
ನವದೆಹಲಿ (ಫೆ. 22) ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ (Hijab) ಕುರಿತ ವಿವಾದಕ್ಕೆ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಎಲ್ಲಾ ಧರ್ಮದವರೂ ಶಿಕ್ಷಣ ಸಂಸ್ಥೆಗಳ ವಸ್ತ್ರಸಂಹಿತೆ ಪಾಲನೆ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಕೋರ್ಟ್(Court) ತೀರ್ಪು ಏನೇ ಬಂದರೂ ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ.
‘ಎಲ್ಲಾ ಧರ್ಮದ ಜನರೂ ಶಾಲೆಯ ಸಮವಸ್ತ್ರ ಒಪ್ಪಿಕೊಳ್ಳಬೇಕು. ಈ ವಿಷಯ ಸದ್ಯ ಕೋರ್ಟ್‌ನಲ್ಲಿದೆ. ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸುತ್ತಿದೆ. ಅದು ಏನೇ ನಿರ್ಧರಿಸಿದರೂ ಅದನ್ನು ಎಲ್ಲರೂ ಪಾಲಿಸಬೇಕು. ದೇಶ ಸಂವಿಧಾನದ ಮೇಲೆ ನಡೆಯುತ್ತದೆಯೋ ಅಥವಾ ಹುಚ್ಚಾಟದಲ್ಲಿ ನಡೆಯುತ್ತದೆಯೋ ಎಂಬುದು ನಿರ್ಧಾರವಾಗಬೇಕು. ನನ್ನ ವೈಯಕ್ತಿಕ ನಂಬಿಕೆ ಏನಿದೆಯೋ ಅದು ಕೋರ್ಟ್ ಈ ಕುರಿತು ನಿರ್ಧರಿಸುವವರೆಗೆ ಮಾತ್ರ ಇರುತ್ತದೆ. ಒಮ್ಮೆ ಕೋರ್ಟ್ ನಿರ್ಧಾರ ಕೈಗೊಂಡ ಮೇಲೆ ನಾನು ಹಾಗೂ ಎಲ್ಲರೂ ಆ ನಿರ್ಧಾರ ಒಪ್ಪಿಕೊಳ್ಳಬೇಕು. ಶಾಲೆಗಳು ನಿಗದಿಪಡಿಸಿದ ವಸ್ತ್ರಸಂಹಿತೆ ಹಾಗೂ ಸಮವಸ್ತ್ರವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅನುಸರಿಸಬೇಕು ಎಂದು ಈಗಲೂ ನಾನು ವೈಯಕ್ತಿಕವಾಗಿ ನಂಬಿದ್ದೇನೆ’ ಎಂದು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಹಿಜಾಬ್ ಗಿಂತ ಶಿಕ್ಷಣ ಮುಖ್ಯವೆಂದು ಕಾಲೇಜಿಗೆ ಬಂದರು
ಇದೇ ವೇಳೆ, ಹಿಜಾಬ್ ವಿವಾದದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ಜನ ಇಂತಹ ವಿಷಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರಬಹುದು. ಆದರೆ ಅವರ ಉದ್ದೇಶ ಈಡೇರುವುದಿಲ್ಲ ಎಂದಷ್ಟೇ ಹೇಳುತ್ತೇನೆ. ಕೋರ್ಟ್‌ನಿಂದ ಬರುವ ತೀರ್ಮಾನವನ್ನು ಭಾರತದ ಜನರು ಒಪ್ಪಿಕೊಳ್ಳುತ್ತಾರೆ’ ಎಂದು ಹೇಳಿದರು.
ಕಾಲೇಜಿನ ಕಡೆ ಬಾರದ ವಿದ್ಯಾರ್ಥಿನಿಯರು: ಹಿಜಾಬ್ ವಿವಾದ ಹುಟ್ಟಿಕೊಂಡ (Udupi) ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್‌ನಲ್ಲಿ 6 ಮಂದಿ ಹಿಜಾಬ್ ಹೋರಾಟಗಾರ್ತಿಯರ ಹಿಜಾಬ್ ಪರ ಹೋರಾಟ ಮುಂದುವರಿದಿದೆ. ಈಗಾಗಲೇ ಹೈಕೋರ್ಟ್ ಮೆಟ್ಟಿಲೇರಿರುವ ಅವರು, ಸೋಮವಾರ ತರಗತಿಗಳಿಗೆ ಗೈರು ಹಾಜರಾಗಿದ್ದರು.
