
ಅಹ್ಮದಾಬಾದ್: ಗುಜರಾತಿನ ಅಹ್ಮದಾಬಾದಿನಲ್ಲಿ 200 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಭಾರತ ಕರಾವಳಿ ಭದ್ರತಾ ದಳ ವಶಕ್ಕೆ ಪಡೆದಿದೆ. ಜತೆಗೆ ಪಾಕಿಸ್ತಾನದ 6 ಮಂದಿ ಡ್ರಗ್ಸ್ ಕಳ್ಳಸಾಗಾಣಿಕೆದಾರರನ್ನು ಬಂಧಿಸಲಾಗಿದೆ ಎಂದು ಭಯೋತ್ಪಾದನೆ ನಿಗ್ರಹ ದಳ ಮಾಹಿತಿ ನೀಡಿದೆ. ಪಾಕಿಸ್ತಾನಿ ಮೀನುಗಾರಿಗೆ ಬೋಟ್‌ಗಳಲ್ಲಿ 40 ಕೆಜಿ ಹೆರಾಯಿನ್ ಭಾರತಕ್ಕೆ ಸಾಗಿಸಲಾಗುತ್ತಿರುವ ವೇಳೆ ಅರಬ್ಬಿ ಸಮುದ್ರದ ಗುಜರಾತ್ ತಟದಲ್ಲಿ ಬಂಧಿಸಲಾಗಿದೆ. ಬೋಟಿನಲ್ಲಿದ್ದ ಆರು ಪಾಕಿಸ್ತಾನೀಯರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಪಾಕಿಸ್ತಾನಿ ಬೋಟುಗಳಲ್ಲಿ ಅಕ್ರಮವಾಗಿ ಮಾದಕವಸ್ತು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಇಂಡಿಯನ್ ಕೋಸ್ಟಲ್ ಸೆಕ್ಯುರಿಟಿ ಗಾರ್ಡ್ಸ್ ಸಮುದ್ರ ಮಧ್ಯದಲ್ಲೇ ಬೋಟನ್ನು ತಡೆದು ನಿಲ್ಲಿಸಿದ್ದಾರೆ.
ಕೋಸ್ಟ್ ಗಾರ್ಡ್ಸ್ ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಖಚ್‌ನ ಜಖಾವ್ ಬಂದರು ಬಳಿ ಬೋಟನ್ನು ವಶಕ್ಕೆ ಪಡೆದಿದ್ದಾರೆ. "ಗುಜರಾತಿನಲ್ಲಿ ಹೆರಾಯಿನ್ ಇಳಿಸಿದ ನಂತರ ಅಲ್ಲಿಂದ ಪಂಜಾಬ್‌ಗೆ ರಸ್ತೆ ಮಾರ್ಗವಾಗಿ ಸಾಗಿಸಲು ಯೋಜನೆ ರೂಪಿಸಲಾಗಿತ್ತು. ಮೂಲಗಳಿಂದ ನಮಗೆ ಮಾಹಿತಿ ಸಿಕ್ಕಿತು. ಪಾಕಿಸ್ತಾನದಿಂದ ಗುಜರಾತ್ ಕರಾವಳಿ ಭಾಗಕ್ಕೆ ಹೆರಾಯಿನ್ ತರುತ್ತಿದ್ದಾರೆ ಎಂಬ ಟಿಪ್ ಆಫ್ ಬಂದ ನಂತರ ವಿಶೇಷ ಕಾರ್ಯಾಚರಣೆಗೆ ತಂಡ ರಚಿಸಲಾಯಿತು. ಆರು ಪಾಕಿಸ್ತಾನೀಯರು ಮತ್ತು 40 ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದೇವೆ," ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸೋಮವಾರ ಪಂಜಾಬಿನ ಅಮೃತಸರದಲ್ಲಿ ಯುವತಿಯೊಬ್ಬಳು ಡ್ರಗ್ಸ್ ಸೇವಿಸಿ ನಿಲ್ಲಲೂ ಶಕ್ತಿಯಿಲ್ಲದೇ ತೂರಾಡುತ್ತಿದ್ದಾಳೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಂತರ ಎಚ್ಚೆತ್ತ ಪೊಲೀಸರು ವಿಶೇಷ ಕಾರ್ಯಾಚಾರಣೆ ನಡೆಸಿ ಅನುಮಾನಾಸ್ಪದವಾಗಿ ವ್ಯವಹರಿಸುತ್ತಿದ್ದ ಎಂಟು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಜತೆಗೆ ಇಬ್ಬರ ಬಳಿ ಮಾದಕವಸ್ತು ಪತ್ತೆಯಾಗಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ಪಂಜಾಬಿನಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಕುರಿತು ಇತ್ತೀಚೆಗಷ್ಟೇ ಮಾತನಾಡಿದ್ದರು.
