ಕಲಾಪ ಹಠಾತ್‌ ಮುಂದೂಡಿಕೆ: 86 ತಾಸಲ್ಲಿ ಕೇವಲ 21 ಗಂಟೆ ನಡೆದ ಲೋಕಸಭೆ!

By Kannadaprabha NewsFirst Published Aug 12, 2021, 8:25 AM IST
Highlights

* ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ

* ಸಂಸತ್‌ ಕಲಾಪ ಹಠಾತ್‌ ಮೊಟಕು

* 86 ತಾಸಲ್ಲಿ ಕೇವಲ 21 ಗಂಟೆ ನಡೆದ ಲೋಕಸಭೆ

* 78 ತಾಸಿನಲ್ಲಿ ಕೇವಲ 28 ಗಂಟೆ ನಡೆದ ರಾಜ್ಯಸಭೆ

ನವದೆಹಲಿ(ಆ.12): ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನದ ಕಲಾಪವು ಬುಧವಾರ, ನಿಗದಿತ ಸಮಯಕ್ಕಿಂತ 2 ದಿನ ಮೊದಲೇ ಮೊಟಕುಗೊಂಡಿದೆ. ಕಪಾಪಗಳನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಅಧಿವೇಶನ ಆರಂಭವಾದಾಗಿನಿಂದಲೂ ಪೆಗಾಸಿಸ್‌ ಬೇಹುಗಾರಿಕೆ, ರೈತ ಮಸೂದೆಗಳ ಕುರಿತು ಚರ್ಚೆ ನಡೆಸುವಂತೆ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಲೇ ಇದ್ದವು. ಇದರಿಂದಾಗಿ ಕಲಾಪಗಳು ಪದೇ ಪದೇ ಮುಂದೂಡಲ್ಪಡುತ್ತಿತ್ತು. ಇಡೀ ಸದನದ ಪ್ರಶ್ನೋತ್ತರ ಅವಧಿಯನ್ನು ಪ್ರತಿಭಟನೆಗಳು ನುಂಗಿ ಹಾಕಿದ್ದವು. ಇವುಗಳ ಮಧ್ಯೆಯೂ ಸಂವಿಧಾನ ತಿದ್ದುಪಡಿ ಮಸೂದೆ ಸೇರಿದಂತೆ 20 ಮಸೂದೆಗಳಿಗೆ ಸರ್ಕಾರ ಅಂಗೀಕಾರವನ್ನು ಪಡೆಯಿತು.

‘ಅಧಿವೇಶನದ ವೇಳೆ ವಿಪಕ್ಷಗಳ ನಡೆಯಿಂದ ತುಂಬಾ ಬೇಸರವಾಗಿದೆ. 17 ದಿನ ನಡೆದ ಕಲಾಪ ಒಂದು ದಿನವೂ ಶಾಂತಿಯಿಂದ ಕೂಡಿರಲಿಲ್ಲ. ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು ಸದನದ ನಡಾವಳಿಗೆ ತೋರಿದ ಅಗೌರವವಾಗಿತ್ತು. ಜುಲೈ 19ರಂದು ಆರಂಭವಾದ ಸದನದ ಒಟ್ಟು 96 ಗಂಟೆಗಳ ಕಾಲಾವಧಿಯಲ್ಲಿ ಕಲಾಪ ಕೇವಲ 21 ಗಂಟೆ ನಡೆಯಿತು. ಇದರ ಉತ್ಪಾದಕತೆ ಶೇ.22ರಷ್ಟಿತ್ತು’ ಎಂದು ಸ್ಪೀಕರ್‌ ಓಂ ಬಿರ್ಲಾ ಹೇಳಿದರು.

76 ಗಂಟೆಗಳ ಕಾಲ ನಡೆಯಬೇಕಿದ್ದ ರಾಜ್ಯಸಭೆಯ ಕಲಾಪ ಕೇವಲ 28 ಗಂಟೆ ನಡೆದಿದ್ದು ಉತ್ಪಾದಕತೆ ಶೇ.28ರಷ್ಟಿದೆ. ಈ ಸಮಯದಲ್ಲೇ 20 ಮಸೂದೆಗಳಿಗೆ ಅನುಮತಿ ನೀಡಲಾಗಿದೆ. ಬುಧವಾರ ಮಧ್ಯಾಹ್ನ ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಇತರ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದ ಮಸೂದೆಗೆ ಒಪ್ಪಿಗೆ ದೊರೆತ ನಂತರ ರಾಜ್ಯಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

click me!