ಅವರಲ್ಲಿ 3 ವಿದ್ಯಾರ್ಥಿನಿಯರು ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾಗಿದ್ದು, ಅವರಿಗೆ ಪ್ರಸ್ತುತ ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದು, ಹಿಜಾಬ್‌ಗಾಗಿ ಅವರು ಅವರು ಪರೀಕ್ಷೆಗಳನ್ನೂ ಬಹಿಷ್ಕರಿಸಿದ್ದಾರೆ. ಉಳಿದ ಮೂವರು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾಗಿದ್ದು ಅವರು ಕಾಲೇಜಿಗೆ ಬಂದಿಲ್ಲ.
ಉಳಿದಂತೆ ಜಿಲ್ಲೆಯ ಬೇರೆ ಕಾಲೇಜುಗಳಲ್ಲಿ ಹಿಜಾಬ್ ಕಾರಣಕ್ಕೆ ಯಾರೂ ತರಗತಿ ಅಥವಾ ಪರೀಕ್ಷೆ ಬಹಿಷ್ಕರಿಸಿಲ್ಲ. ಜಿಲ್ಲೆಯಲ್ಲಿ ಸೋಮವಾರ 23 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ ಒಟ್ಟು 14 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪ.ಪೂ. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಹಿಜಾಬ್ ಧರಿಸಿ ಬಂದ ಅಥವಾ ಪ್ರತಿಭಟನೆಯ ಯಾವುದೇ ಘಟನೆಗಳು ಜಿಲ್ಲೆಯಲ್ಲಿ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಹಿಜಾಬ್ ಬೆಂಬಲಿಸಿ ಉಪವಾಸ ಸತ್ಯಾಗ್ರಹ : ಹಿಜಾಬ್ ವಿಚಾರದಲ್ಲಿ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ಧೈರ್ಯ ನೀಡುವ ಉದ್ದೇಶದಿಂದ ಶೀಘ್ರದಲ್ಲೇ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಧರ್ಮಗಳಲ್ಲಿ ಇರುವಂತೆ ಹಿಜಾಬ್ ಕೂಡ ಅವರ ಸಂಸ್ಕೃತಿ ಭಾಗ. ಮುಸ್ಲಿಂ ಹೆಣ್ಣು ಮಕ್ಕಳು ಇತ್ತೀಚಿನ ವರ್ಷಗಳಿಂದ ಶಿಕ್ಷಣಕ್ಕೆ ತೆರೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಇನ್ನಾದರೂ ಇಂಥ ವಿಚಾರಗಳಿಂದ ಲಾಭ ಪಡೆಯುವ ಯೋಚನೆ ಬಿಟ್ಟು ಬಿಡಬೇಕು. ಹಾಗಾಗಿ ಮೇಕೆದಾಟು ಪಾದಯಾತ್ರೆ ಮುಗಿದ ಬಳಿಕ ಮಾ.7ರ ನಂತರ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಲಾಗಿದೆ. ಶಾಲೆ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡುವವರೆಗೆ ಉಪವಾಸ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಉಪವಾಸ ಸತ್ಯಾಗ್ರಹ ಆರಂಭಿಸುವ ದಿನಾಂಕ, ಸ್ಥಳವನ್ನು ಶೀಘ್ರದಲ್ಲೇ ನಿಗದಿ ಮಾಡಲಾಗುವುದು. ಅನೇಕ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಈ ಸತ್ಯಾಗ್ರಹ ನಡೆಸಲಾಗುವುದು ಎಂದು ಪಿ.ವಿ. ಮೋಹನ್ ಹೇಳಿದರು. ಕಾಂಗ್ರೆಸ್ ಮುಖಂಡರಾದ ಶಾಹುಲ್ ಹಮೀದ್, ಶುಭೋದಯ ಆಳ್ವ, ಗಣೇಶ್ ಪೂಜಾರಿ, ಪದ್ಮಪ್ರಸಾದ್ ಜೈನ್, ನಝೀರ್ ಬಜಾಲ್ ಮತ್ತಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