ಇದನ್ನೂ ಓದಿ: ಡ್ರಗ್ಸ್ ನಶೆಯಲ್ಲಿ ನಿಲ್ಲಲೂ ಸಾಧ್ಯವಾಗದೇ ತೂರಾಡುತ್ತಿರುವ ಯುವತಿ ವಿಡಿಯೋ ವೈರಲ್
ಅಹ್ಮದಾಬಾದ್ ಭೇಟಿ ವೇಳೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಜ್ರಿವಾಲ್, "ಇತ್ತೀಚಿನ ದಿನಗಳಲ್ಲಿ ದೊಡ್ಡ ಕನ್‌ಸೈನ್‌ಮೆಂಟ್‌ಗಳು ಗುಜರಾತಿನ ಬಂದರೊಂದಕ್ಕೆ ಬರುತ್ತಿದೆ. ಅಲ್ಲಿಂದ ಪಂಜಾಬ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ. ಪಂಜಾಬ್ ಸರ್ಕಾರ ಮಾದಕವಸ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಯಲು ಪ್ರಯತ್ನಿಸುತ್ತಿದೆ. ಆದರೆ ಇಷ್ಟು ದೊಡ್ಡ ಮಟ್ಟದ ಡ್ರಗ್ಸ್ ಕನ್‌ಸೈನ್‌ಮೆಂಟ್ ಬಂದರಿಗೆ ಹೇಗೆ ಬರುತ್ತಿದೆ. ಇದರ ಹಿಂದೆ ಆಡಳಿತಾಂಗದ ಉನ್ನತ ಸ್ಥಾನದಲ್ಲಿ ಯಾರೋ ಇರಲೇಬೇಕು. ಇಲ್ಲದಿದ್ದರೆ ಇದು ಅಸಾಧ್ಯ," ಎಂದು ಕೇಜ್ರಿವಾಲ್ ಹೇಳಿದ್ದರು.
ಇದನ್ನೂ ಓದಿ: Sonali Phogat ನಿಗೂಢ ಸಾವು ಪ್ರಕರಣ: ಪಾರ್ಟಿಯಲ್ಲಿ ಡ್ರಗ್ಸ್ ನೀಡಿದ್ದ ಆರೋಪಿಗಳು
ಪಂಜಾಬಿನ ಮಾದಕ ವಸ್ತು ಜಾಲದ ಕುರಿತಾಗಿ ಉಡ್ತಾ ಪಂಜಾಬ್ ಎಂಬ ಹಿಂದಿ ಚಲನಚಿತ್ರ ಕೂಡ ಬಂದಿತ್ತು. ಇದರಲ್ಲಿ ಪಂಜಾಬಿನ ಡ್ರಗ್ಸ್ ಜಾಲದ ಆಳ ಮತ್ತು ಅಗಲದ ಪರಿಚಯ ನೀಡಲಾಗಿತ್ತು. ಜತೆಗೆ ಪಂಜಾಬಿನ ಯುವ ಜನತೆ ಹೇಗೆ ಮಾದಕವಸ್ತುಗಳಿಗೆ ದಾಸರಾಗುತ್ತಿದ್ದಾರೆ ಎಂಬುದೇ ಈ ಕತೆಯ ಜೀವಾಳವಾಗಿತ್ತು. ಪಂಜಾಬ್, ಚಂಡೀಗಢ, ಹರಿಯಾಣ ಮತ್ತು ಗೋವಾದಲ್ಲಿ ಮಾದಕ ವಸ್ತುಗಳ ಸೇವನೆ ಅತಿ ಹೆಚ್ಚಿದೆ ಎನ್ನುತ್ತವೆ ವರದಿಗಳು. ಗುಜರಾತಿನ ಬಂದರಿನಲ್ಲಿ ದೊಡ್ಡ ಡ್ರಗ್ಸ್ ಕನ್ಸೈನ್‌ಮೆಂಟ್ ಕಳೆದ ವರ್ಷ ವಶಪಡಿಸಿಕೊಳ್ಳಲಾಗಿತ್ತು. ಸಾವಿರ ಕೋಟಿಗೂ ಅಧಿಕ ಮೌಲ್ಯದ ಮಾದಕವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಆದರೆ ಇದಕ್ಕಿಂತ ದೊಡ್ಡಕನ್ಸೈನ್‌ಮೆಂಟ್ ಅದಾಗಲೇ ರಸ್ತೆ ಮಾರ್ಗವಾಗಿ ಹೊರಟು ಹೋಗಿತ್ತು ಎನ್ನಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