗಳ ಪ್ರಕಾರ, ವ್ಯಕ್ತಿಯೊಬ್ಬ ಸಂಜೆ ಕರಾಚಿಯ ರಾಂಚೋಡ್ ಲೈನ್ ಪ್ರದೇಶಕ್ಕೆ ನುಗ್ಗಿ ದರೋಡೆ ನಡೆಸಿದ್ದಾನೆ. ಈ ವೇಳೆ ಸುತ್ತಿಗೆಯಿಂದ ಜೋಗ ಮಾಯ ವಿಗ್ರಹಕ್ಕೆ ಹಾನಿ ಮಾಡಿದ್ದಾರೆ. ಆದರೆ, ಸಾರ್ವಜನಿಕರು ಆರೋಪಿಯನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಆರೋಪಿಗಳ ವಿರುದ್ಧ ಧರ್ಮನಿಂದನೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಧ್ಯಮ ವರದಿಗಳಲ್ಲಿ ತಿಳಿಸಲಾಗಿದೆ.

ಬಿಜೆಪಿ ನಾಯಕ ಸಿರ್ಸಾ ಈ ಘಟನೆಗೆ ಸರ್ಕಾರವೇ ಕಾರಣ ಎಣದು ದೂಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಾಯಕ ಸಿರ್ಸಾ, 'ಪಾಕಿಸ್ತಾನದ ಕರಾಚಿಯಲ್ಲಿ ಮತ್ತೊಂದು ಹಿಂದೂ ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ. ದಾಳಿಕೋರರು ಈ ವಿಧ್ವಂಸಕ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ಅವರು ತಮ್ಮ ಮತ್ತೊಂದು ಟ್ವೀಟ್‌ ನಲ್ಲಿ ಇದು ಪಾಕಿಸ್ತಾನದ ಅಲ್ಪಸಂಖ್ಯಾತರ ವಿರುದ್ಧ ಸರ್ಕಾರದ ಬೆಂಬಲಿತ ಭಯೋತ್ಪಾದನೆಯಾಗಿದೆ ಯೆಂದೂ ಆರೋಪಿಸಿದ್ದಾರೆ.

ಅಕ್ಟೋಬರ್‌ನಲ್ಲಿ ನಡೆದ ಘಟನೆಯಲ್ಲಿ ಅಪರಿಚಿತ ಕಳ್ಳರು ಸಿಂಧ್ ಪ್ರಾಂತ್ಯದ ಹನುಮಾನ್ ದೇವಿ ಮಾತಾ ದೇವಸ್ಥಾನವನ್ನು ಅಪವಿತ್ರಗೊಳಿಸಿದ್ದರು. ಸಾವಿರಾರು ರೂಪಾಯಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದರೆಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಏಜೆನ್ಸಿ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಪೂಜಾ ಸ್ಥಳಗಳ ಮೇಲಿನ ದಾಳಿಗಳು ಹೆಚ್ಚಿವೆ. ತನ್ನ ದೇಶದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರಕ್ಷಿಸದ ಪಾಕಿಸ್ತಾನವು ಅಂತರರಾಷ್ಟ್ರೀಯ ಸಮುದಾಯದಿಂದ ವಾಗ್ದಂಡನೆಯನ್ನು ಎದುರಿಸುತ್ತಿದೆ.

click me!