
ಗೋವಿನ ಮೇಲಿನ ಭಾರತೀಯರ ಪ್ರೀತಿ ವಿಭಿನ್ನವಾದುದು, ಗೋವು ಮಾತ್ರವಲ್ಲ, ಮನೆಯ ಯಾವುದೇ ಸಾಕುಪ್ರಾಣಿ ಅನಾರೋಗ್ಯಕ್ಕೀಡಾದರು ಮನೆಮಂದಿಗೆ ಏನೋ ತಲ್ಲಣ ಉಂಟಾಗುತ್ತದೆ. ಅದು ಹುಷಾರಾಗುವವರೆಗೆ ಮನೆಮಂದಿ ಚಡಪಡಿಸುತ್ತಾರೆ ತಮಗೆ ಸಾಧ್ಯವಾದ ಔಷಧಿಗಳನ್ನು ನೀಡುತ್ತಾರೆ. ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಆದರೆ ಹಸುಗಳಿಗೆ ಅನಾರೋಗ್ಯವಾದರೆ ವೈದ್ಯರನ್ನೇ ಕರೆಸುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರು ಕೂಡ ಮನೆಗೆ ಬರಲು ಸಿದ್ಧರಿಲ್ಲದಾಗ ಅವುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಅನಿವಾರ್ಯತೆ ಎದುರಾಗುತ್ತದೆ. ಆದರೆ ಇಲ್ಲೊಂದು ಕಡೆ ಇಬ್ಬರು ಸೋದರರು ತಮ್ಮ ಪ್ರೀತಿಯ ಹಸುವಿಗೆ ಹುಷಾರು ತಪ್ಪಿದ ಹಿನ್ನೆಲೆ ಬೆನ್ನಮೇಲೆ ಹೊತ್ತು ಕಡಿದಾದ ರಸ್ತೆಯಲ್ಲಿ ಸಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಸುವನ್ನು ಬೆನ್ನಿಗೆ ಕಟ್ಟಿ ನಡೆದ ಸೋದರರು
ಸಾಮಾನ್ಯವಾಗಿ ಹಸುಗಳು 200 ಕೆಜಿಗಿಂತ ಹೆಚ್ಚು ತೂಕವಿರುತ್ತದೆ. ಹೀಗಾಗಿ ವಾಹನಗಳ ಹೊರತು ಅವುಗಳನ್ನು ಸಾಗಿಸಲು ಸಾಧ್ಯವಿಲ್ಲ. ಆದರೆ ಇಲ್ಲಿ ವಾಹನಹೋಗುವುದಕ್ಕೂ ಸರಿಯಾದ ಮಾರ್ಗವಿಲ್ಲ, ಬೆಟ್ಟ ಗುಡ್ಡ ಇಳಿಜಾರು ತಗ್ಗುಗಳಿಂದ ಕೂಡಿದ ರಸ್ತೆ ಕಡಿದಾದ ಮಣ್ಣಿನ ರಸ್ತೆ ಇದಾಗಿದೆ. ಆದರೂ ಈ ಸೋದರರು ಧೃತಿಗೆಡದೇ ಗ್ರಾಮಸ್ಥರ ನೆರವಿನಿಂದ 200 ಕೇಜಿ ತೂಕದ ಹಸುವನ್ನು ತಮ್ಮ ಬೆನ್ನಿಗೆ ಕಟ್ಟಿ ಸಾಗುತ್ತಿರುವುದು ಅನೇಕರನ್ನು ಭಾವುಕರನ್ನಾಗಿಸಿದೆ.
