ಹಿಂದಿ ಅಧಿಕೃತ ಭಾಷೆಯಾಗಿದ್ದು, ಇದು ದೇಶವನ್ನು ಒಗ್ಗೂಡಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮೋದಿಯವರ ಸರ್ಕಾರ ಹಿಂದಿ ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳ ಸಮಾನಾಂತರ ಅಭಿವೃದ್ಧಿಗೆ ಬದ್ಧವಾಗಿದೆ ಎಂದೂ ಹೇಳಿದ್ದಾರೆ.
ಹಿಂದಿ ದಿವಸ ಆಚರಣೆಗೆ ಕರ್ನಾಟಕ ಸೇರಿ ಕೆಲವು ಕಡೆ ಪ್ರತಿಭಟನೆ ನಡೆಸಲಾಗುತ್ತಿದ್ದು, ವಿರೋಧವೂ ವ್ಯಕ್ತವಾಗುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳು ಆಕ್ರೋಶ ವ್ಯಕ್ತಪಡಿಸುತ್ತಿದೆ. ದೇಶವು ಬುಧವಾರ ಹಿಂದಿ ದಿವಸ ಆಚರಣೆ ಮಾಡುತ್ತಿದೆ. ಈ ಹಿನ್ನೆಲೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಹಿಂದಿ ಎಲ್ಲಾ ಭಾರತೀಯ ಭಾಷೆಗಳ ಸ್ನೇಹಿತ ಮತ್ತು ಇದು ಅಧಿಕೃತ ಭಾಷೆಯಾಗಿ "ಇಡೀ ರಾಷ್ಟ್ರವನ್ನು ಏಕತೆಯ ಎಳೆಯಲ್ಲಿ ಒಂದುಗೂಡಿಸುತ್ತದೆ" ಎಂದು ಹೇಳಿದ್ದಾರೆ. ಇನ್ನು, ಹಿಂದಿ ದಿವಸ ಆಚರಣೆ ಬಗ್ಗೆ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹಿಂದಿ ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳ "ಸಮಾನಾಂತರ ಅಭಿವೃದ್ಧಿ" ಗಾಗಿ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
"ಅಧಿಕೃತ ಭಾಷೆ ಹಿಂದಿ ದೇಶವನ್ನು ಏಕತೆಯ ಎಳೆಯಲ್ಲಿ ಒಗ್ಗೂಡಿಸುತ್ತದೆ. ಹಿಂದಿ ಎಲ್ಲಾ ಭಾರತೀಯ ಭಾಷೆಗಳ ಸ್ನೇಹಿತ. ಮೋದಿಯವರ ಸರ್ಕಾರ ಹಿಂದಿ ಸೇರಿದಂತೆ ಎಲ್ಲಾ ಸ್ಥಳೀಯ ಭಾಷೆಗಳ ಸಮಾನಾಂತರ ಅಭಿವೃದ್ಧಿಗೆ ಬದ್ಧವಾಗಿದೆ. ಹಿಂದಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳಿಗೆ ನಾನು ನಮಸ್ಕರಿಸುತ್ತೇನೆ. ಎಲ್ಲರಿಗೂ 'ಹಿಂದಿ ದಿವಸದ' ಶುಭಾಶಯಗಳು" ಎಂದು ಅಮಿತ್ ಶಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸೂರತ್‌ನಲ್ಲಿ ಹಿಂದಿ ದಿವಸದ ಸಂದರ್ಭದಲ್ಲಿ ಆಯೋಜಿಸಲಾದ 2ನೇ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನದಲ್ಲಿ ಭಾಗವಹಿಸುವ ಮುನ್ನ ಅಮಿತ್ ಶಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಕನ್ನಡ, ಕನ್ನಡಿಗರ ಧ್ವನಿಯಾದ ಕುಮಾರಣ್ಣ, ಹಿಂದಿ ದಿವಸ ಆಚರಣೆ ವಿರೋಧಿಸಿ ಸಿಎಂಗೆ ಪತ್ರ
