ಹಿಮಾಚಲ: ಹಠಾತ್‌ ಭೂಕುಸಿತಕ್ಕೆ 13 ಮಂದಿ ಬಲಿ, ಹೆದ್ದಾರಿಯಲ್ಲಿ ಬೆಟ್ಟ ಕುಸಿದು ದುರಂತ!

By Suvarna NewsFirst Published Aug 12, 2021, 10:05 AM IST
Highlights

* ಅವಶೇಷಗಳಡಿ ಸುಮಾರು 30 ಜನ ಸಾವು-ಬದುಕಿನ ಹೋರಾಟ

* ಹೆದ್ದಾರಿಯಲ್ಲಿ ಸಾಗುವ ವಾಹನಗಳ ಮೇಲೆ ಬೆಟ್ಟಕುಸಿತ

* ರಾಜ್ಯ ವಿಪತ್ತು ನಿರ್ವಹಣಾ ತಂಡದಿಂದ 13 ಸಂತ್ರಸ್ತರ ರಕ್ಷಣೆ

* ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವು: ಮೋದಿ, ಶಾ ಭರವಸೆ

ಶಿಮ್ಲಾ: ಭಾರೀ ಭೂಕುಸಿತದ ದುರ್ಘಟನೆಯಲ್ಲಿ 11 ಮಂದಿ ಮೃತಪಟ್ಟು, ಸುಮಾರು 30 ಜನ ಭೂಕುಸಿತದ ಅವಶೇಷಗಳಡಿ ಸಿಲುಕಿದ ದುರಂತ ಘಟನೆ ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಬುಧವಾರ ಸಂಭವಿಸಿದೆ.

ರೆಕ್ಕಾಂಗ್‌ ಪಿಯೋ-ಶಿಮ್ಲಾ ಹೆದ್ದಾರಿಯಲ್ಲಿ ವಾಹನಗಳು ಚಲಿಸುತ್ತಿರುವಾಗಲೇ ಗುಡ್ಡ ಕುಸಿದುಬಿದ್ದಿದ್ದು, ಒಂದು ರಾಜ್ಯ ಸಾರಿಗೆ ಬಸ್‌, ಟ್ರಕ್‌ ಮತ್ತು ಕೆಲವು ಕಾರುಗಳು ಅವಶೇಷಗಳಡಿ ಸಿಲುಕಿಕೊಂಡಿವೆ. ಸರ್ಕಾರಿ ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.

ಈ ಘಟನೆ ಸಂಭವಿಸುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆಗೆ ಇಳಿದ ರಾಜ್ಯ ವಿಪತ್ತು ನಿರ್ವಹಣಾ ತಂಡವು ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದ 13 ಸಂತ್ರಸ್ತರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಕಳಿಸಿಕೊಟ್ಟಿದೆ.

ಇನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ ಅವರು, ಭೂಕುಸಿತ ಘಟನೆಯ ವಾಸ್ತವಾಂಶದ ಮಾಹಿತಿಯನ್ನು ಪಡೆದಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಹ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಅವಶೇಷಗಳಡಿ ಸಿಲುಕಿದವರನ್ನು ತ್ವರಿತವಾಗಿ ರಕ್ಷಣೆ ಮಾಡಿ ಅವರಿಗೆ ಚಿಕಿತ್ಸೆ ಕೊಡಿಸುವುದು ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

click me!