ಸಿರ್ಮೌರ್ ಜಿಲ್ಲೆಯ ಶಿಲ್ಲೈ ವಿಧಾನಸಭಾ ಕ್ಷೇತ್ರದ ಕ್ಯಾರಿ ಗುಂಡಾ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಿಮಾಚಲ ಪ್ರದೇಶ ಎಂದರೆ ರಸ್ತೆಗಳ ಬಗ್ಗೆ ಕೇಳಬೇಕಾಗಿಲ್ಲ, ಬೆಟ್ಟ ಪ್ರದೇಶ ಮತ್ತೊಂದು ಕಡೆ ಪ್ರತಾಪದಿಂದ ಕೂಡಿರುವುದರಿಂದ ಇಲ್ಲಿನ ಬಹುತೇಕ ರಸ್ತೆಗಳು ಕಡಿದಾಗಿದ್ದು, ಡಾಮರ್ ರಸ್ತೆಯಲ್ಲಿ ಸಾಗಬೇಕಾದರೂ ಬಹಳ ಅನುಭವವಿದ್ದರಷ್ಟೇ ಸಾಧ್ಯ. ಹೀಗಿರುವಾಗ ಇಲ್ಲಿನ ಹಳ್ಳಿಯೊಂದರ ಸೋದರರಿಬ್ಬರು ತಮ್ಮ ಸುಮಾರು 200 ಕೆಜಿ ತೂಕದ ಅನಾರೋಗ್ಯ ಪೀಡಿತ ಹಸುವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಕಡಿದಾದ ರಸ್ತೆಯಲ್ಲಿ ಹಸುವನ್ನು ಹೊತ್ತುಕೊಂಡು ಸೋದರರ ಪ್ರಯಾಣ
ಗ್ರಾಮದ ದೀಪ್ ರಾಮ್ ಶರ್ಮಾ ಅವರ ಹಸು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಹೀಗಾಗಿ ಹಸುವಿನ ಜೀವ ಉಳಿಸಲು, ದಯಾರಾಮ್ ಮತ್ತು ಲಾಲ್ ಸಿಂಗ್ ಎಂಬ ಇಬ್ಬರು ಸೋದರರು ಹಸುವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು, ಏಕೆಂದರೆ ಆಸ್ಪತ್ರೆಗೆ ತಲುಪುವ ಏಕೈಕ ಮಾರ್ಗ ಬೆಟ್ಟ ಗುಡ್ಡಗಳಿಂದ ಕೂಡಿದ ಕಡಿದಾದ ರಸ್ತೆಯಾಗಿತ್ತು. ಇಲ್ಲಿ ವಾಹನಗಳು ಸಾಗುವುದಕ್ಕೆ ಸಾಧ್ಯವಿರಲಿಲ್ಲ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಹೀಗಾಗಿ ನಡೆಯಲಾಗದ ಹಸುವನ್ನ ದಯಾರಾಮ್ ಮತ್ತು ಲಾಲ್ ಸಿಂಗ್ ಇತರ ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗೆ ತಲುಪಿಸುವುದಕ್ಕಾಗಿ ತಮ್ಮ ಬೆನ್ನಿಗೆ ಕಟ್ಟಿ ಸುಮಾರು 3 ಕಿ.ಮೀ. ದೂರ ಸಾಗಿಸಿದ್ದಾರೆ.. ಘಟನೆಯ ವಿಡಿಯೋ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಸುವನ್ನು ಉಳಿಸುವುದಕ್ಕಾಗಿ ಸೋದರರು ಪಟ್ಟ ಶ್ರಮವನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ @streetdogsofbombay ಪೇಜ್ ಪೋಸ್ಟ್ ಮಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ.
'ಇಬ್ಬರು ಸಹೋದರರು, ಒಂದು ಅನಾರೋಗ್ಯ ಪೀಡಿತ ಹಸು, ಇಳಿಜಾರಿನಿಂದ ಕೂಡಿದ ಕಡಿದಾದ ಪರ್ವತ ಪ್ರದೇಶದಲ್ಲಿ 3 ಕಿ.ಮೀ ಕಾಲ್ನಡಿಗೆಯ ಪ್ರಯಾಣ. ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಕ್ಯಾರಿ ಎಂಬ ದೂರದ ಹಳ್ಳಿಯಲ್ಲಿ, ಒಬ್ಬ ವೃದ್ಧ ಮತ್ತು ಅವನ ಸಹೋದರ 200 ಕೆಜಿ ತೂಕದ ಹಸುವನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಹೋದರು. ಏಕೆ? ಏಕೆಂದರೆ ಅದು ಅವರಿಗೆ ಬಹಳ ಮುಖ್ಯವಾಗಿತ್ತು. ಅವರು ಸಹಾಯಕ್ಕಾಗಿ ಕಾಯಲಿಲ್ಲ. ದೂರು ನೀಡಲಿಲ್ಲ. ಪ್ರೀತಿ ಮತ್ತು ಕರುಣೆ ಹೇಳಿದ್ದನ್ನು ಅವರು ಮಾಡಿದರು ಮತ್ತು ಅವರು ಅವಳ ಜೀವವನ್ನು ಉಳಿಸಿದರು. ಮಾನವೀಯತೆಯು ಹೀಗೇ ಕಾಣುತ್ತದೆ. ಗೌರವಿಸಿ. ನಮಸ್ಕಾರ ಮಾಡಿ. ಅವರಂತೆಯೇ ಇರಲು ಪ್ರಯತ್ನಿಸೋಣ' ಎಂದು ಬರೆಕೊಂಡಿದ್ದಾರೆ.
ನಾವು ಅವರ ಬಗ್ಗೆ ಬಹಳ ಹೆಮ್ಮೆ ಪಡಬೇಕು. ಮಾನವರು ಪ್ರಾಣಿಗಳನ್ನು ತೂಕ ಎತ್ತುವಿಕೆಗಾಗಿ ಬಳಸುತ್ತಿದ್ದರು. ಇಲ್ಲಿ ಅವರು ಪ್ರೀತಿಯಿಂದ ಪ್ರತಿಫಲ ನೀಡುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮನುಷ್ಯನೋರ್ವನ ಹೃದಯವನ್ನು ಪ್ರಾಣಿಗಳೊಂದಿಗಿನ ಆತನ ನಡವಳಿಕೆಯಿಂದ ನಿರ್ಣಯಿಸಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