ಪ್ರತಿ ವರ್ಷ ಹಿಂದಿ ದಿವಸ ಅನ್ನು ಸೆಪ್ಟೆಂಬರ್ 14 ರಂದು ಆಚರಿಸಲಾಗುತ್ತದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸೆಪ್ಟೆಂಬರ್ 14 ಅನ್ನು ಹಿಂದಿ ದಿವಸ ಎಂದು ಅಧಿಕೃತವಾಗಿ ಘೋಷಿಸಿದ್ದರು. ಭಾರತದ ಸಂವಿಧಾನ ಸಭೆಯು ದೇವನಾಗರಿ ಲಿಪಿಯಲ್ಲಿ ಬರೆಯಲ್ಪಟ್ಟ ಹಿಂದಿಯನ್ನು ಸೆಪ್ಟೆಂಬರ್ 14, 1949 ರಂದು ಭಾರತದ ಒಕ್ಕೂಟದ ಅಧಿಕೃತ ಭಾಷೆ ಎಂದು ಘೋಷಿಸಿತು. ಇಂಗ್ಲಿಷ್ ಎರಡನೇ ಅಧಿಕೃತ ಭಾಷೆಯಾಗಿದೆ. ಹಿಂದಿಯನ್ನು ಭಾರತದ ಅಧಿಕೃತ ಭಾಷೆಯಾಗಿ ಬಳಸುವ ನಿರ್ಧಾರವನ್ನು ಜನವರಿ 26, 1950 ರಂದು ಭಾರತದ ಸಂವಿಧಾನವು ಕಾನೂನುಬದ್ಧಗೊಳಿಸಿತು.
ಬಹುಭಾಷಾ ರಾಷ್ಟ್ರದಲ್ಲಿ ಸರ್ಕಾರಿ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ಸಲುವಾಗಿ ಹಿಂದಿಯನ್ನು ಅಧಿಕೃತ ಭಾಷೆಗಳಲ್ಲಿ ಒಂದನ್ನಾಗಿ ಮಾಡಲಾಯಿತು. ದೇಶಾದ್ಯಂತ 258 ಮಿಲಿಯನ್ ಜನರು ಸ್ಥಳೀಯ ಭಾಷೆಯಾಗಿ ಹಿಂದಿಯನ್ನು ಮಾತನಾಡುತ್ತಾರೆ. ಹಿಂದಿ ವಿಶ್ವದ ನಾಲ್ಕನೇ ಹೆಚ್ಚು ಮಾತನಾಡುವ ಭಾಷೆಯಾಗಿಯೂ ಗುರುತಿಸಲ್ಪಟ್ಟಿದೆ.
ಧಾರವಾಡ: ಕೇಂದ್ರ ಸಚಿವ ಜೋಶಿ ಭಾವಚಿತ್ರಕ್ಕೆ ಮಸಿ
ಹಿಂದಿ ದಿವಸಕ್ಕೆ ವಿರೋಧಿಸಿ ಸಿಎಂಗೆ ಪತ್ರ ಬರೆದ ಕುಮಾರಸ್ವಾಮಿ
ಇದೇ ಸೆಪ್ಟಂಬರ್ 14ರಂದು ಆಚರಿಸಲಾಗುವ ಹಿಂದಿ ದಿವಸವನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ. ಭಾರತವು ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ, 560ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಒಂದು ಮಹಾನ್ ಒಕ್ಕೂಟವಾಗಿದೆ. ಇಂತಹ ನಾಡಿನಲ್ಲಿ ಕೇವಲ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಅನ್ಯಾಯವಾಗಿದೆ ಎಂದಿದ್ದಾರೆ.
ಸೆಪ್ಟೆಂಬರ್ 14ರಂದು ಭಾರತ ಒಕ್ಕೂಟ ಸರ್ಕಾರದ ಪ್ರಯೋಜಿತ ಕಾರ್ಯಕ್ರಮವಾದ ‘ಹಿಂದಿ ದಿವಸ’ವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ, ನಮ್ಮ ರಾಜ್ಯದ ಜನತೆಯ ತೆರಿಗೆ ಹಣದಲ್ಲಿ ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಿಂದಿ ದಿವಸ ಆಚರಣೆ ಮಾಡಬಾರದು ಎಂದು ಕುಮಾರಸ್ವಾಮಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.